ಮೇಧಾ ಪಾಟ್ಕರ್‌ಗೆ ‘ಬಸವ ಪ್ರಶಸ್ತಿ’

 : ಶಿಶುನಾಳ ಶರೀಫ್ ಪ್ರಶಸ್ತಿಗೆ ಟಿ.ವಿ.ರಾಜು, ಬಿ.ಕೆ. ಸುಮಿತ್ರಾ ಆಯ್ಕೆ
Medhapatkar  ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ರನ್ನು ರಾಜ್ಯ ಸರಕಾರ ಕೊಡ-ಮಾಡುವ 2010ನೆ ಸಾಲಿನ ಪ್ರತಿಷ್ಠಿತ ‘ಬಸವ ಪ್ರಶಸ್ತಿ’ಗೆ ಆಯ್ಕೆ ವಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2009 ಮತ್ತು 2010ನೆ ಸಾಲಿನ ಬಸವ, ಅಮರಶಿಲ್ಪಿ ಜಕಣಾಚಾರಿ, ಸಂತ ಶಿಶುನಾಳ ಶರೀಫ ಪ್ರಶಸ್ತಿಗಳನ್ನು ಪ್ರಕಟಿಸಿದರು. ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಮೇಧಾ ಪಾಟ್ಕರ್‌ರನ್ನು ‘ಬಸವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದವರು ಹೇಳಿದರು.
‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಗೆ 2009ನೆ ಸಾಲಿಗೆ ತುಮಕೂರಿನ ಗಾಯಕ ಟಿ.ವಿ. ರಾಜು, 2010ನೆ ಸಾಲಿಗೆ ಗಾಯಕಿ ಬಿ.ಕೆ. ಸುಮಿತ್ರಾರನ್ನು ಆಯ್ಕೆ ಮಾಡಲಾಗಿದೆ. ‘ಶಿಲ್ಪಿಜಕಣಾಚಾರಿ ಪ್ರಶಸ್ತಿ’ ಗೆ 2009ನೆ ಸಾಲಿನಲ್ಲಿ ಮೈಸೂರು ಜಿಲ್ಲೆ ಕೆರೆನಲ್ಲಿ ಗ್ರಾಮದ ಶಿಲ್ಪಿಕೆ.ಸಿ.ಪುಟ್ಟಣ್ಣಾಚಾರ್, 2010ನೆ ಸಾಲಿಗೆ ವೆಂಕಟಾಚಲಪತಿಯ ವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರಜೋಳ ಮಾಹಿತಿ ನೀಡಿದರು.
‘ಬಸವ ಪ್ರಶಸ್ತಿ’ 10 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಜಕಣಾಚಾರಿ ಮತ್ತು ಶಿಶುನಾಳ ಶರೀಫ ಪ್ರಶಸ್ತಿಗಳು ತಲಾ 3 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತವೆ ಎಂದು ತಿಳಿಸಿದ ಅವರು, ಮೂರು ಪ್ರಶಸ್ತಿಗೆ ಆಯ್ಕೆ ಸಮಿತಿ ಪರಿಶೀಲಿಸಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿದೆ. ಬಸವ ಪ್ರಶಸ್ತಿಗಳಿಗೆ ಡಾ. ಎಂ.ಎಂ. ಕಲಬುರ್ಗಿ, ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಗೆ ಮೈಸೂರಿನ ವೀರಭದ್ರಾಚಾರ್ ಹಾಗೂ ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಶಿವಮೊಗ್ಗ ಸುಬ್ಬಣ್ಣ ನೇತೃತ್ವದ ಆಯ್ಕೆ ಸಮಿತಿಗಳನ್ನು ರಚನೆ ಮಾಡಲಾಗಿತ್ತು ಎಂದು ಹೇಳಿದರು.
ಡಿ.4ರಂದು ಭೈರಪ್ಪಗೆ ಸನ್ಮಾನ: ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಎಸ್.ಎಲ್.ಭೈರಪ್ಪರವರನ್ನು ಡಿ.4ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಸರಕಾರದ ವತಿಯಿಂದ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಅವರಿಗೆ 5 ಲಕ್ಷ ರೂ.ಗೌರವ ಧನ ನೀಡಲಾಗುವುದು ಎಂದು ಗೋವಿಂದ ಕಾರಜೋಳ ವಿವರ ನೀಡಿದರು
Please follow and like us:
error