ಕರ್ನಾಟಕಕ್ಕೆ ಗಾಂಧೀಜಿ : ಮೇ.೦೮ ರಂದು ಶತಮಾನೋತ್ಸವ ಸಮಾರಂಭ

ಕರ್ನಾಟಕಕ್ಕೆ ಗಾಂಧೀ ಪ್ರವೇಶ ಮಾಡಿ ೦೮-೦೫-೧೯೧೫ ಕ್ಕೆ  ಒಂದು ಶತಮಾನವಾಯಿತು. ಈ ಶತಮಾನೋತ್ಸವವನ್ನು ಕರ್ನಾಟಕದ ಜನತೆ ಹಮ್ಮೆಯಿಂದ ಆಚರಿಸಿ, ಅವರ ವ್ಯಕ್ತಿ ವಿಚಾರಧಾರೆಗಳನ್ನು ಜನರಲ್ಲಿ ವಿಶೇಷವಾಗಿ ಯುವ ಜನರಲ್ಲಿ ಬಿತ್ತುವ ಉದ್ದೇಶದಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಹಲವು ಸಂಘಗಳ ಸಹಯೋಗದೊಂದಿಗೆ ’ಕರ್ನಾಟಕದಲ್ಲಿ ಗಾಂದಿ ಮೊದಲ ಹೆಜ್ಜೆ’ ಎಂಬ ಶತಮಾನೋತ್ಸವ ಸಮಾರಂಭವನ್ನು ಮೇ.೦೮ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಜ್ಞಾನಜ್ಯೋತಿ  ಸಭಾಂಗಣದಲ್ಲಿ  ಏರ್ಪಡಿಸಲಾಗಿದೆ.

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ  ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ಪಾಲ್ಗೊಳ್ಳಲಿದ್ದು,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಹೆಚ್.ಕೆ.ಪಾಟೀಲ್ ಕರ್ನಾಟಕದಲ್ಲಿ ಗಾಂಧಿ ಹೆಜ್ಜೆಗಳು ಭೂಪಟ ಅನಾವರಣಗೊಳಿಸಲಿದ್ದಾರೆ. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಕರ್ನಾಟಕದಲ್ಲಿ ಗಾಂದಿ ವಿಶೇಷ ಪ್ರಕಟಣೆಯನ್ನು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಬಿಡುಗಡೆ ಮಾಡುವರು. ೦೮-೦೫-೧೯೧೫ ರಂದು ಗಾಂಧೀಜಿ ಅವರು ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ  ಅವರ ಭಾವಚಿತ್ರ ಅನಾವರಣ ಮಾಡಿದ್ದು, ಅಪೂರ್ವ ಚಿತ್ರದ ಪ್ರತಿರೂಪವನ್ನು ಸಮಾರಂಭದಲ್ಲಿ ದೆಹಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಸ್ಮಾರಕ ಮ್ಯೂಸಿಯಂನ ನಿರ್ದೇಶಕ ಅಣ್ಣಾಮಲೈ ಅವರು ಅನಾವರಣಗೊಳಿಸಲಿದ್ದಾರೆ ಹಾಗೂ ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಬಿ.ತಮ್ಮೇಗೌಡ ಅವರು ಈ ಶತಮಾನೋತ್ಸವದ ಸಂಕ್ಷಿಪ್ತ ಮಾಹಿತಿ ನೀಡುವ ಮಡಿಕೆ ಪತ್ರ ಬಿಡುಗಡೆ ಮಾಡುವರು. 
  ಇದಕ್ಕೂ ಮುನ್ನ  ಅಂದು ಬೆಳಿಗ್ಗೆ ೦೯ ಗಂಟೆಗೆ ಬೆಂಗಳೂರು ರೈಲು ನಿಲ್ದಾಣದಿಂದ ಪಾದಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಯೋಧರು, ಎನ್.ಎಸ್.ಎಸ್ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸುವರು. ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತಪಡಿಸಿರುವ ಗಾಂಧೀ ಚಿತ್ರ ಪ್ರದರ್ಶನವನ್ನು ಅಂದು ಬೆಳಿಗ್ಗೆ ೧೦ ಗಂಟೆಗೆ ಗಾಂಧೀಭವನದಲ್ಲಿ  ಏರ್ಪಡಿಸಲಾಗಿದ್ದು, ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ಅವರು ಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ನಂತರ ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಗಾಂಧಿ ಪ್ರಿಯ ಭಜನೆಯನ್ನು ಖ್ಯಾತ ಗಾಯಕರಿಂದ ಹಮ್ಮಿಕೊಳ್ಳಲಾಗಿದೆ. 
  ಶತಮಾನೋತ್ಸವ ಆಚರಣೆಯ ಅಂಗವಾಗಿ ಒಂದು ವರ್ಷಕಾಲ ಗಾಂಧೀಜಿ ಅವರ ನೆನಪಿನಲ್ಲಿ ಯುವಜನರ ಮೇಲೆ ಪ್ರಭಾವ ಬೀರುವ ಹಲವಾರು ಕಾರ್ಯಕ್ರಮಗಳನ್ನು ಶಾಲಾಕಾಲೇಜುಗಳಲ್ಲಿ ಆಚರಿಸುವಂತೆ ಮಾಡಲು ಯೋಜಿಸಲಾಗಿದೆ. ಉಚಿತ ಪುಸ್ತಕ ವಿತರಣೆ, ಗಾಂಧೀಜಿ ಸಾಹಿತ್ಯದ ಅಧ್ಯಯನ, ವಿವಿಧ ಸ್ಪರ್ಧೆ, ಅವರ ವ್ಯಕ್ತಿ ವಿಚಾರಗಳು ಯುವಜನರ ಮೇಲೆ ಪರಿಣಾಮ ಉಂಟು ಮಾಡುವಂತೆ ಗಾಂಧೀತತ್ವ ಪ್ರಣೀತ ಶಿಬಿರಗಳ ವ್ಯವಸ್ಥೆ ಮಾಡುವಂತಹ ಕಾರ್ಯಕ್ರಮ ರೂಪಿಸಲು ಯೋಜಿಸಲಾಗಿದೆ.   
Please follow and like us:
error