ಜಂಗಮರು “ಬೇಡ ಜಂಗಮರು ಅಲ್ಲ”ವೆಂದು ಹೇಳಿಲ್ಲ

ಗಂಗಾವತಿ: ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಂಬಂಧವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ(ರಿ), ಬೆಂಗಳೂರು ಈ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮಠ, ಜಂಗಮರು “ಬೇಡ ಜಂಗಮರು ಅಲ್ಲ”ವೆಂದು ಹೇಳಿದ್ದಾರೆಂದು ಪತ್ರಿಕೆಯೊಂದರಲ್ಲಿ ವರದಿಯಾಗಿದ್ದು ಸತ್ಯಕ್ಕೆ ದೂರವಾದ ಸಂಗತಿ ಎಂದು ರಾಜ್ಯ ಕಾನೂನು ಸಲಹಾ ಸಮಿತಿ ಮತ್ತು ಗಂಗಾವತಿ ತಾಲೂಕು ಮಹಾಸಭಾದ ಗೌರವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವೀರಶೈವ ಜಂಗಮ, ಲಿಂಗಾಯತ ಜಂಗಮ, ಹಿಂದು ಜಂಗಮ ಎಂಬ ಯಾವುದೇ ಉಪಜಾತಿಗಳು ಜಾತಿಯ ಕೋಷ್ಠಕದಲ್ಲಿ ಇಲ್ಲ. ಇರುವುದು “ಬೇಡ ಜಂಗಮ” ಎಂಬ ಜಾತಿಯ ಪಟ್ಟಿ ಮಾತ್ರ. ಆದರೆ, ಕರ್ನಾಟಕದ ಜಂಗಮರನ್ನು ಬೇಡ ಜಂಗಮರೆಂದು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಎಸ್.ಆರ್.ನವಲಿ ಹಿರೇಮಠ ಹೇಳಿದ್ದಾರೆ. ಅದನ್ನೇ ತಪ್ಪಾಗಿ ಗ್ರಹಿಸಲಾಗಿದ್ದು, ಪ್ರಸ್ತುತ ಜಂಗಮರೆಂದು ಕರೆಯಲಾಗುವ ಜನಾಂಗವನ್ನು ಬೇಡ ಜಂಗಮ ಎಂದು ಪರಿಗಣಿಸಲು ಮಹಾಸಭಾ ಹೋರಾಟ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಚುರುಕುಗೊಳಿಸಲಾಗುತ್ತಿದೆ ಮತ್ತು ಮುಂದೊಂದು ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆಂದು ಹೇರೂರ ಸ್ಪಷ್ಟನೆ ನೀಡಿದ್ದಾರೆ.
ಹೈದ್ರಾಬಾದ್ ನವಾಬ್ ರಾಜ್ಯದಲ್ಲಿ ವಾಸಿಸುತ್ತಿದ್ದ ಜಂಗಮರು ಡಿಪ್ರೆಸ್ಡ್ ಕ್ಲಾಸ್ ಎಂದು ನವಾಬ್ ಆಡಳಿತ ರಾಜ್ಯದಲ್ಲಿ ರಾಜಪತ್ರವನ್ನು ಹೊರಡಿಸಲಾಗಿತ್ತು. ಡಿಪ್ರೆಸ್ಡ್ ಕ್ಲಾಸ್ ಎಂದು ಕರೆಯಲಾದ ಜಾತಿ ಪಂಗಡವನ್ನು ನಂತರದ ದಿನಗಳಲ್ಲಿ ಶಡ್ಯೂಲ್ ಕ್ಯಾಸ್ಟ್(ಎಸ್.ಸಿ.) ಎಂದು ಮರು ನಾಮಕರಣ ಮಾಡಲಾಗಿದೆ. ಅದೇ ರೀತಿ ನೆರೆಯ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸಿ ಶಡ್ಯೂಲ್ ಕ್ಯಾಸ್ಟ್(ಎಸ್.ಸಿ.) ಎಂದು ಪರಿಗಣಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ.
ಕರ್ನಾಟಕದಲ್ಲಿಯೂ ಸಹ ಕೆಲವರು ನ್ಯಾಯಾಲಯಗಳ ಮೂಲಕ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಶಡ್ಯೂಲ್ ಕ್ಯಾಸ್ಟ್(ಎಸ್.ಸಿ.) ಎಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ, ಸಾಮಾನ್ಯ ಜನರು ನ್ಯಾಯಾಲಯದ ಮೂಲಕ ಇಂತಹ ಪ್ರಮಾಣ ಪತ್ರ ಪಡೆಯುವುದು ಕಷ್ಟಸಾಧ್ಯವಾದ್ದರಿಂದ ಮಹಾಸಭೆಯ ಮೂಲಕ ರಾಜ್ಯದಲ್ಲಿರುವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇರೂರ ಹೇಳಿದ್ದಾರೆ.

Please follow and like us:
error