ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕು- ಎಂ. ಕನಗವಲ್ಲಿ.

ಕೊಪ್ಪಳ, ಡಿ.೨೨ (ಕ ವಾ)  ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಲ್ಲಿ ನೋಂದಾವಣೆ ಆಗಿರುವ ಫಲಾನುಭವಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ವಿನಾಕಾರಣ ವಿಳಂಬ ಮಾಡದೆ, ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಸ್ಪತ್ರೆಗಳು ಹಾಗೂ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
     ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ವ್ಯಾಪ್ತಿಗೆ ಜಿಲ್ಲೆಯ ೦೮ ಖಾಸಗಿ ಆಸ್ಪತ್ರೆಗಳು ಹಾಗೂ ಆಯಾ ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ.  ಗಂಗಾವತಿಯಲ್ಲಿ ಖಾಸಗಿ ೦೫ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿ ಒಟ್ಟು ೦೬ ಆಸ್ಪತ್ರೆಗಳು.  ಕೊಪ್ಪಳ ತಾಲೂಕಿನಲ್ಲಿ ೦೨ ಖಾಸಗಿ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿ ಒಟ್ಟು ೦೩ ಆಸ್ಪತ್ರೆಗಳು.  ಯಲಬುರ್ಗಾದ ತಾಲೂಕು ಆಸ್ಪತ್ರೆ.  ಮತ್ತು ಕುಷ್ಟಗಿಯಲ್ಲಿ ಖಾಸಗಿ ಮತ್ತು ಸರ್ಕಾರದ ತಲಾ ಒಂದು ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೨ ಆಸ್ಪತ್ರೆಗಳು ಯೋಜನೆಯ ವ್ಯಾಪ್ತಿಯಲ್ಲಿವೆ.  ಯೋಜನೆಯ ವ್ಯಾಪ್ತಿಗೆ ಅರ್ಹವಿರುವ ಖಾಸಗಿ ಆಸ್ಪತ್ರೆಗಳು ಸೇರ ಬಯಸಿದಲ್ಲಿ, ವಿಳಂಬ ಮಾಡದೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳ ದೂರು : ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅವರಿಗೆ ವಹಿಸಲಾಗಿದೆ.  ಕೆಲವು ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಈ ಯೋಜನೆಯಡಿ ದರವನ್ನು ನಿಗದಿಪಡಿಸಿದ್ದರೂ, ಇನ್ಸೂರೆನ್ಸ್ ಕಂಪನಿಯವರು ನಿಗದಿತ ದರದಲ್ಲೂ ಮೊತ್ತವನ್ನು ಕಡಿತಗೊಳಿಸಿ, ಆಸ್ಪತ್ರೆಗಳಿಗೆ ಕಡಿಮೆ ಹಣ ಪಾವತಿಸುತ್ತಿದ್ದಾರೆ.  ಕಡಿತಗೊಳಿಸಿದ ಕಾರಣವನ್ನೂ ಸಹ ತಿಳಿಸುತ್ತಿಲ್ಲ.  ಫಲಾನುಭವಿ ರೋಗಿಗಳ ಚಿಕಿತ್ಸೆಗೆ ಅನುಮೋದನೆ ನೀಡಲೂ ಸಹ ಇನ್ಸೂರೆನ್ಸ್ ಕಂಪನಿಯವರು ವಿನಾಕಾರಣ ವಿಳಂಬ ಮಾಡುತ್ತಾರೆ.  ದೂರವಾಣಿ ಕರೆ ಮಾಡಿದಾಗಲೂ, ಒಬ್ಬರ ಮೇಲೊಬ್ಬರು ಹಾಕುತ್ತಾ ಅನಗತ್ಯ ಕಾಲಹರಣ ಮಾಡುತ್ತಿದ್ದು, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ರೋಗಿಗಳು ಆಸ್ಪತ್ರೆಯವರನ್ನೆ ಹೊಣೆಗಾರರನ್ನಾಗಿಸುತ್ತಾರೆ.  ಇನ್ನು ಚಿಕಿತ್ಸೆ ನೀಡಿದ ಪ್ರಕರಣಗಳಿಗೂ ಸಹ ನಿಗದಿತ ಅವಧಿಯಲ್ಲಿ ಮೊತ್ತವನ್ನು ಪಾವತಿಸುತ್ತಿಲ್ಲ ಎಂದು ಕೆಲ ಆಸ್ಪತ್ರೆಯವರು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯವರ ಇಂತಹ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.  ಅನಗತ್ಯ ವಿಳಂಬ ಧೋರಣೆ ಅಥವಾ ಆಸ್ಪತ್ರೆಯವರ ದೂರವಾಣಿ ಕರೆಗಳಿಗೆ ಕಂಪನಿಯವರು ಸ್ಪಂದಿಸದಿರುವ ಪ್ರಕರಣಗಳು ಮರುಕಳಿಸಿದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನಜಾಗೃತಿ ಮೂಡಿಸಿ : ಜಿಲ್ಲೆಯಲ್ಲಿ ಈ ಯೋಜನೆಗೆ ೨. ೯೨ ಲಕ್ಷ ಕುಟುಂಬಗಳ ನೋಂದಣಿ ಗುರಿಯ ಬದಲಿಗೆ ಕೇವಲ ೧. ೮ ಲಕ್ಷ ಕುಟುಂಬಗಳನ್ನು ಮಾತ್ರ ನೋಂದಾಯಿಸಲಾಗಿದೆ.  ನೋಂದಾಯಿತರ ಪೈಕಿ ಈವರೆಗೆ ಕೇವಲ ೫೭೬ ಜನರಿಗೆ ಮಾತ್ರ ಯೋಜನೆಯಡಿ ಚಿಕಿತ್ಸೆ ದೊರೆತಿರುವುದನ್ನು ನೋಡಿದರೆ, ನಿಗದಿತಕಂಪನಿಯವರು, ಜನಜಾಗೃತಿ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವುದು ಕಂಡುಬರುತ್ತದೆ. 
ನೀತಿ ಸಂಹಿತೆಯ ನಂತರದ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಯೋಜನೆಯ ಸವಿವರ
ಮಾಹಿತಿಯುಳ್ಳ ಗೋಡೆ ಬರಹವನ್ನು ಬರೆಸಬೇಕು ಎಂದು ಜಿಲ್ಲಾಧಿಕಾರಿಗಳು ಇನ್ಸೂರೆನ್ಸ್
ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಕಾರ್ಡ್ ವಿತರಿಸಿ : ಚಳ್ಳಾರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲದಿರುವುದರ ಬಗ್ಗೆ ದೂರು ಕೇಳಿ ಬಂದಿದ್ದು, ಕೂಡಲೆ ಇದನ್ನು ಪರಿಶೀಲಿಸಿ, ೧೦ ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್ ಸೇರಿದಂತೆ ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಹಾಗೂ ವಿಡಾಲ್ ಟಿಪಿಎ ಪ್ರೈ.ಲಿ. ಕಂಪನಿಯ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ಖಾಸತಿ ಆಸ್ಪತ್ರೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Please follow and like us:
error