ಡಾ. ನಂಜುಂಡಪ್ಪ ವರದಿ ಪುನರ್ ಪರಿಶೀಲನೆಗೆ ಸರ್ಕಾರ ಚಿಂತನೆ- ಡಾ. ವಿ.ಎಸ್. ಆಚಾರ್ಯ



ಕೊಪ್ಪಳ. ಜು. ೧೨ : ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕುರಿತಂತೆ ಡಾ. ಡಿ.ಎಂ. ನಂಜುಂಡಪ್ಪ ಅವರ ವರದಿಯನ್ನು ಪುನರ್ ಪರಿಶೀಲಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ಡಾ: ವಿ.ಎಸ್. ಆಚಾರ್ಯ ಅವರು ಹೇಳಿದ್ದಾರೆ.
ಮಂಗಳವಾರ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ರಾಜ್ಯದ ಅತಿ ಹಿಂದುಳಿದಿರುವ ೧೧೪ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ೨೦೦೨ ರಲ್ಲಿ ಹಿರಿಯ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಸಮಿತಿಯು ಸಲ್ಲಿಸಿದ ವರದಿಯ ಆಧಾರದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ವಿಶೇಷ ಅನುದಾನವನ್ನು ಒದಗಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸುಮಾರು ೮ ವರ್ಷಗಳಲ್ಲಿ ಹಿಂದುಳಿದ ತಾಲೂಕುಗಳ ಪೈಕಿ ಹಲವಾರು ತಾಲೂಕುಗಳು ವಿಶೇಷ ಅನುದಾನದ ಸದ್ಬಳಕೆಯಿಂದ ಅಭಿವೃದ್ಧಿ ಹೊಂದಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗಾಗಿ ಸಲ್ಲಿಸಿದ್ದ ಡಾ. ನಂಜುಂಡಪ್ಪ ಅವರ ವರದಿಯ ಅನುಷ್ಠಾನ ಹಾಗೂ ಪರಿಣಾಮಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಇದೀಗ ಕಾಲ ಬಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಈ ಭಾಗದ ಪ್ರಸಿದ್ಧ ಧಾಮಿಕ ಕ್ಷೇತ್ರವಾಗಿರುವ ಹುಲಿಗಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಮಾಸ್ಟರ್ ಪ್ಲಾನ್ ಯೋಜನೆಗಾಗಿ ಸರ್ಕಾರ ಹಂತ ಹಂತವಾಗಿ ಅನುದಾನ ಒದಗಿಸುತ್ತಿದ್ದು, ಇದಕ್ಕೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ, ಒಟ್ಟಾರೆಯಾಗಿ ಆದಷ್ಟು ಶೀಘ್ರವಾಗಿ ಮಾಸ್ಟರ್ ಪ್ಲಾನ್ ಯೋಜನೆಯಂತೆ ಹುಲಿಗಿಯಲ್ಲಿ ಭಕ್ತಾದಿಗಳಿಗಾಗಿ ದಾಸೋಹ ಭವನ, ಡಾರ್ಮೆಟರಿ, ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ತ್ವರಿತ ಗತಿಯಲ್ಲಿ ಹುಲಿಗಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ಡಾ: ವಿ.ಎಸ್. ಆಚಾರ್ಯ ಅವರು ಹೇಳಿದರು.
ಕೊಪ್ಪಳ ಜಿಲ್ಲೆಗೆ ಕೃಷಿ ವಿವಿ : ಕೊಪ್ಪಳ ಜಿಲ್ಲೆಯು ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತ ಸ್ಥಳವಾಗಿದ್ದು, ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡುವಂತೆ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಬೇಡಿಕೆ ಸಲ್ಲಿಸಿದ್ದು, ಈ ವರ್ಷ ಹಾವೇರಿ ಜಿಲ್ಲೆಯ ಹನುಮನಹಟ್ಟಿ ಹಾಗೂ ಉತ್ತರ ಕನ್ನಡ ಜಿಲ್ಲೆ ಬ್ರಹ್ಮಾವರದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ಮೇರೆಗೆ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡಲಾಗುವುದು. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವೃತ್ತಿಪರ ವ್ಯಾಸಂಗದ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಹೆಚ್ಚು ಹೆಚ್ಚು ವೃತ್ತಿಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಜರುಗಿಸಿದೆ ಎಂದರು.
ಗಂಗಾವತಿಯಲ್ಲಿ ಮುಂದಿನ ವರ್ಷ ಇಂಜಿಯನಿರಿಂಗ್ ಪ್ರವೇಶ ಪ್ರಾರಂಭ : ಗಂಗಾವತಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಮಂಗಳವಾರ ಅಡಿಗಲ್ಲು ನೆರವೇರಿಸಲಾಗುತ್ತಿದ್ದು, ಎ.ಐ.ಸಿ.ಟಿ. ನಿಂದ ಹೊಸ ನೀತಿ ಜಾರಿಗೆ ಬಂದಿರುವುದರಿಂದ
ಒಂದು ವರ್ಷದೊಳಗೆ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ವ್ಯಾಸಂಗಕ್ಕೆ ಪ್ರವೇಶ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ೩೫೭ ಪ್ರಥಮದರ್ಜೆ ಕಾಲೇಜುಗಳಿದ್ದು, ಈ ಪೈಕಿ ೧೭ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಜಿ. ಕೋರ್ಸ್ ವ್ಯಾಸಂಗಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಉನ್ನತ ವ್ಯಾಸಂಗಕ್ಕೆ ಅಗತ್ಯವಿರುವ ಕಾಲೇಜುಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ಡಾ: ವಿ.ಎಸ್. ಆಚಾರ್ಯ ಅವರು ಹೇಳಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error