ಶಿವಮೊಗ್ಗ ಕುವೆಂಪು ವಿವಿಯಲ್ಲಿ ನಕಲಿ ಅಂಕಪಟ್ಟಿ ಜಾಲ ಬೆಳಕಿಗೆ

12 ಸಿಬ್ಬಂದಿ ಸೆರೆ *ಉತ್ತರ ಪತ್ರಿಕೆ-ಮಾರ್ಕ್ಸ್‌ಕಾರ್ಡ್-ಲಕ್ಷಾಂತರ ರೂ. ವಶ
ಶಿವಮೊಗ್ಗ, ಮೇ 15: ಸದಾ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುವ ಇಲ್ಲಿನ ಕುವೆಂಪು ವಿಶ್ವವಿದ್ಯಾನಿಲಯ ವೀಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ವಿವಿಯ ಸಿಬ್ಬಂದಿ ಭಾಗಿ ಯಾಗಿದ್ದ ಭಾರೀ ದೊಡ್ಡ ನಕಲಿ ಅಂಕಪಟ್ಟಿ ಜಾಲವೊಂದನ್ನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ನಿನ್ನೆ ರಾತ್ರಿ ಭದ್ರಾವತಿ ಡಿವೈಎಸ್‌ಪಿ ಶ್ರೀಧರ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ವೇಳೆ ಈ ಹಗರಣ ಬಯಲಾಗಿದ್ದು, ವಿವಿಯ ಭ್ರಷ್ಟಾಚಾರದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ. ದಾಳಿಯ ಸಂದರ್ಭದಲ್ಲಿ ವಿವಿಯ ಡೆಪ್ಯೂಟಿ ರಿಜಿಸ್ಟ್ರಾರ್ ಸೇರಿದಂತೆ 12 ಜನ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಶಂಕರಘಟ್ಟ, ಬಿಆರ್‌ಪಿ, ತರೀಕೆರೆ, ಲಕ್ಕವಳ್ಳಿಗಳಲ್ಲಿರುವ ಸಿಬ್ಬಂದಿಯ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿವಿಯ ಸಿಂಡಿಕೇಟ್ ವಿಭಾಗದ ಡೆಪ್ಯೂಟಿ ರಿಜಿಸ್ಟ್ರಾರ್ ಎ.ಆರ್. ಬಸವರಾಜ್, ಪರೀಕ್ಷಾಂಗ ವಿಭಾಗದಲ್ಲಿ ದೂದ್ಯಾನಾಯ್ಕಾ ಸಿದ್ದಾಚಾರಿ, ಬಯೋಟೆಕ್ನಾಲಜಿ ವಿಭಾಗದ ಶಿವಕುಮಾರ್, ವಿಜ್ಞಾನ ವಿಭಾಗದ ಎಲ್. ರಾಮು, ಮ್ಯಾನ್ ಪವರ್ ಏಜೆನ್ಸಿಯಿಂದ ನೇಮಕಗೊಂಡಿದ್ದ ಅಟೆಂಡರ್ ದೇವರಾಜ್ ಸೇರಿದಂತೆ ಸರಿ ಸುಮಾರು 12ಕ್ಕೂ ಅಧಿಕ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇವರಿಂದ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆ, ನಕಲಿ ಅಂಕಪಟ್ಟಿಗಳು, ನಕಲಿ ಸೀಲು, ಲ್ಯಾಮಿನೇಷನ್ ಯಂತ್ರ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೊದಲು ಅಟೆಂಡರ್ ದೇವರಾಜ್‌ನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆತನ ಮನೆಯಿಂದ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅನಂತರ ಆತ ನೀಡಿದ ಮಾಹಿತಿಯ ಮೇಲೆ ಪೊಲೀಸರು ಇತರರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋಲ್‌ಮಾಲ್:
ಇತ್ತೀಚೆಗೆ ಕೆಎಚ್‌ಬಿ ಎಂಜಿನಿಯರ್ ಹಾಲೇಶಪ್ಪಎಂಬವರ ವಿರುದ್ದ ನಕಲಿ ಅಂಕಪಟ್ಟಿ ಪಡೆದ ಆರೋಪ ಕೇಳಿ ಬಂದಿತ್ತು. ಈ ಕುರಿತು ಪರೀಕ್ಷಾಂಗ ವಿಭಾಗದ ಅಧಿಕಾರಿ ರಾಮೇಗೌಡರು ಭದ್ರಾವತಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ, ವಿವಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಈ ಹಗರಣದ ಸುಳಿವು ಪೊಲೀಸರಿಗೆ ಲಭ್ಯವಾಗಿತ್ತು. ಪೊಲೀಸರು ಈ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ, ನಿನ್ನೆ ಸಿಬ್ಬಂದಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
Please follow and like us:
error