You are here
Home > Koppal News > ನಕ್ಸಲೀಯರಿಂದ ಜಿಲ್ಲಾಧಿಕಾರಿ ಅಪಹರಣ: ಭದ್ರತಾ ಸಿಬ್ಬಂದಿ ಹತ್ಯೆ

ನಕ್ಸಲೀಯರಿಂದ ಜಿಲ್ಲಾಧಿಕಾರಿ ಅಪಹರಣ: ಭದ್ರತಾ ಸಿಬ್ಬಂದಿ ಹತ್ಯೆ

ರಾಯ್‌ಪುರ (ಪಿಟಿಐ):ಒಡಿಶಾದಲ್ಲಿ ತಾವು ಅಪಹರಿಸಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಯು ಡೋಲಾಯಮಾನ ಸ್ಥಿತಿಯಲ್ಲಿ ಇರುವಾಗಲೇ,ಛತ್ತೀಸ್‌ಗಡದ ಸುಕ್ಮಾ ಜಿಲ್ಲಾಧಿಕಾರಿಯನ್ನು ಹಾಡಹಗಲೇ ಅಪಹರಿಸುವ ಮೂಲಕ ನಕ್ಸಲೀಯರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ.
ಸ್ಥಳೀಯರನ್ನು ನಕ್ಸಲ್ ಸಿದ್ಧಾಂತದ ಪ್ರಭಾವದಿಂದ ಹೊರ ತರುವ ಪ್ರಯತ್ನವಾಗಿ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ (32)ಅವರು ಶನಿವಾರ ಮಧ್ಯಾಹ್ನ ಸಭೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ನಕ್ಸಲೀಯರು ಪ್ರಮುಖ ಅಧಿಕಾರಿಯನ್ನು ಅಪಹರಿಸಿದ ಎರಡನೇ ಪ್ರಕರಣ ಇದಾಗಿದೆ.ಕಳೆದ ವರ್ಷ ಒಡಿಶಾದ ಮಾಲ್ಕನ್‌ಗಿರಿಯ ಜಿಲ್ಲಾಧಿಕಾರಿ ಹಾಗೂ ಕರ್ನಾಟಕದ ಅಳಿಯ ಆರ್.ವಿನೀಲ್ ಕೃಷ್ಣ ಮತ್ತು ಕಿರಿಯ ಎಂಜಿನಿಯರ್ ಒಬ್ಬರನ್ನು ಬಂಡುಕೋರರು ಅಪಹರಿಸಿದ್ದರು.ಪ್ರಮುಖ ಮಾವೊವಾದಿ ನಾಯಕರಾದ ಪ್ರಸಾದಂ,ಪದ್ಮಾ ಹಾಗೂ ಈಶ್ವರಿ ಅವರನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದೂ ಸೇರಿದಂತೆ 14 ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಒಪ್ಪಿದ ಬಳಿಕ ಅಪಹೃತರನ್ನು ಬಿಡುಗಡೆ ಮಾಡಲಾಗಿತ್ತು.
2006ರ ತಂಡದ ಐಎಎಸ್ ಅಧಿಕಾರಿ ಮೆನನ್, ರಾಜ್ಯ ಸರ್ಕಾರ ಹಮ್ಮಿಕೊಂಡಿರುವ `ಗ್ರಾಮ್ ಸೂರಜ್`ಅಭಿಯಾನದ ಅಂಗವಾಗಿ ಕೇರಳಪಾಲ್ ಪ್ರದೇಶದ ಮಜಿಪುರ ಗ್ರಾಮದಲ್ಲಿ ಸಭೆ ನಡೆಸುತ್ತಿದ್ದರು.ಆಗ ಅಲ್ಲಿಗೆ ಮೋಟಾರ್‌ಬೈಕ್‌ಗಳಲ್ಲಿ ಬಂದ ಸುಮಾರು 20ನಕ್ಸಲೀಯರು ಮೊದಲು ಜಿಲ್ಲಾಧಿಕಾರಿಯ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿದರು. ನಂತರದಲ್ಲಿ ಮೆನನ್ ಅವರನ್ನು ಸನಿಹದ ಅರಣ್ಯ ಪ್ರದೇಶಕ್ಕೆ ಕರೆದೊಯ್ದರು`ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ರಾಮ್ ನಿವಾಸ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಶೋಧ ಕಾರ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಶಾಂಡಿಲ್ಯ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಧಾವಿಸಿದ್ದು,ಮೆನನ್ ಅವರ ರಕ್ಷಣೆಗೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.
`ಮೆನನ್ ಬಿಡುಗಡೆಗೆ ಎಲ್ಲ ಪ್ರಯತ್ನ ಮಾಡಲಾಗುತ್ತದೆ.ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ` ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.
ಕೇಂದ್ರದ ನೆರವು:ಸಿಂಗ್ ಅವರೊಂದಿಗೆ ಮಾತನಾಡಿರುವ ಗೃಹ ಸಚಿವ ಪಿ.ಚಿದಂಬರಂ, ಕೇಂದ್ರದಿಂದ ನೆರವು ನೀಡುವ ಭರವಸೆ ನೀಡಿದ್ದಾರೆ.
`ನಕ್ಸಲೀಯರು ಸರ್ಕಾರವನ್ನು ಸಂಪರ್ಕಿಸಿಲ್ಲ.ಅಲ್ಲದೆ ಈವರೆಗೆ ಯಾವುದೇ ಬೇಡಿಕೆಯನ್ನೂ ಮುಂದಿಟ್ಟಿಲ್ಲ` ಎಂದು ರಾಮ್ ನಿವಾಸ್ ಹೇಳಿದ್ದಾರೆ.
ನೂತನವಾಗಿ ರಚನೆಯಾಗಿರುವ ಸುಕ್ಮಾ ಜಿಲ್ಲೆಗೆ ಮೆನನ್ ಮೊದಲ ಜಿಲ್ಲಾಧಿಕಾರಿಯಾಗ್ದ್ದಿದು, ಅಭಿವೃದ್ಧಿ ಕಾರ್ಯಗಳಲ್ಲಿ ಚುರುಕುತನ ತೋರಿಸುವ ಮೂಲಕ ಜನಪ್ರಿಯರಾಗಿದ್ದಾರೆ.ಇತ್ತೀಚೆಗೆ ಒಡಿಶಾದಲ್ಲಿ ಇಬ್ಬರು ಇಟಲಿ ಪ್ರಜೆಗಳನ್ನು ನಕ್ಸಲೀಯರು ಸುಮಾರು ಒಂದು ತಿಂಗಳ ಕಾಲ ಒತ್ತೆ ಇರಿಸಿಕೊಂಡಿದ್ದರು.ಜೈಲಿನಲ್ಲಿರುವ ಕೆಲವು ನಕ್ಸಲೀಯರನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿದ ಬಳಿಕ ಅಪಹೃತರನ್ನು ಬಿಡುಗಡೆ ಮಾಡಲಾಗಿತ್ತು.
ಮೊದಲ ಘಟನೆ:`ರಾಜ್ಯದಲ್ಲಿ ಇದೇ ಮೊದಲ ಬಾರಿ ಇಂಥ ಘಟನೆ ನಡೆದಿದೆ.ಮೆನನ್ ಅವರ ರಕ್ಷಣೆಗೆ ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ`ಎಂದು   ಛತ್ತೀಸ್‌ಗಡ ಡಿಜಿಪಿ ಅನಿಲ್ ಎಂ. ನವನಿ ಹೇಳಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿದ ಕೆಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್,`ಅಗತ್ಯ ಬಿದ್ದರೆ ಕೇಂದ್ರದಿಂದ ಹೆಚ್ಚುವರಿ ಪಡೆಗಳನ್ನು ಒದಗಿಸುತ್ತೇವೆ`ಎಂದು ಆಶ್ವಾಸನೆ ನೀಡಿದ್ದಾರೆ.

Leave a Reply

Top