ಪಡಿತರ ಚೀಟಿ : ಮತ್ತೊಮ್ಮೆ ಬೆರಳಚ್ಚು ಮತ್ತು ಬಯೋಮೆಟ್ರಿಕ್ ನೀಡಲು ಮನವಿ

  ೨೦೧೦ ಕ್ಕಿಂತ ಹಿಂದೆ ಖಾಸಗಿ ಸಂಸ್ಥೆಯವರು ನೀಡಿದ ಖಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಮತ್ತು ಬಯೋಮೆಟ್ರಿಕ್ ದೋಷಪೂರಿತವಾಗಿದ್ದ ಕಾರಣ ಪಡಿತರ ಚೀಟಿದಾರರು ಮತ್ತೊಮ್ಮೆ ತಮ್ಮ ಕುಟುಂಬದ ಸದಸ್ಯರ ಭಾವಚಿತ್ರ ಮತ್ತು ಬಯೋಮೆಟ್ರಿಕ್ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಇಂತಹ ಪಡಿತರ ಚೀಟಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇರುವುದಾಗಿ ಅಂದಾಜಿಸಿದ್ದು ಸದರಿ ಪಡಿತರ ಚೀಟಿದಾರರ ಕುರಿತು ಇಲಾಖೆಯ ವೆಬ್‌ಸೈಟ್‌ನಲ್ಲಿ ಭಾವಚಿತ್ರ ಮತ್ತು ಬಯೋಮೆಟ್ರಿಕ್ ಪಡೆಯಲು ಅನುಕೂಲವಾಗುವಂತೆ ನಗರ, ಪಟ್ಟಣ ಪ್ರದೇಶದ ಕಾರ್ಡುದಾರರಾಗಿದ್ದಲ್ಲಿ ಕಾರ್ಡುದಾರರು ಮೊಬೈಲ್‌ನಲ್ಲಿ (ಉದಾRCRENKPL22147540 ಟೈಪ್ ಮಾಡಿ ೯೨೧೨೩೫೭೧೨೩ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಕಳುಹಿಸುವ ಮೂಲಕ ನೊಂದಾವಣೆ ಮಾಡಿಕೊಳ್ಳಬೇಕು, ನೊಂದಾವಣೆ ಆದ ನಂತರ ನಿಮ್ಮ ಮೊಬೈಲಿಗೆ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ ಒಳಗೊಂಡ ಎಸ್.ಎಂ.ಎಸ್. ಸಂದೇಶ ಬರುತ್ತದೆ.(ಇದನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.) ಈ ರೀತಿ ಪಡಿತರ ಚೀಟಿದಾರರು ನೊಂದಾವಣೆ ಮಾಡಿಕೊಂಡಿರುವ ಬಗ್ಗೆ ಅವರ ಮೊಬೈಲ್ ಫೋನಿಗೆ ಬಂದಿರುವ ಎಸ್.ಎಂ.ಎಸ್. ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಕಾರರಿಗೆ ತೋರಿಸಿ ಮೇ-೨೦೧೩ ನೇ ಮಾಹೆಯ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೋರಲಾಗಿದೆ. ಈ ರೀತಿ ಎಸ್.ಎಂ.ಎಸ್. ಕಳುಹಿಸಿ ನೊಂದಾವಣೆ ಮಾಡಿಕೊಂಡ ಪಡಿತರ ಚೀಟಿದಾರರಿಗೆ ಮಾತ್ರ ಪಡಿತರ ವಸ್ತುಗಳಾದ ಆಹಾರಧಾನ್ಯ ಮತ್ತು ಸೀಮೆ ಎಣ್ಣೆ ವಿತರಿಸಲಾಗುವುದು. ನೊಂದಾವಣೆ ಮಾಡಿಕೊಳ್ಳದ ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ವಿತರಿಸಲಾಗುವುದಿಲ್ಲ. ಎಸ್.ಎಂ.ಎಸ್. ಮೂಲಕ ಸೆಕ್ಯೂರಿಟಿ ಕೋಡ್ ಮತ್ತು ಪ್ರವೇಶ/ಟೋಕನ್ ಸಂಖ್ಯೆ ಪಡೆದ ಪಡಿತರ ಚೀಟಿದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ನಗರ/ಪಟ್ಟಣ ಪ್ರದೇಶಗಳಲ್ಲಿ ಪ್ರಾರಂಭಿಸಿರುವ ಸೇವಾ ಕೇಂದ್ರಗಳಲ್ಲಿ ಭಾವಚಿತ್ರ ಹಾಗೂ ಜೀವಮಾಪಕ ನೀಡತಕ್ಕದ್ದು.  ಗ್ರಾಮೀಣ ಪ್ರದೇಶದವರು ಎಸ್.ಎಂ.ಎಸ್. ಸಂದೇಶವನ್ನು ಕಳುಹಿಸುವ ಅಗತ್ಯ ಇರುವುದಿಲ್ಲ, ಕಾರ್ಡುದಾರರು ನೇರವಾಗಿ ಗ್ರಾ.ಪಂ.ಗಳಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹೋಗಿ ಭಾವಚಿತ್ರ ಹಾಗೂ ಬಯೋಮೆಟ್ರಿಕ್ ನೀಡಲು ಈ ಕೆಲಸಕ್ಕಾಗಿ ರೂ.೫೦/- ನ್ನು ಕಾರ್ಡುದಾರರು ಪಾವತಿ ಮಾಡತಕ್ಕದ್ದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply