ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಿ- ಅಮರೇಶ್ ಕುಳಗಿ.

ಕೊಪ್ಪಳ ಜ. ೦೭ (ಕ ವಾ) ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾಗಿರುವುದರಿಂದ, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬರುವ ಸಾಧ್ಯತೆಗಳಿದ್ದು, ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳಿಗೆ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸ್ವಲ್ಪ ಮಟ್ಟಿಗೆ ಆಗಿದ್ದರೂ, ಹಿಂಗಾರು ಸಂಪೂರ್ಣ ವಿಫಲವಾಗಿದೆ.  ಇದರಿಂದಾಗಿ ಜಿಲ್ಲೆಯ ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಬೇಸಿಗೆಯಲ್ಲಿ ಅಂತರ್ಜಲ ಮಟ್ಟವೂ ಕುಸಿಯುವ ಸಾಧ್ಯತೆ ಇದೆ.  ಬೇಸಿಗೆಯಲ್ಲಿ ಕುಡಿಯುವ ನೀರಿನ ಯಾವುದೇ ತೊಂದರೆ ತಲೆದೋರದಂತೆ, ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಹೇಳಿದರು.  ಇದಕ್ಕೆ ದನಿಗೂಡಿಸಿದ ಜಿ.ಪಂ. ಸದಸ್ಯ ಜನಾರ್ಧನ ಹುಲಿಗಿ ಅವರು, ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ, ಎಡದಂಡೆ ಮುಖ್ಯ ಕಾಲುವೆಯಲ್ಲಿ ಜ. ೧೫ ರ ನಂತರ ನೀರು ಹರಿವು ಸ್ಥಗಿತಗೊಳ್ಳಲಿದೆ.  ಪ್ರತಿ ವರ್ಷ ನೀರಿನ ಸಂಗ್ರಹ ಹೆಚ್ಚು ಇರುತ್ತಿತ್ತು.  ಹೀಗಾಗಿ ಮಾರ್ಚ್ ಅಂತ್ಯದವರೆಗೂ ಕಾಲುವೆಯಲ್ಲಿ ನೀರು ಹರಿಯುತ್ತಿತ್ತು.  ಆದರೆ ಈ ವರ್ಷ ನೀರು ಕಡಿಮೆ ಇದ್ದು, ಜ. ೧೫ ರಿಂದ ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳ್ಳಲಿದೆ.  ಇದರಿಂದಾಗಿ ಈ ಭಾಗದ ಗ್ರಾಮಗಳಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲಿದೆ ಎಂದರು.  ಜಿ.ಪಂ. ಸದಸ್ಯ ವಿಜಯಲಕ್ಷ್ಮಿ ರಾಮಕೃಷ್ಣ ಅವರು ಮಾತನಾಡಿ, ಆನೆಗೊಂದಿ, ಶ್ರೀರಾಮನಗರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಗೊಂಡಿಲ್ಲ.  ಆನೆಗೊಂದಿಗೆ ನೀರು ಶುದ್ಧೀಕರಣಗೊಳಿಸಿ ಪೂರೈಸದೆ, ಕಲುಷಿತ ನೀರನ್ನೇ ಪೂರೈಸಲಾಗುತ್ತಿದೆ ಎಂದರೆ, ಜಿ.ಪಂ. ಸದಸ್ಯೆ ವನಿತಾ ಗಡಾದ್ ಅವರು, ನರೇಗಲ್, ಮಾದಿನೂರ, ಲೇಬಗೇರಿ ಗ್ರಾಮಗಳ ಪರಿಶಿಷ್ಟರ ಕಾಲೋನಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಬೋರ್‌ವೆಲ್ ಕೊರೆಯಿಸಿ, ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
೩೬೬ ಕೋಟಿ ಹಿಂಗಾರು ಬೆಳೆ ನಷ್ಟ : ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ.  ಇದರಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ.  ಹಿಂಗಾರು ಹಂಗಾಮಿನಲ್ಲಿ ೧. ೬೨ ಲಕ್ಷ ಹೆ. ಬಿತ್ತನೆಯಾಗಿದ್ದು, ಈ ಪೈಕಿ ೧. ೪೩ ಲಕ್ಷ ಹೆ. ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ.  ಇದರಿಂದಾಗಿ ೩೬೬ ಕೋಟಿ ರೂ. ಗಳ ಹಿಂಗಾರು ಬೆಳೆ ಹಾನಿ ಅಂದಾಜಿಸಲಾಗಿದೆ.  ನಿಯಮಾನುಸಾರ ಮಳೆ ಆಶ್ರಿತ ಜಮೀನಿನ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ೬೮೦೦ ರೂ. ಪರಿಹಾರ ನೀಡಲು ಅವಕಾಶವಿದೆ.  ಅದೇ ರೀತಿ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. ೧೫೫೦೦ ಹಾಗೂ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. ೧೯೦೦೦ ರೂ. ಪರಿಹಾರಕ್ಕೆ ಅವಕಾಶವಿದೆ.  ಈಗಾಗಲೆ ಬೆಳೆ ಹಾನಿ ಕುರಿತು ವರದಿ ಸಲ್ಲಿಸಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಸಭೆಗೆ ಮಾಹಿತಿ ನೀಡಿದರು.
