fbpx

ಉಪ್ಪಿ-೨ “ಯೋಚ್ನೆ” ಮಾಡ್ದೆ ಒಮ್ಮೆ ನೋಡಿ “ಬಿಡಿ”

ಇದ್ಯಾವ ಸೀಮೆ ಸಿನಿಮಾ ಮಾರಾಯ. ಒಂಚೂರು ಅರ್ಥ ಆಗ್ಲಿಲ್ಲ. ನೀನಗೇನಾಯ್ತು? ನಾನ್ಯಾಕ್ ಮತ್ತೇ ಹಂಗೆ? ಏನ್ ಮಾಡಿದ್ರೆ ಲಕ್ಷ್ಮಿ ಬರ್‍ತಾಳೆ? ಲಕ್ಷ್ಮಿನೇ ಖುಷಿನಾ? ಅವನು ಹಿಂದೆ ಏನಾಗಿದ್ದ? ಈಗ ಏನಾದ?…
         ಇವು ಉಪ್ಪಿ-೨ ಸಿನಿಮಾ ನೋಡಿ ಹೊರಬಂದ ಮೇಲೆ ನೋಡುಗನ ತಲೆಯಲ್ಲಿರುವ ಪ್ರಶ್ನೆರೂಪದ ಹುಳಗಳು. ಸಿನಿಮಾದ ಅಲ್ಲಲ್ಲಿ ಉಪ್ಪಿ, `ಪ್ರಶ್ನೆ ಕೇಳೋದು ಯೋಚ್ನೆನಾ ಹೆಚ್ಚಿಸುತ್ತೆ. ಯೋಚ್ನೆಗಳು ದುರಾಸೆ ತರಿಸುತ್ವೆ. ಉತ್ತರ ಅನ್ನೋದು ನೆಮ್ಮದಿ ಸೂಚಿಸುತ್ತೆ. ಅದಕ್ಕೆ ಯಾರೂ ಪ್ರಶ್ನೆಗಳಾಗಬಾರದು. ಉತ್ತರಗಳಾಗಿದ್ದರೆ ಬದುಕು ತನ್ನಿಂತಾನೇ ಚೆನ್ನಾಗಿರುತ್ತೆ’  ಅಂತ ಹೇಳ್ತಾರೆ. ಹಾಗಾಗಿ ಪ್ರೇಕ್ಷಕಪ್ರಭುವಿಗೆ ಯೋಚ್ನೆ ಮಾಡಿದ್ರೆ ಉಪ್ಪಿ ನೆನಪಾಗ್ತಾರೆ. ಮಾಡದಿದ್ದರೆ ಸಿನಿಮಾ ಅರ್ಥ ಆಗಲ್ಲ. ಇದು ಸಿನಿಮಾ ನೋಡಿ ಹೊರಬಂದ ಮೇಲಿನ ಟ್ವಿಸ್ಟ್. ಇನ್ನು ಸಿನಿಮಾದೊಳಗಂತೂ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್.
         ಭೂತ, ಭವಿಷ್ಯ ಬಿಟ್ಟು ವರ್ತಮಾನದಲ್ಲಿ ಮಾತ್ರ ಬದುಕಬೇಕು. ಪದೇ ಪದೇ ಹಿಂದಿನದನ್ನ ನೆನೆಸಿಕೊಂಡು ಕೊರಗಬಾರದು. ಮುಂದೆ ಹಾಗಾಗ್ತಿನಿ, ಹೀಗಾಗಬೇಕು ಅಂತೆಲ್ಲ ಯೋಚ್ನೆ ಮಾಡಬಾರದು. ಈಗಿರುವುದನ್ನ ಮಾತ್ರ ಸವಿಯಬೇಕು ಎಂತಲೂ ಉಪದೇಶ ಮಾಡುವ ನೀನು ರಾತ್ರಿಯಾದ್ರೆ ಸಾಕುನೀನಾಗಿರಲ್ಲ. ನಾನು, ನಂದು ಅನ್ನೋ ಅಹಂಕಾರ ತುಂಬ್ಕೊಂಡು ರಾಕ್ಷಸ ಆಗ್ತಿಯಾ ಅನ್ನೋದನ್ನ ಉಪ್ಪಿ ತೆರೆ ಮೇಲೆ ಕಾಣಿಸಿಕೊಂಡು ಒನ್ಸ್ ಅಗೇನ್ ನೀನು ನೀನಾಗಿರು, ನಾನಾಗಬೇಡ ಅಂತ ಬಿಂಬಿಸಿದ್ದಾರೆ.
