fbpx

ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯ- ಪಿ.ಎಸ್. ಮಂಜುನಾಥ್

 ಸರ್ಕಾರಿ ನೌಕರರು ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದ್ದು, ನೌಕರರ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅತ್ಯಂತ ಅಗತ್ಯವಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಹೇಳಿದರು.
  ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕ್ರೀಡಾಕೂಟಗಳನ್ನು ಆರೋಗ್ಯ ಕಾಪಾಡುವ ಉದ್ದೇಶದಿಂದ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ವೃದ್ಧಿಸುವ ದೃಷ್ಟಿಕೋನವನ್ನು ಇಟ್ಟುಕೊಂಡು ಏರ್ಪಡಿಸಲಾಗುತ್ತಿದೆ.  ಸರ್ಕಾರಿ ನೌಕರರು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ, ದಕ್ಷತೆಯಿಂದ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ.  ಉತ್ತರ ಕರ್ನಾಟಕದಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ, ಇರುವ ಅಧಿಕಾರಿ, ಸಿಬ್ಬಂದಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಬೀಳುತ್ತಿದ್ದು, ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದಾಗಿ ನೌಕರರು ನಿವೃತ್ತಿಯ ಅಂಚಿಗೆ ಬರುವ ಮುನ್ನವೇ ವಿವಿಧ ರೋಗಗಳಿಗೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ.  ದೇಹ ಮತ್ತು ಮನಸ್ಸು ಚೈತನ್ಯದಾಯಕವಾಗಿ ಇರಬೇಕಾದರೆ, ನೌಕರರು ಕ್ರೀಡೆ ಹಾಗೂ ವ್ಯಾಯಾಮದಂತಹ ಸೃಜನಶೀಲ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು.  ಉತ್ತಮ ಆರೋಗ್ಯವಿದ್ದಲ್ಲಿ ಮಾತ್ರ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಹೇಳಿದರು.
  ಕ್ರೀಡಾ ಧ್ವಜಾರೋಹಣ ನೆರವೇರಿಸಿದ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಅವರು ಮಾತನಾಡಿ, ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಣೆಯ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ.  ಸರ್ಕಾರಿ ನೌಕರರಿಗೆ ಉತ್ತಮ ಸೇವೆ ನೀಡುವ ಬದ್ಧತೆಯೂ ಹೆಚ್ಚಾಗಿರುತ್ತದೆ.  ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇರುವುದರಿಂದ, ಒತ್ತಡ ನಿವಾರಣೆ ನಿಟ್ಟಿನಲ್ಲಿ ದೈಹಿಕ ಮತ್ತು ಮಾನಿಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
       ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮನ್ನವರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಯಾವುದೇ ಇಲಾಖೆಯ ಕಚೇರಿಗಳಲ್ಲಿ ಸುಮಾರು ಶೇ. ೩೦ ರಿಂದ ೫೦ ರಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಉತ್ತಮ ಸರ್ಕಾರಿ ಸೇವೆಗೆ ತೊಡಕುಂಟಾಗಿದೆ.  ಮೂರು ತಿಂಗಳ ಒಳಗಾಗಿ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆ.  ಕ್ರೀಡಾಕೂಟಗಳು ಸರ್ಕಾರಿ ನೌಕರರ ನಡುವೆ ಸಾಮರಸ್ಯ ಮತ್ತು ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿವೆ.  ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕಳೆದೆರಡು ವರ್ಷಗಳಿಂದಲೂ ಜಿಲ್ಲೆಯ ನೌಕರರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿ ಬಂದಿದ್ದಾರೆ.  ಈ ಬಾರಿಯೂ ಅದೇ ಯಶಸ್ಸು ದೊರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
  ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಹಸಿಲ್ದಾರ್ ಪುಟ್ಟರಾಮಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸುಶಿಲೇಂದ್ರರಾವ್, ಡಾ. ಬಿ.ಕೆ. ಸಾಲಿ, ಧನಂಜಯ ಮಾಲಗಿತ್ತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣಯ್ಯ, ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.  ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿನ್ ಪ್ರಾರಂಭದಲ್ಲಿ ಸ್ವಾಗತಿಸಿದರು.  ಕ್ರೀಡಾಕೂಟದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.  ೪೫ ವರ್ಷ ವಯೋಮಿತಿಯೊಳಗಿನ ಪುರುಷ ಮತ್ತು ಮಹಿಳಾ ನೌಕರರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
Please follow and like us:
error

Leave a Reply

error: Content is protected !!