ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ……

ಗಂಗಾವತಿ, ಡಿ.8: ಈ ಬಾರಿಯ 78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಭತ್ತದನಗರಿ ಗಂಗಾವತಿಯ ತುಂಬ ಕನ್ನಡದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಗಂಗಾವತಿಯ ಎ.ಪಿ.ಎಂ.ಸಿ.ಆವರಣದ ಶ್ರೀ ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ನಗರದ ಪ್ರಮುಖ ಬೀದಿಗಳು,ವೃತ್ತಗಳು,ಕನ್ನಡ ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳು, ಕಟೌಟ್‌ಗಳು,ಫ್ಲೆಕ್ಸ್‌ಗಳು,ಕನ್ನಡದ ಹಿರಿಯ ಸಾಹಿತಿಗಳು,ಕನ್ನಡಕ್ಕೆ ಕೊಡುಗೆ ನೀಡಿದ ಮಹನೀಯರ ಭಾವಚಿತ್ರಗಳನ್ನು ಹೊತ್ತ ಬ್ಯಾನರ್‌ಗಳು,ಕನ್ನಡ ನಾಡ ಬಾವುಟಗಳಿಂದ ಕನ್ನಡಮಯವಾಗಿವೆ.ನಗರದ ಪ್ರಮುಖ ವೃತ್ತಗಳಲ್ಲಿ ವೈವಿಧ್ಯಮಯ ಬಣ್ಣಗಳಿಂದ ಕೂಡಿದ ರಂಗೋಲಿಗಳನ್ನು ಬಿಡಿಸಿದುದು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಕರವೇ ಕಾರ್ಯಕರ್ತರು,ಜಿಲ್ಲಾ ನ್ಯಾಯವಾದಿಗಳ ಸಂಘ,ಸಾಹಿತ್ಯಾಭಿಮಾನಿಗಳು ಸೇರಿದಂತೆ ನಗರದ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬೆಳಗ್ಗೆ ಮತ್ತು ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ನುಡಿಜಾತ್ರೆಯಲ್ಲಿ ಭಾಗವಹಿಸುವಂತೆ ಕೋರಿ ಕನ್ನಡದ ಧ್ವಜ ಹಿಡಿದುಕೊಂಡು ಬೈಕ್ ಜಾಥಾ ನಡೆಸಿದರು.ಜಾಥಾದಲ್ಲಿ ಮುನ್ನೂರಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿದ್ದರು.
ವೇದಿಕೆ ಸಿದ್ಧತೆ:ನಗರದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಕಳೆದ ಒಂದು ವಾರದಿಂದ ಪ್ರಧಾನ ವೇದಿಕೆ ಮತ್ತು ಒಂದು ಸಮನಾಂತರ ವೇದಿಕೆಗಳ ಸಿದ್ಧತೆ ಭರದಿಂದ ಸಾಗಿದ್ದು,ವೇದಿಕೆಯ ಅಲಂಕಾರಗಳು ಅಂತಿಮ ಹಂತದಲ್ಲಿವೆ.ವೇದಿಕೆಯ ಹಿಂಭಾಗದಲ್ಲಿಯೆ ಇಂದು ಮಾಧ್ಯಮ ಕೊಠಡಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಇಂದು ಬೆಳಗ್ಗೆ ಉದ್ಘಾಟಿಸಿದರು.ಅತ್ಯಾಧುನಿಕ ಸೌಲಭ್ಯವುಳ್ಳ ಮಾಧ್ಯಮ ಕೊಠಡಿಯಲ್ಲಿ ಇಂಟರ್ನೆಟ್ ಸಂಪರ್ಕ ಸಹಿತ 300ಕಂಪ್ಯೂಟರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಧಾನ ವೇದಿಕೆ ಇರುವ ಪ್ರಾಂಗಣದಲ್ಲಿಯೆ ಬೇರೆ ಸ್ಥಳದಿಂದ ಬರುವವರಿಗಾಗಿ ನೋಂದಣಿ ಮಾಡಿಕೊಳ್ಳಲು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದ 30ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳನ್ನು ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ.ಮುಂಜಾನೆಯಿಂದಲೆ ಪ್ರತಿನಿಧಿಗಳನ್ನು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ.ಪ್ರಾಂಗಣದ ದ್ವಾರದಲ್ಲಿಯೆ ಸಮ್ಮೇಳನದ ಬಗ್ಗೆ ಅಗತ್ಯ ಮಾಹಿತಿ ನೀಡಲು ಪ್ರತ್ಯೇಕ ವಾಹಿತಿ ಕೊಠಡಿಯನ್ನು ಸ್ಥಾಪಿಸಲಾಗಿದೆ.ಇಡೀ ಪ್ರಾಂಗಣದಲ್ಲಿ ಮಣ್ಣಿನ ಧೂಳು ನಿವಾರಿಸಲು ಮೂರ್ನಾಲ್ಕು ನೀರಿನ ಟ್ಯಾಂಕರ್‌ಗಳಿಂದ ನೀರು ಚಿಮುಕಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೊದಲ ದಿನ ಗೋಧಿ ಹುಗ್ಗಿಯ ಘಮಲು:ಸಮ್ಮೇಳನದ ಮೂರು ದಿನವೂ ಒಟ್ಟು 2ಲಕ್ಷಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಬರಬಹುದು ಎಂದು ಅಂದಾಜಿಸಲಾಗಿದೆ.ಮೊದಲ ದಿನ 60ರಿಂದ 70 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇಷ್ಟೊಂದು ಜನರಿಗೆ ಬಡಿಸಲು ಉತ್ತರ ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಗೋಧಿಹುಗ್ಗಿಯನ್ನು ತಯಾರಿಸಲಾಗುತ್ತಿದೆ. ಗೋಧಿಹುಗ್ಗಿಯೊಂದಿಗೆ ಬದನೆಕಾಯಿ ಪಲ್ಯ,ಚಪಾತಿ,ರೊಟ್ಟಿ,ಚಟ್ನಿ,ಅನ್ನ,ಸಾರು ತಯಾರಿಸಲಾಗುತ್ತಿದೆ.ಮೂರು ದಿನದ ಊಟಕ್ಕೆ ಸಿಹಿ ತಿನಿಸು ಬಡಿಸುವ ವ್ಯವಸ್ಥೆ ಮಾಡಲಾಗಿದ್ದು, ಜಿಲೇಬಿ,ಮೈಸೂರು ಪಾಕ್, ಸೀರಾ ಸೇರಿದಂತೆ ಒಟ್ಟು 6 ಸಿಹಿ ತಿನಿಸುಗಳನ್ನು ಮಾಡಲಾಗುತ್ತಿದೆ. 2 ಲಕ್ಷ ಕಟಕ್ ರೊಟ್ಟಿಗಳನ್ನು ತರಿಸಲಾಗಿದೆ
Please follow and like us:
error