fbpx

ದ್ರಾವಿಡ ಚಳವಳಿಯ ದುರಂತ

ಮನುಷ್ಯನಲ್ಲಿ ಹೊಸ ಕನ

ಸುಗಳನ್ನು ಬಿತ್ತುವ ಪ್ರಯೋಗಗಳು ಯಾಕೆ ಹೀಗೆ ವಿಫಲಗೊಳ್ಳುತ್ತವೆ? ಸಹಜೀವಿಗಳೊಂದಿಗೆ ಸೌಹಾರ್ದದ ಬದುಕು ಯಾಕೆ ಸಾಧ್ಯವಾಗುವುದಿಲ್ಲ? ಮನುಷ್ಯನಲ್ಲಿರುವ ಸ್ವಾರ್ಥ, ದ್ವೇಷ ತೊಲಗಿ ಪ್ರೀತಿಯ ಬಳ್ಳಿ ಏಕೆ ಅರಳುವುದಿಲ್ಲ? ಈ ಪ್ರಶ್ನೆಗೆ ಸಂತರು, ಅನುಭವಿಗಳು, ಅವಧೂತರು, ಕ್ರಾಂತಿಕಾರಿಗಳು ಉತ್ತರ ಹುಡುಕಲು ಶತಮಾನದಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಉತ್ತರವಿನ್ನು ದೊರಕಿಲ್ಲ. ಐದು ಸಾವಿರ ವರ್ಷದಿಂದ ಮನುಷ್ಯ ಹೀಗೇ ಇದ್ದಾನೆ ಎಂಬುದು ಮಾತ್ರ ಸತ್ಯ.

ತಮಿಳುನಾಡು ಮುಖ್ಯಮಂತ್ರಿ, ಅಣ್ಣಾ ಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ ಭ್ರಷ್ಟಾಚಾರದ ಆರೋಪ ಸಾಬೀತಾಗಿ ಜೈಲಿಗೆ ಹೋದಾಗ ಮನುಷ್ಯ ಅಂದರೆ ಹೀಗೇ ಎಂದು ಸಹಜವಾಗಿ ಅನಿಸಿತು. ಲಂಚ ತಿಂದವರು ಜೈಲಿಗೆ ಹೋಗಿದ್ದು ಇದೇ ಮೊದಲ ಸಲವಲ್ಲ. ಉಮಾಭಾರತಿ, ಶಿಬು ಸೊರೆನ್, ಲಾಲು ಪ್ರಸಾದ್ ಯಾದವ್, ಬಿ.ಎಸ್. ಯಡಿಯೂರಪ್ಪ, ಚೌತಾಲಾ ಹೀಗೆ ಕೆಲವರು ಕತ್ತಲು ಕೋಣೆ ಕಂಡು ಬಂದಿದ್ದಾರೆ. ಮುಖಕ್ಕೆ ಅಂಟಿಕೊಂಡ ಹೊಲಸನ್ನು ಒರೆಸಿಕೊಂಡು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸಿಕ್ಕ ಅಧಿಕಾರವನ್ನು ನಾಚಿಕೆಯಿಲ್ಲದೆ ಅನುಭವಿಸಿದ್ದಾರೆ.
