ಹಳಿ ತಪ್ಪಿದ ರೈಲು ಬಜೆಟ್ : ಸಿದ್ದರಾಮಯ್ಯ

ಬೆಂಗಳೂರು,  : ಕೇಂದ್ರ

ರೈಲ್ವೇ ಸಚಿವ   ಸುರೇಶ್ ಫ್ರಭು ಅವರು ಮಂಡಿಸಿದ 2015-16 ನೇ ಸಾಲಿನ ರೈಲ್ವೇ ಆಯವ್ಯಯವನ್ನು ಹಳಿ ತಪ್ಪಿದ ಬಜೆಟ್ ಎಂದು ಮುಖ್ಯಮಂತ್ರಿ   ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂಭತ್ತು ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದರಿಂದಾಗಿ ಒಂದು ಅಂದಾಜಿನ ಪ್ರಕಾರ ರೈಲ್ವೆ ಮಂತ್ರಾಲಯಕ್ಕೆ 18,000 ಕೋಟಿ ರೂ ದಿಂದ 20,000 ಕೋಟಿ ರೂ ಉಳಿತಾಯವಾಗಿದೆ.ಪ್ರಯಾಣ ದರವನ್ನು ಇಳಿಸುವ ಮೂಲಕ ತೈಲ ಖರೀದಿಯಲ್ಲಿನ ಉಳಿತಾಯವನ್ನುಪ್ರಯಾಣಿಕರಿಗೆ ವರ್ಗಾಯಿಸಬಹುದಾಗಿತ್ತು. ಆದರೆ, ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿದೆ.ಇದು ಸಾಮಾನ್ಯ ಪ್ರಯಾಣಿಕರ ದೃಷ್ಠಿಯಿಂದ ಅತ್ಯಂತ ನಿರಾಶದಾಯಕ ಬಜೆಟ್ ಆಗಿದೆಎಂದು ಮುಖ್ಯಮಂತ್ರಿ ವಿಶ್ಲೇಷಿಸಿದ್ದಾರೆ.
ಕರ್ನಾಟಕದಲ್ಲಿ ಕಚ್ಚಾ ತೈಲ ದರ ಇಳಿಕೆಯಲ್ಲಿನ ಉಳಿತಾಯವನ್ನು ನಾವು ಸರ್ಕಾರಿ ಬಸ್‍ಗಳ ಪ್ರಯಾಣ ದರ ಇಳಿಸುವುದರ ಮೂಲಕ ಪ್ರಯಾಣಿಕರಿಗೆ ವರ್ಗಾಯಿಸಿದ್ದೇವೆ. ಇದೇ ರೀತಿ ಕೇಂದ್ರ ಸರ್ಕಾರ ಕೂಡಾ ರೈಲ್ವೆ ಪ್ರಯಾಣ ದರವನ್ನು ಇಳಿಸಬೇಕಿತ್ತು. ಈ ಒತ್ತಾಯವನ್ನು ಮಾಡುವ ನೈತಿಕ ಅಧಿಕಾರ ತಮಗಿದೆ ಎಂದು ಹೇಳಿದ್ದಾರೆ.
ಯಾವುದೇ ಹೊಸ ರೈಲುಗಳನ್ನು ಘೋಷಣೆ ಮಾಡದೆ ಇರುವುದು ಸಾಧನೆಯಲ್ಲ. ಅದು ಸರ್ಕಾರದ ವೈಫಲ್ಯ. ಅಭಿವೃದ್ಧಿಯ ರಥ ಮುಂದೆ ಸಾಗುತ್ತಲೇ ಇರಬೇಕು.ಅಭಿವೃದ್ಧಿಯ ರಥವನ್ನು ಯಾವುದೋ ಹಂತದಲ್ಲಿ ಸ್ಥಗಿತಗೊಳಿಸಿ,ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿರುವುದು ಕೇಂದ್ರ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ.
