ಸ್ತ್ರೀ-ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಪಾತ್ರ ದೊಡ್ಡದು : ಶಾಸಕ ಹಿಟ್ನಾಳ

ಕೊಪ್ಪಳ,ನ.೨೪: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಸ್ತ್ರೀ-ಶಕ್ತಿ ಗುಂಪುಗಳ ಸಬಲೀಕರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಪಾತ್ರ ದೊಡ್ಡದಾಗಿದೆ  ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗೊಂಡಬಾಳ ವಲಯದ ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಬಿ.ಹೊಸಳ್ಳಿ, ಹ್ಯಾಟಿ-ಮುಂಡರಗಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದು ತೋರಿಸಿಕೊಟ್ಟ ಇಂದಿರಾಗಾಂಧಿ, ಸೋನಿಯಾ ಗಾಂಧಿಯವರ ಮಾರ್ಗದರ್ಶನದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳಾ ಸ್ವ-ಸಹಾಯ ಗುಂಪುಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ವಿಶೇಷವಾಗಿ ಎಸ್.ಸಿ. ಎಸ್.ಟಿ. ಸ್ವ-ಸಹಾಯ ಸಂಘಗಳಿಗೆ ತಲಾ ೫ ಸಾವಿರ ರೂ.ದಂತೆ ಪ್ರೋತ್ಸಾಹಧನ ನೀಡುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಸ್ವ-ಸಹಾಯ ಸಂಘಗಳ ಶ್ರೇಯೋಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ದಿವ್ಯ ಸಾನಿಧ್ಯ ವಹಿಸಿದ್ದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಸ್ತ್ರೀ-ಶಕ್ತಿ ಸಂಘಗಳ ಒಕ್ಕೂಟ ರಚಿಸುವುದರ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ, ಉಚಿತ ಆರೋಗ್ಯ ಮೇಳ, ಶಿಕ್ಷಣಕ್ಕೆ ಪ್ರೋತ್ಸಾಹ, ಗೋಬರ್ ಗ್ಯಾಸ್ ಸಹಾಯಧನ ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಸೇವೆಗೈಯುತ್ತಿರುವುದು ಶ್ಲಾಘನೀಯ ಎಂದ ಅವರು, ಇಂದಿನ ದಿನಗಳಲ್ಲಿ ಶಿಕ್ಷಣ ಹೊಂದುವುದು ಪ್ರತಿಯೊಬ್ಬರ ಹಕ್ಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಸುಸಂಸ್ಕೃತರನ್ನಾಗಿ ಮಾಡಬೇಕು, ಅಲ್ಲದೇ ಪ್ರತಿಯೊಂದು ಗ್ರಾಮದಲ್ಲಿ ಗುಡಿ ಕೈಗಾರಿಕೆ, ಕಸೂತಿಹಾಕುವುದು ಮುಂತಾದ ಚಟುವಟಿಕೆಗಳನ್ನು ರೂಡಿಸಿಕೊಂಡು ಆರ್ಥಿಕ ಸದೃಢತೆಯನ್ನು ಹೊಂದಿ ಮಧ್ಯವ್ಯೆಸನಿಗಳಿಗೆ ಪಾಠ ಕಲಿಸಲು ಮಹಿಳೆಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗೂಳಪ್ಪ ಹಲಿಗೇರಿ, ತಾ.ಪಂ.ಅಧ್ಯಕ್ಷ ಮುದೇಗೌಡ ಮಾ|ಪಾ|, ಕೆನರಾ ಬ್ಯಾಂಕ್ ಮ್ಯಾನೇಜರ್ ಕೆ.ವಿ.ಆರ್.ಮೂರ್ತಿ, ಕೃಷಿ ವಿಸ್ತರಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಕೊಪ್ಪಳ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಬಹದ್ದೂರಬಂಡಿ ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ ಬಾರಕೇರ, ಉಪಾಧ್ಯಕ್ಷ ಖಾಜಾಹುಸೇನ್ ದೇವಡಿ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅಶೋಕ ಮುರಾಳ, ಮುಖಂಡರಾದ ವಿರುಪಣ್ಣ ಕುರುಬರ್, ದೇವಪ್ಪ, ಗ್ರಾ.ಪಂ.ಸದಸ್ಯರಾದ ತಿಮ್ಮರೆಡ್ಡಿ ಸಣ್ಣಮುದಿಯಪ್ಪನವರ, ಸುರೇಶ ಬಿಸರಳ್ಳಿ, ಗಾಳೆಪ್ಪ ಹರಿಜನ, ಶೋಭಾ ರಂಗಪ್ಪ ಅಂಬಿಗೇರಿ, ದೊಡ್ಡಬಸಪ್ಪ ಹಾಲಳ್ಳಿ, ದೇವಪ್ಪ ಬಹದ್ದೂರಬಂಡಿ, ರಾಮನಗೌಡ ಪೊ|ಪಾ|, ಅನ್ನಮ್ಮ ಬಹದ್ದೂರಬಂಡಿ, ಗ್ಯಾನಪ್ಪ ಬೆಳವಿನಾಳ, ಶೇಖಸಾಬ್, ನಿಂಗಪ್ಪ ಪಿಡ್ಡನಾಯಕ್, ಬೀರಪ್ಪ ಕಿನ್ನೂರಿ, ಹೇಮರಡ್ಡಿ ಕರಿಲಿಂಗಪ್ಪನವರ, ಹನುಮಪ್ಪ ಮುಂಡರಗಿ ಸೇರಿದಂತೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈ., ಕಾರ್ಯದರ್ಶಿ ಅನುಪಮಾ.ಅವಣ್ಯವರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಶೈಲಜಾ ಪಿ.ಅವಣ್ಣೆವರ್ ಸಂಗಡಿಗರಿಂದ ಪ್ರಾರ್ಥನೆ, ಲೆಕ್ಕಪರಿಶೋಧಕ ಚಂದ್ರಶೇಖರ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಗಂಗಾವತಿ ಯೋಜನಾಧಿಕಾರಿ ದಿನೇಶ ಪೂಜಾರಿ ಮಾತನಾಡಿದರು. ಜಿಲ್ಲಾ ಪ್ರಬಂಧಕ ನಾಗರಾಜ ನಿರೂಪಿಸಿದರು. ಕೊನೆಯಲ್ಲಿ ಅಣ್ಣಪ್ಪ ವಂದಿಸಿದರು. ಕಾರ್ಯಕ್ರಮದ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಮೇಳದೊಂದಿಗೆ ವೇದಿಕೆಗೆ ಕರೆತರಲಾಯಿತು. 
Please follow and like us:
error