ಇಂಗ್ಲೀಷ್, ಗಣಿತ ಶಿಕ್ಷಕರ ಕೊರತೆ : ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಇಂಗ್ಲೀಷ್ ಮತ್ತು ಗಣಿತ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಇದರಿಂದಾಗಿ ಜಿಲ್ಲೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಇಂಗ್ಲೀಷ್ ಮತ್ತು ಗಣಿತ ವಿಷಯದಲ್ಲಿ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದು, ಫಲಿತಾಂಶದ ಪ್ರಮಾಣ ಕುಸಿಯುತ್ತಿದೆ.  ಫಲಿತಾಂಶ ಸುಧಾರಣೆಯಾಗಲು ಹೇಗೆ ಸಾಧ್ಯ ಎಂದು ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಶ್ಯಾಮಸುಂದರ್ ಅವರು, ಜಿಲ್ಲೆಯಲ್ಲಿ ೧೪೪೭ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಮತ್ತು ೨೮೫ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.  ಇಂಗ್ಲೀಷ್ ಮತ್ತು ಗಣಿತ ವಿಷಯಗಳ ಶಿಕ್ಷಕರ ಸಂಖ್ಯೆಯಲ್ಲಿ ಕೊರತೆ ಇದ್ದರೂ, ಇರುವ ಶಿಕ್ಷಕರನ್ನೇ ತರಬೇತುಗೊಳಿಸಿ, ವಿಷಯ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ.  ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನ ಬದಲಾಗಿದ್ದರಿಂದ, ಫಲಿತಾಂಶದಲ್ಲಿ ಕುಸಿತವಾಗಿತ್ತು.  ಈ ವರ್ಷ ಫಲಿತಾಂಶ ಸುಧಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ : ಜ. ೧೭ ರಿಂದ ಪ್ರಾರಂಭವಾಗುವ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಎಲ್ಲ ಪಾಲಕರು ತಮ್ಮ ೦೫ ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆಯನ್ನು ಹಾಕಿಸುವಂತೆ ಜಿ.ಪಂ. ನ ಎಲ್ಲ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿ, ಯಶಸ್ವಿಗೆ ಸಹಕರಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮನವಿ ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವೀರೇಶ್ ಸಾಲೋಣಿ, ಅರವಿಂದಗೌಡ ಪಾಟೀಲ್, ಪರಸಪ್ಪ ಕತ್ತಿ ಸೇರಿದಂತೆ ಜಿಲ್ಲಾ ಪಂಚಾಯತಿ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.  ಜಿ.ಪಂ. ವಿಶೇಷ ಸಭೆಯ ನಂತರ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು ಅಧಿಕಾರಿಗಳೊಂದಿಗೆ ಫೋಟೋ ತೆಗೆಯಿಸಿಕೊಂಡಿದ್ದು ವಿಶೇಷವಾಗಿತ್ತು.

Please follow and like us:
error