ರೈಲ್ವೆ ನಿಲ್ದಾಣಗಳ ಆಧುನೀಕರಣ, ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ, ವೈ ಪೈ, ಟಿಕೆಟ್ ಬುಕ್ಕಿಂಗ್ ಸೌಲಭ್ಯ ಸುಧಾರಣೆ ಇವೆಲ್ಲವೂ ಸರಿ. ಆದರೆ, ಹೊಸ ರೈಲುಗಳನ್ನು ಕೊಡದೆ, ಪ್ರಯಾಣ ದರವನ್ನು ಇಳಿಸದೆ ಈ ಸೌಲಭ್ಯಗಳನ್ನು ಕೊಟ್ಟು ಏನನ್ನು ಸಾಧಿಸುತ್ತಾರೆ ? ಕಳೆದ ಬಜೆಟ್‍ನಲ್ಲಿಯೇ ರೈಲ್ವೆ ಮಂತ್ರಾಲಯವನ್ನು ಖಾಸಗೀಕರಣಗೊಳಿಸುವ ಹುನ್ನಾರದ ಮುನ್ಸೂಚನೆ ನೀಡಿತ್ತು. ಆದರೆ, ಸುರೇಶ್ ಪ್ರಭು ಅವರು ಈ ಬಜೆಟ್‍ನಲ್ಲಿ ಮುಂದುವರಿಸಿದ್ದಾರೆ. ರೈಲು ಜನಸಾಮಾನ್ಯರ ಸಾರಿಗೆ ವ್ಯವಸ್ಥೆ. ಇಲ್ಲಿ ಲಾಭ ನಷ್ಟಗಳ ಲೆಕ್ಕಾಚಾರ ಇರಕೂಡದು.
ರೈಲ್ವೆ ಮಂತ್ರಾಲಯವನ್ನು ಸ್ವಾವಲಂಭಿಯಾಗಿ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆಯುವುದಿಲ್ಲ ಎಂದೆಲ್ಲಾ ಹೇಳಿದ್ದಾರೆ. ಆದರೆ, ರೈಲ್ವೇ ಸಚಿವರು ಹೇಳಿರುವ ನೂರಾರು ಸೌಲಭ್ಯಗಳನ್ನು ಜಾರಿಗೆ ತರಲು ಹಣ ಎಲ್ಲಿಂದ ತರುತ್ತೇವೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿಲ್ಲ.
ಗದಗ – ವಾಡಿ, ದಾವಣಗೆರೆ – ತುಮಕೂರು, ಹೊಸಪೇಟೆ – ಹುಬ್ಬಳ್ಳಿ,ತುಮಕೂರು – ಅರಸೀಕೆರೆ ಸೇರಿದಂತೆ ಹೊಸ ರೈಲುಗಳನ್ನು ಬೇಡಿಕೆ ಇಟ್ಟಿದ್ದೆವು.ಹಿಂದಿನ ಬಜೆಟ್‍ನಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಅವರು24 ಹೊಸ ರೈಲುಗಳನ್ನು ಘೋಷಿಸಿದ್ದರು. ಅದರಲ್ಲಿ ಅರ್ಧದಷ್ಟು ಪ್ರಾರಂಭವಾಗಿಲ್ಲ. ಅವುಗಳ ಪ್ರಗತಿ ಏನೆಂದು ಗೊತ್ತಿಲ್ಲ. ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯನ್ನು ಕೆಂದ್ರ ರೈಲ್ವೆ ಸಚಿವರು ಆಧ್ಯತೆಯಿಂದ ಪರಿಗಣಿಸಬಹುದು ಎಂಬ ನಿರೀಕ್ಷೆ ಇತ್ತು.ಆದರೆ ಸಚಿವರ ಭಾಷಣದಲ್ಲಿ ಇದರ ಬಗ್ಗೆ ಉಲ್ಲೇಖವೂ ಇಲ್ಲ.
ಕೇಂದ್ರ ರೈಲ್ವೇ ಸಚಿವರು ಆಕರ್ಷಕವಾಗಿ ಭಾಷಣ ಮಾಡಿ ರೈಲ್ವೆ ಸುಧಾರಣೆ ಬಗ್ಗೆ ಹಲವಾರು ಭರವಸೆಗಳನ್ನು ನೀಡಿದ್ದಾರೆ.  ಸುರೇಶ್ ಪ್ರಭು ಅವರ ಮಾತುಗಳನ್ನು ಕೇಳಿದರೆ ಅವರು ಪ್ರಧಾನಿ ಭಾಷಣದಿಂದ ಪ್ರಭಾವಿತರಾಗಿದ್ದಾರೆ ಎನಿಸುತ್ತದೆ. ಆದರೆ ಆ ಭರವಸೆಗಳೆಲ್ಲಾ ಹಳಿ ಇಲ್ಲದೆ ರೈಲು ಓಡಿಸಿದಂತಾಗಿದೆ. ಇಷ್ಟಾದರೂ ಇದರಿಂದ ಅಂತಿಮವಾಗಿ ಪ್ರಯಾಣಿಕರಿಗೆ ಏನೂ ಲಾಭ ಇಲ್ಲ ಎಂದು ಶ್ರೀ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.
Please follow and like us:
error