          ಅಷ್ಟಕ್ಕೂ ಇಡೀ ಸಿನಿಮಾದಲ್ಲಿ ಏನಿದೆ ಅನ್ನುವ ಪ್ರಶ್ನೆಗೆ `ಏನಿಲ್ಲ’ ಎಂಬುದಷ್ಟೇ ಉತ್ತರ. ಇಲ್ಲಿ ನೀನು ಅನ್ನೋನು ಮಾತ್ರ ಅನ್‌ನೋನ್ ಅಲ್ಲ, ನಾನು ಅನ್ನೋನು ಸಹ ಅನ್‌ನೋನ್. ಒಮ್ಮೊಮ್ಮೆ ಅಘೋರಿ, ಮಗದೊಮ್ಮೆ ಅಂಡರ್ ಕವರ್ ಪೊಲೀಸ್ ಆಫೀಸರ್, ಮತ್ತೊಮ್ಮೆ ಮಹಾನ್ ವೇದಾಂತಿ…ಹೀಗೆ ಜನಸಾಮಾನ್ಯರ ಎಲ್ಲ ಪಾತ್ರಗಳನ್ನ ಜೊತೆಗೆ ಇಲ್ಲದಿರೋ ಅಥವಾ ತೋರ್‍ಸಿರೋ ಕಥೆ?ಗೆ ತಕ್ಕಂತೆ ಅಲ್ಲಲ್ಲಿ ರಿವಾಲ್ವಾರ್‌ಗಳು ಮಾತಾಡ್ತವೆ. ಲಾಂಗ್‌ಗಳು ಝಳಪಿಸುತ್ತವೆ. ಕಾರುಗಳು ಬ್ಲಾಸ್ಟ್ ಆಗಿ ಆಕಾಶಕ್ಕೆ ಜಿಗಿಯುತ್ತವೆ. ಆಮೇಲೆ ಅದು ನಡೆದದ್ದು ಕನಸು ಎನಿಸುತ್ತದೆ. ಎರಡೇ ಸೆಕೆಂಡ್‌ನಲ್ಲಿ ಅದು ಕನಸಲ್ಲ ಅನಿಸುತ್ತದೆ!
          ಇಡೀ ಸಿನಿಮಾನ ಉಪ್ಪಿ ನಾನುವಿನ ಮುಂದಿನ ಭಾಗ ನೀನಾಗಿ ಮುನ್ನಡೆಸಿದ್ದಾರೆ. ಅಶೋಕ ಕಶ್ಯಪ್ ಕ್ಯಾಮರಾ ವರ್ಕ್, ಗುರುಕಿರಣ್ ಸಂಗೀತದ ಬಗ್ಗೆ ನೋ ಕಾಮೆಂಟ್ಸ್. ಕಾಲು ಎಳಿತದೆ ಕಾಲ, ಹೆಂಡತಿ ಓಡಿ ಹೋದ್ರೂ ಯೋಚಿಸಬೇಡ, ಫ್ರೆಂಡ್ ಬಿಟ್ಟು ಹೋದ್ರೂ ಯೋಚ್ನೆ ಬೇಡ ಎನ್ನುವ ಹಾಡುಗಳಿಗೆ ಪಡ್ಡೆಗಳ ಶಿಳ್ಳೆ, ಚಪ್ಪಾಳೆ. ಅದ್ರೂ ಅಲ್ಲಲ್ಲಿ ರಕ್ತಕಣ್ಣೀರು, ಓಂ, ಓಂಕಾರ, ಟೋಪಿವಾಲ, ಸಿನಿಮಾಗಳು ನೆನಪಾಗ್ತವೆ. ಬ್ಯಾಂಕ್ ಜನಾರ್ಧನ ಹಾಗೂ ಬಿರಾದಾರ್ ಜೋಡಿ ನೋಡಿದರೆ ಇದು ಉಪ್ಪಿ-೨ ನೋ? ಶ್… ಮುಂದುವರೆದ ಭಾಗವೋ ಎನ್ನುವ ಅನುಮಾನ ಕಾಡುತ್ತದೆ.
        ವಿಶೇಷ ಎಂದರೆ ಸಿನಿಮಾ ಯಾವ ದೃಶ್ಯದಿಂದ ಅರಂಭ ಆಗುತ್ತೋ, ಅದೇ ದೃಶ್ಯದಲ್ಲಿ ಮುಕ್ತಾಯವಾಗುತ್ತೆ. `ಯೋಚ್ನೆ’ ಮಾಡಬೇಡಿ, ಒಮ್ಮೆ ಉಪ್ಪಿ-೨ ರುಚಿ ನೋಡಿ `ಬಿಡಿ’.

Please follow and like us:
error

Leave a Reply

error: Content is protected !!