ಆದರೆ, ಜಯಲಲಿತಾ ಬಗ್ಗೆ ಅಷ್ಟು ಹಗುರವಾಗಿ ವ್ಯಾಖ್ಯಾನಿಸಲು ಆಗುವುದಿಲ್ಲ. ಈಕೆ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂಗೆ ಸೇರಿದ ಮುಖ್ಯಮಂತ್ರಿ. ಈ ಪಕ್ಷದ ಮೂಲ ದ್ರಾವಿಡ ಚಳವಳಿ ಪುರೋಹಿತಶಾಹಿ ಶೋಷಿತ ವರ್ಗಗಳ ವಿರುದ್ಧ ಬಂಡಾಯವೆದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಈ ದ್ರಾವಿಡ ಪಕ್ಷಗಳಿಗೆಲ್ಲ ಮೂಲ ಪುರುಷ. ಅವರು ಐವತ್ತರ ದಶಕದಲ್ಲಿ ಸ್ಥಾಪಿಸಿದ ದ್ರಾವಿಡ ಕಳಗ ಮುಂದೆ ಟಿಸಿಲುಗಳಾಗಿ ಒಡೆದು ಡಿಎಂಕೆ, ಅಣ್ಣಾ ಡಿಎಂಕೆ, ಎಂಡಿಎಂಕೆ ಪಕ್ಷಗಳೆಲ್ಲ ಹುಟ್ಟಿಕೊಂಡವು. ಕರ್ನಾಟಕ ಮೂಲದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಆರಂಭಿಸಿದ ದ್ರಾವಿಡ ಆಂದೋಲನ ದೇಶದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಉತ್ತರ ಭಾರತದ ಆರ್ಯ ಮೂಲಕ ಶಕ್ತಿಗಳ ವಿರುದ್ಧ ದಕ್ಷಿಣ ಭಾರತದ ದ್ರಾವಿಡ ಸಮುದಾಯ ಒಂದಾಗಬೇಕು. ಮೂಢನಂಬಿಕೆ, ಕಂದಾಚಾರಗಳನ್ನು ತೊರೆಯಬೇಕು. ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ಪೆರಿಯಾರರನ್ನು ತಮಿಳುನಾಡಿನ ಜನ ತಂದೆ ಪೆರಿಯಾರ್ ಎಂದು ಕರೆದರು. ಹಿಂದೂ ದೇವಾಲಯಗಳಲ್ಲಿ ಕಾಣುತ್ತಿದ್ದ ಅಸ್ಪಶ್ಯತೆ, ಅಂಧಶ್ರದ್ಧೆ, ಪುರೋಹಿತರ ವಂಚನೆ ಇವುಗಳಿಂದ ರೋಸಿ ಹೋಗಿದ್ದ ಪೆರಿಯಾರ್‌ರ ಮೇಲೆ ರಶ್ಯದಲ್ಲಿ 1917ರಲ್ಲಿ ನಡೆದ ಸಮಾಜವಾದಿ ಕ್ರಾಂತಿಯೂ ಪರಿಣಾಮ ಬೀರಿತ್ತು. ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಸಾಹಿತ್ಯವನ್ನು ವಿದೇಶದಿಂದ ತರಿಸಿ ಓದಿದ್ದರು.
