fbpx

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಲ್ಲಿ ಸಂರಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದು

 ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಸಂರಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಸಾಕ್ಷಿದಾರ ಮೊಗಸಾಲೆ ಕಟ್ಟಡದ ಆವರಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ ಕುರಿತು ಸಂರಕ್ಷಣಾಧಿಕಾರಿಗಳಿಗೆ ಕಾನೂನು ಅರಿವು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.   
ಈ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮದಡಿಯಲ್ಲಿ ಪ್ರಕರಣಗಳು ದಾಖಲಾದಲ್ಲಿ ೬೦ ದಿನಗಳ ಒಳಗಾಗಿ ಪ್ರಕರಣಗಳನ್ನು ಬಗೆಹರಿಸಲಾಗುವುದು. ಅಲ್ಲದೇ ತಕ್ಷಣದಲ್ಲಿ ನೊಂದ ಮಹಿಳೆಗೆ ಅಗತ್ಯ ನೆರವನ್ನು ನೀಡಲು ನಾವುಗಳು ಬದ್ಧರಾಗಿದ್ದೇವೆಂದು ಈ ಸಂದರ್ಭದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಕಾಯ್ದೆಯನ್ನು ಸಮುದಾಯದಲ್ಲಿ ಪ್ರಚುರಪಡಿಸಬೇಕೆಂದು ಸೂಚಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ವಹಿಸಿದ್ದರು. ವೇದಿಕೆಯಲ್ಲಿ ಜೆಎಂಎಫ್‌ಸಿ ಹಾಗೂ ಸಿವಿಲ್ ಜಡ್ಜ್‌ನ ಕಾವೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಜಗದೀಶ ಹೆಚ್.ಪಿ. ಉಪಸ್ಥಿತರಿದ್ದರು. 
ಮೊದಲ ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ ಅವರು ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅವರು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯ ಕುರಿತು ಉಪನ್ಯಾಸ ನೀಡಿದರು. ಇನ್ನೋರ್ವ ವಕೀಲರಾದ ಕಾಳಮ್ಮ ಪತ್ತಾರ ಅವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಈ ವಿಷಯವಾಗಿ ಉಪನ್ಯಾಸ ನೀಡಿದರು.  
ಈ ಕಾರ್ಯಾಗಾರದಲ್ಲಿ ತಾಲೂಕ ಸಂರಕ್ಷಣಾಧಿಕಾರಿಗಳಾದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಾಂತ್ವನ, ಸ್ವಾಧಾರ ಕೇಂದ್ರಗಳ ಸಮಾಲೋಚಕರು, ಸೇವಾ ಸಂಸ್ಥೆ ಪದಾಧಿಕಾರಿಗಳು, ಸಮಾಜ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.   
Please follow and like us:
error

Leave a Reply

error: Content is protected !!