ಮಕ್ಕಳ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಬೇಕು- ಯೋಗಿಶ್ ಮಾಸ್ಟರ್

ಕೊಪ್ಪಳ :  ಮಕ್ಕಳಲ್ಲಿ ಪ್ರತಿಭೆ ಎನ್ನುವುದು ಸುಪ್ತವಾಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕರು ಮಾಡಬೇಕು. ಅವರಿಗೆ ಅವಕಾಶ ಸಿಕ್ಕರೆ ಅತ್ಯುತ್ತಮವಾದದ್ದನ್ನು ಸಾಧಿಸುತ್ತಾರೆ.  ಓದಿನ ಜೊತೆಗೆ ಮಕ್ಕಳಿಗೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಬರಹಗಾರ,ರಂಗಕರ್ಮಿ ಯೋಗೆಶ್ ಮಾಸ್ಟರ್ ಹೇಳಿದರು. ಅವರು ಕಿನ್ನಾಳ ಗ್ರಾಮದಲ್ಲಿ ನಡೆದ ಸೇವಾ ವಿದ್ಯಾಲಯದ ವಾರ್ಷಿಕೋತ್ಸವ , ವಿಶ್ವ ಮಹಿಳಾ ದಿನಾಚರಣೆ ಹಾಗೂ ಸೇವಾಶ್ರೀ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.  ಮಕ್ಕಳಿಗೆ ಕೇವಲ ಮಾರ್ಕ್ಸ ತರಲು ಒತ್ತಡ ತರದೆ ಅವರ ಸುಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶ, ವೇದಿಕೆ ಒದಗಿಸಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ ಅದು ಅವಕಾಶಕ್ಕಾಗಿ ಕಾಯುತ್ತದೆ.  ಪ್ರತಿಭೆಯನ್ನು ಗುರುತಿಸುವ ಕೆಲಸ ಶಿಕ್ಷಕರು ಮತ್ತು ಪೋಷಕರು ಮಾಡಬೇಕಿದೆ ಎಂದು ಹೇಳಿದರು.

ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ ಡಾ.ರಜಾಕ್ ಉಸ್ತಾದ್  ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸುಲಭವಲ್ಲ.  ಶಿಕ್ಷಣ ಮಕ್ಕಳಿಗೆ ಸಮಾಜಕ್ಕೆ ಉಪಯೋಗವಾಗುವಂತೆ ಇರಬೇಕು. ಮಕ್ಕಳು ಶಿಕ್ಷಣ ಪಡೆದ ನಂತರ ಸಮಾಜಕ್ಕೆ ಕೊಡುಗೆ ನೀಡಬೇಕು  ಎನ್ನುವ ಮನಸ್ಥಿತಿ ಇಟ್ಟುಕೊಳ್ಳುವಂತಾಗಬೇಕು. ಅಬ್ದುಲ್ ಕಲಾಂರ ಕನಸಿನಂತಹ ಶಿಕ್ಷಣ ಮಕ್ಕಳಿಗೆ ನೀಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ತೊಗಲುಗೊಂಬೆಯಾಟದ ಭೀಮವ್ವ ಶಿಳ್ಳಿಕ್ಯಾತರ, ಬರಹಗಾರ, ಹೋರಾಟಗಾರ ಯೋಗಿಶ್ ಮಾಸ್ಟರ್ , ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹೋರಾಟಗಾರ ಡಾ.ರಜಾಕ್ ಉಸ್ತಾದ್, ಹಿರಿಯ ವಕೀಲೆ ಶ್ರೀಮತಿ ಸಂದ್ಯಾ ಮಾದಿನೂರ, ಹಿರಿಯ ಪತ್ರಕರ್ತ ಹೆಚ್.ಎಂ.ಶರೀಪನವರ್ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಓಲೇಕಾರ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಗೆ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಬನ್ನಿಕೊಪ್ಪ ವಹಿಸಿದ್ದರು. ಕಾರ‍್ಯಕ್ರಮದಲ್ಲಿ ವಿರೇಶ ತಾವರಗೇರಾ,  ಹೀರಾಳ ಶರೀಪಸಾಬ, ಶಾಂತಕುಮಾರ್, ಆರ್.ಎಚ್.ಅತ್ತನೂರ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು. ತೊಗಲುಗೊಂಬೆಯಾಟದ ಪ್ರದರ್ಶನವನ್ನೂ ಸಹ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.  ಪ್ರಾಸ್ತಾವಿಕವಾಗಿ ಸಂಸ್ಥೆಯ ಅಧ್ಯಕ್ಷ ಎಚ್.ವಿ.ರಾಜಾಬಕ್ಷಿ ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಶಾಲೆಯ ಶಿಕ್ಷಕರು ನಡೆಸಿಕೊಟ್ಟರು. 
Please follow and like us:
error