    ಹೀಗೆ ಜನರಲ್ಲಿ ವೈಚಾರಿಕ ಪ್ರಶ್ನೆ ಮೂಡಿಸಲು ಬಿರುಗಾಳಿಯಾದ ಪೆರಿಯಾರ್‌ರನ್ನು ಕಾಣಲು ಡಾ. ಅಂಬೇಡ್ಕರ್ ಆಗ ಮದ್ರಾಸಿಗೆ ಬಂದಿದ್ದರು. ಪೆರಿಯಾರ್‌ರ ಕಂದಾಚಾರ ವಿರೋಧಿ ಹೋರಾಟ ಯಾವ ತೀವ್ರತೆ ಪಡೆಯಿತೆಂದರೆ ಜನರನ್ನು ಕಂದಾಚಾರಕ್ಕೆ ತಳ್ಳಿದ ವೌಢ್ಯದ ಸಂಕೇತಗಳಿಗೆ ಚಪ್ಪಲಿಯಿಂದ ಹೊಡೆಯುವ ಕಾರ್ಯಕ್ರಮಗಳನ್ನು ಅವರು ರಾಜ್ಯಾದ್ಯಂತ ನಡೆಸಿದರು. ಬ್ರಾಹ್ಮಣದ ಕೊರಳಲ್ಲಿದ್ದ ಜನಿವಾರವನ್ನು ಹರಿದು ಬಿಸಾಡುವ ಆಂದೋಲನವನ್ನು ಹಮ್ಮಿಕೊಂಡರು. ‘ಇದೆಲ್ಲ ಅತಿರೇಕ ಎಂದು ಗೊತ್ತಿದ್ದರೂ ಅಮಾಯಕ ಜನರಲ್ಲಿ ದೇವರ ಬಗೆಗಿರುವ ಭಯವನ್ನು ತೊಲಗಿಸಲು ಅನಿವಾರ್ಯ ಎಂದು ಸಾರಿದರು. ಎಪ್ಪತ್ತರ ದಶಕದಲ್ಲಿ ಪ್ರೊ. ನಂಜುಂಡಸ್ವಾಮಿ ಅವರು ಕರ್ನಾಟಕ ವಿಚಾರವಾದಿ ಚಳವಳಿ ಆರಂಭಿಸಿ ಪೆರಿಯಾರ್‌ರನ್ನು ಬೆಂಗಳೂರಿಗೆ ಕರೆತಂದಾಗ ನಾನು ಅವರನ್ನು ನೋಡಲು ಬಿಜಾಪುರದಿಂದ ಬೆಂಗಳೂರಿಗೆ ಬಂದಿದ್ದೆ. ಪೆರಿಯಾರ್‌ರಿಗೆ ಆಗ ತೊಂಬತ್ತರ ಪ್ರಾಯ. ಆದರೆ, ಅವರ ಮಾತಿನಲ್ಲಿ ಅದೇ ಸ್ಪಷ್ಟತೆ, ಛಲವಂತಿಕೆ ಇತ್ತು. ಕನ್ನಡದಲ್ಲೇ ಅವರ ತಮ್ಮ ವಿಚಾರ ಮಂಡಿಸಿದ್ದರು. ಇಂಥ ಪೆರಿಯಾರ್ ಕಟ್ಟಿದ ದ್ರಾವಿಡ ಚಳವಳಿ ಅರವತ್ತರ ದಶಕದಲ್ಲಿ ಇಬ್ಭಾಗವಾಯಿತು. ಪೆರಿಯಾರ್ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ ಅಣ್ಣಾ ದೊರೈ ದ್ರಾವಿಡ ಕಳಗಂನಿಂದ ಹೊರಗೆ ಬಂದರು. ‘ದ್ರಾವಿಡ ಮುನ್ನೆತ್ರ ಕಳಗಂ’ ಎಂಬ ಪ್ರತ್ಯೇಕ ಪಕ್ಷ ಕಟ್ಟಿದರು. ಚುನಾವಣಾ ರಾಜಕೀಯಕ್ಕೆ ಇಳಿದು ಲೋಕಸಭೆಗೆ ಗೆದ್ದು ಬಂದರು. ನಂತರ ರಾಜ್ಯದ ಮುಖ್ಯಮಂತ್ರಿಯಾದರು. ಕರುಣಾನಿಧಿ ಅಣ್ಣಾ ದೊರೈ ಅವರ ಖಾಸಾ ಶಿಷ್ಯ. ಅಣ್ಣಾದೊರೈ ನಂತರ ಕರುಣಾನಿಧಿ ಡಿಎಂಕೆ ಸಾರಥ್ಯ ವಹಿಸಿದರು. ಆಗ ದ್ರಾವಿಡ ಚಳವಳಿಯಿಂದ ಆಕರ್ಷಿತರಾಗಿ ತಮಿಳು ಚಿತ್ರರಂಗದ ಹೆಸರಾಂತ ನಟರು, ನಿರ್ದೇಶಕರು, ಗೀತೆ ರಚನೆಕಾರರು ಡಿಎಂಕೆ ಸೇರಿದರು. ಮುಂದೆ ಮುಖ್ಯಮಂತ್ರಿಯಾದ ಕರುಣಾನಿಧಿ ಕೂಡ ಕಥಾ ರಚನಕಾರರಾಗಿದ್ದರು. ವೈಚಾರಿಕವಾಗಿ ಪೆರಿಯಾರ್‌ರಿಗೆ ನಿಷ್ಠರಾಗಿದ್ದ ಕರುಣಾನಿಧಿ ರಾಜ್ಯದ ಮುಖ್ಯಮಂತ್ರಿಯಾದರು. ಆಗ ಅವರೊಂದಿಗೆ ಭಿನ್ನಾಭಿಪ್ರಾಯ ತಾಳಿದ ತಮಿಳು ಚಿತ್ರರಂಗದ ನಾಯಕ ನಟ ಎಂ.