fbpx

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಕೊಪ್ಪಳ ನ. ೦೩ (ಕ ವಾ)ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಕಿ.ಮೀ. ೦.೦೦ ರಿಂದ ೬೯.೦೦ ರವರೆಗೆ ಎಡ ಮತ್ತು ಬಲ ದಡಗಳಿಂದ ೧೦೦ ಮೀ. ವ್ಯಾಪ್ತಿಯ ಪ್ರದೇಶದಲ್ಲಿ ನ. ೧೦ ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಆದೇಶ ಹೊರಡಿಸಿದ್ದಾರೆ.
     ಈ ವರ್ಷ ಮಳೆಯ ಅಭಾವದಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ.  ತುಂಗಭದ್ರಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಅಭಾವವಿದೆ. ರೈತರು ತಮ್ಮ ಗದ್ದೆಗಳಿಗೆ ನೀರುಣಿಸಲು ವಿತರಣಾ ಕಾಲುವೆಗಳ ಹತ್ತಿರ ಗುಂಪಾಗಿ ಬಂದು ವಿತರಣಾ ಕಾಲುವೆ ಗೇಟುಗಳನ್ನು ಮನಬಂದಂತೆ ಎತ್ತಿ ಹರಿಸಿಕೊಳ್ಳುತ್ತಿದ್ದು, ನೀರು ಪೋಲಾಗಿ ಹರಿದು ಹೋಗುತ್ತಿರುವುದರಿಂದ ಸಿಂಧನೂರು ಮತ್ತು ಸಿರವಾರ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗುತ್ತಿದೆ.  ಅಲ್ಲದೆ ಕೆಲ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ.  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ಅಧಿಕೃತ ಅಚ್ಚುಕಟ್ಟುದಾರರಿಗೆ, ಕಾಲುವೆಯ ಕೆಳಗಿನ ವಿಭಾಗಗಳಾದ ಸಿಂಧನೂರು, ಸಿರವಾರ, ರಾಯಚೂರು ಅಚ್ಚುಕಟ್ಟು ಪ್ರದೇಶಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸಲು ಹಾಗು ನಿಗದಿತ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ತುಂಗಭದ್ರಾ ಕಾಲುವೆ ವಿಭಾಗದ ಅಧಿಕಾರಿಗಳು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಕಿ.ಮೀ. ೦.೦೦ ರಿಂದ ೬೯.೦೦ ರವರೆಗೆ (ಡಿಸ್ಟ್ರಿಬ್ಯೂಟರಿ ನಂ. ೧೭, ೧೮, ೧೯, ೨೦, ೨೧, ೨೨, ೨೩, ೨೩ಎ, ೨೫, ೨೭, ೨೯, ೨೯, ೩೧, ೩೧, ೩೨, ೩೩ ಗಳಲ್ಲಿ) ಎಡ ಮತ್ತು ಬಲ ದಡಗಳಿಂದ ೧೦೦ ಮೀ. ಅಂತರದ ವ್ಯಾಪ್ತಿಯ ಪ್ರದೇಶಲ್ಲಿ ನ. ೦೨ ರಿಂದ ೧೦ ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.  ಇದರ ಅನ್ವಯ ನಿರ್ಬಂಧಿತ ಸ್ಥಳದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ನಿಯೋಜಿಸಲ್ಪಟ್ಟ ಸಿಬ್ಬಂದಿಗೆ ಮಾತ್ರ ಪ್ರವೇಶವಿರುತ್ತದೆ.  ಪ್ರತಿಯೊಂದು ಡಿಸ್ಟ್ರಿಬ್ಯೂಟರಿಗಳಲ್ಲಿ ನಿಯಮಾನುಸಾರ ಎಷ್ಟು ನೀರು ಹರಿಸಬೇಕೋ ಅಷ್ಟನ್ನು ಮಾತ್ರ ಹರಿಸಬೇಕು.  ನೀರು ಪೂರೈಕೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗುವಂತಿಲ್ಲ.  ನಿಷೇಧಿತ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದ್ದು, ಈ ಆದೇಶ ಮದುವೆ, ಶವಸಂಸ್ಕಾರ ಅಥವಾ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!