ಜಿ.ರಾಮಚಂದ್ರನ್ ಪಕ್ಷದಿಂದ ಸಿಡಿದು ಹೋಗಿ ತಮ್ಮದೆ ಅಣ್ಣಾ ಡಿಎಂಕೆ ಪಕ್ಷವನ್ನು ಸ್ಥಾಪಿಸಿದರು. ಆಗ ಸಿನೆಮಾಗಳಲ್ಲಿ ಎಂಜಿಆರ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಿದ್ದ ಮೈಸೂರಿನ ಮೇಲುಕೋಟೆಯ ಅಯ್ಯಂಗಾರಿ ಯುವತಿ ಜಯಲಲಿತಾ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪೆರಿಯಾರ್‌ರ ವೈಚಾರಿಕ ಪ್ರತಿಭೆಯಿಂದ ಬೆಳಗುತ್ತಿದ್ದ ದ್ರಾವಿಡ ಚಳವಳಿಗೆ ಬಣ್ಣದ ಗ್ಲಾಮರ್ ಜಗತ್ತಿನ ಪ್ರವೇಶವಾಯಿತು. ಕರುಣಾನಿಧಿಯಂತೆ ಎಂಜಿಆರ್‌ಗೆ ವೈಚಾರಿಕ ಬದ್ಧತೆ ಇರಲಿಲ್ಲ. ಅಂತಲೆ ಅವರು ತನ್ನ ನಾಯಕ ನಟಿ ಜಯಲಲಿತಾರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ವೈಚಾರಿಕ ಜಾಗೃತಿ ಮೂಡಿಸಿದ್ದ ದ್ರಾವಿಡ ಚಳವಳಿ ಅಂದರೆ ಅಣ್ಣಾಡಿಎಂಕೆಯನ್ನು ಜಯಲಲಿತಾ ತನ್ನ ಸೆರಗಿಗೆ ಕಟ್ಟಿಕೊಂಡರು. ಸಿದ್ಧಾಂತ, ಆದರ್ಶಗಳೆಲ್ಲ ಮಣ್ಣು ಪಾಲಾದವು. ರಾಜಕೀಯ ಅಧಿಕಾರ ಪಡೆದು ಆಸ್ತಿ, ಐಶ್ವರ್ಯ ಸಂಪಾದಿಸಿಕೊಳ್ಳುವುದೇ ಈಕೆಯ ಆದ್ಯತೆ ಆಯಿತು. ಕರುಣಾನಿಧಿ ತನ್ನ ಮೂವರು ಹೆಂಡಂದಿರ ಮಕ್ಕಳನ್ನು ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡಿದರೆ ಈ ಜಯಲಲಿತಾ ತನ್ನ ಆತ್ಮೀಯ ಗೆಳತಿ ಶಶಿಕಲಾ ಪರಿವಾರವನ್ನು ಬೆಳೆಸಿದರು. ದ್ರಾವಿಡ ಪಕ್ಷಗಳ ಈ ವೈಷಮ್ಯದಿಂದ ತಮಿಳುನಾಡಿನಲ್ಲಿ ಈಗ ಸಂಘಪರಿವಾರ ಪ್ರವೇಶವಾಗಿದೆ. ಒಂದು ಕಾಲದಲ್ಲಿ ಮೂಢನಂಬಿಕೆ, ಕಂದಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ರಾಜ್ಯದಲ್ಲಿ ದೇವಾಲಯಗಳ ಸುತ್ತ ಪುರೋಹಿತಶಾಹಿ ಹುತ್ತ ನಿರ್ಮಾಣವಾಗಿದೆ. ಅದಷ್ಟೇ ಅಲ್ಲ ಹಿಂದೂ ಕೋಮುವಾದ ಹಳ್ಳಿ ಹಳ್ಳಿಗೆ ಪ್ರವೇಶಿಸಿದೆ. ಎಪ್ಪತ್ತರ ದಶಕದವರೆಗೆ ಇಲ್ಲಿ ಆರೆಸ್ಸೆಸ್ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಪೆರಿಯಾರ್ ಈಗ ಬದುಕಿದ್ದರೆ ತಾನು ನೀರು ಹಾಕಿ ಬೆಳೆಸಿದ ಸ್ವಾಭಿಮಾನಿ, ವಿಚಾರವಾದಿ ಚಳವಳಿಯ ಈ ದುರಂತ ಕಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಜಯಲಲಿತಾ ಜೈಲು ಪಾಲಾಗಿದ್ದಾರೆ. ಕರುಣಾನಿಧಿ ತನ್ನ ಮಕ್ಕಳ ಅಧಿಕಾರ ದಾಹ, ಹಣದ ದಾಹ ತೃಪ್ತಿ ಪಡಿಸಲು ಹೆಣಗಾಡುತ್ತಿದ್ದಾರೆ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಕಮ್ಯೂನಿಸ್ಟ್ ಚಳವಳಿ ಈಗ ಮುಂಚಿನ ಪ್ರಖರತೆ ಉಳಿಸಿಕೊಂಡಿಲ್ಲ. ದಾರಿ ತಪ್ಪಿದ ಜಯಲಲಿತಾ ಜೊತೆಗೆ ಒಂದೆರೆಡು ಸೀಟಿಗಾಗಿ ಮೈತ್ರಿ ಮಾಡಿಕೊಳ್ಳಲು ಬರ್ದನ್, ಕಾರಟ್, ರಾಜಾ ಆಕೆಯ ಬಾಗಿಲಲ್ಲಿ ನಿಂತಿದ್ದು ಚರಿತ್ರೆಯ ವ್ಯಂಗ್ಯ.
ಅಂತಲೇ ಮನುಷ್ಯನನ್ನು ಸರಿದಾರಿಗೆ ತರಲು, ಸಂತರು, ಪ್ರವಾದಿಗಳು, ಶರಣರು, ಕ್ರಾಂತಿಕಾರಿಗಳು ಎಷ್ಟೇ ಪ್ರಯಾಸ ಪಟ್ಟರೂ ಪ್ರಯೋಜನವಾಗುವುದಿಲ್ಲ. ಮನುಷ್ಯ ತನ್ನ ಚಾಳಿ ಬಿಡುವುದಿಲ್ಲ ಎಂದು ಅನೇಕ ಬಾರಿ ಅನಿಸುತ್ತದೆ. ಆದರೆ, ಹಾಗೆಂದು ಕಂದಾಚಾರವನ್ನು, ಶೋಷಣೆಯನ್ನು ಕೋಮುವಾದವನ್ನು ಒಪ್ಪಿಕೊಳ್ಳಬೇಕೇ? ಸಾಧ್ಯವೇ ಇಲ್ಲ. ಈ ವ್ಯಾಧಿಗಳ ವಿರುದ್ಧ ಹೋರಾಡಿ ಮದ್ದು ನೀಡುತ್ತಲೇ ಇರಬೇಕು; ಎಂದಿಗೂ ಮೈಮರೆಯಬಾರದು. ಯಾವುದೇ ವ್ಯವಸ್ಥೆ ಬರಲಿ ಅಧಿಕಾರದಲ್ಲಿರುವವರಿಗೆ ಮದ ಏರುವುದು ಸಹಜ. ಈ ಅಧಿಕಾರ ಮದಕ್ಕೆ ತಿವಿಯಲು ಜನ ಸದಾ ಅಂಕುಶವಾಗಿ ನಿಲ್ಲುವದೊಂದೇ ಉಳಿದ ದಾರಿ.
courtesy :varthabarathi
Please follow and like us:
error

Leave a Reply

error: Content is protected !!