ವಿವೇಕಾನಂದರ ತತ್ವಗಳು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ

– ಶಂಕ್ರಯ್ಯ ಅಬ್ಬಿಗೇರಿಮಠ
ಕೊಪ್ಪಳ ಜ.೧೯  ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ ಎಂದು ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಅವರು ಹೇಳಿದರು.
  ವಾರ್ತಾ ಇಲಾಖೆಯು, ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್, ಎನ್.ಎಸ್.ಎಸ್. ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಯತ್ನಟ್ಟಿ ಗ್ರಾಮದ ಬಸವರಾಜೇಂದ್ರ ವಿರಕ್ತಮಠದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ’ ಕುರಿತ ವಿಚಾರಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

  ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಮಾತ್ರವಲ್ಲ, ಇಡೀ ಜಗತ್ತು ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ.  ಚಿಕಾಗೋ ನಲ್ಲಿನ ಅವರ ಭಾಷಣ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಘಟನೆಯಾಗಿದ್ದು,  ಅಂದು ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಹಾಗೂ ತತ್ವಜ್ಞಾನಕ್ಕೆ ವಿದೇಶಿಯರಿಂದಲೂ ಜೈಕಾರದ ಗೌರವವನ್ನು ವಿದೇಶಿ ನೆಲದಲ್ಲಿ ದೊರಕಿಸಿಕೊಟ್ಟಿದ್ದರು.  ಇದು ಭಾರತೀಯರಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೂ ಚೈತನ್ಯವನ್ನು ನೀಡಿತ್ತು.  ಜಗದ ಮಾನವೀಯತೆಯ ಬೆಳಕು, ಸರ್ವಧರ್ಮಗಳ ನೆಲೆವೀಡು ನಮ್ಮ ಭಾರತ ದೇಶ ಎಂದು ಹೇಳುವ ಮೂಲಕ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದ್ದರು.  ವಿವೇಕಾನಂದರ ಜೀವನಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯ.  ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಮೈಗೂಡಿಕೊಂಡರೆ, ಅದುವೇ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತೆ.  ತಮ್ಮ ಅಲ್ಪಾವಧಿಯಲ್ಲಿಯೇ ಅಗಾಧ ಸಾಧನೆ ಮಾಡಿದಂತಹ ಸ್ವಾಮೆ ವಿವೇಕಾನಂದರ ಆದರ್ಶ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ  ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದವರು.  ಯುವಕರಲ್ಲಿ ನವೋತ್ಸಾಹವನ್ನು ಕರೆಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು.  ದೇಶವನ್ನು ಸದೃಢ ರಾಷ್ಟ್ರವನ್ನಾಗಿಸಬೇಕಿದ್ದಲ್ಲಿ, ಭವಿಷ್ಯದ ಶಕ್ತಿಯೆಂದೇ ಬಿಂಬಿಸಲ್ಪಡುವ ಯುವಜನತೆಯನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸಬೇಕಾಗಿದೆ.  ದೇಶದ ಪ್ರತಿಭಾ ಪಲಾಯನವನ್ನು ತಡೆಗಟ್ಟಿ, ದೇಶಕ್ಕೆ ಸದ್ವಿನಿಯೋಗವಾಗುವಂತೆ ಮಾಡುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಹಿರೇಸಿಂದೋಗಿಯ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ ಅವರು ಮಾತನಾಡಿ, ಇಂದಿನ ಯುವಕರು ದೇಶಭಕ್ತಿ, ಆತ್ಮಾಭಿಮಾನ ಬೆಳೆಸಿಕೊಳ್ಳುವುದರ ಬದಲಿಗೆ ಮೋಜು ನಡೆಸುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.  ಮೋಟಾರು ವಾಹನಗಳ ಅಪಘಾತ ಪ್ರಕರಣಗಳಲ್ಲಿ ಯುವಜನತೆಯೇ ಹೆಚ್ಚು ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರಲ್ಲದೆ, ರಸ್ತೆ ಸುರಕ್ಷತಾ ನಿಯಮಗಳು, ಅಪಘಾತ ಸಂಭವಿಸಿದಾಗ ಸಾರ್ವಜನಿಕರ ಪ್ರಥಮ ಕರ್ತವ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
  ಕೊಪ್ಪಳ ಗ್ರಾಮೀಣ ಠಾಣೆಯ ಆರಕ್ಷಕ ನಿರೀಕ್ಷಕರಾದ ಮಹಾಂತೇಶ್ ಸಜ್ಜನ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು, ಯುವಜನರಿಗೆ ಆದರ್ಶಪ್ರಾಯ.  ಎನ್.ಎಸ್.ಎಸ್. ಶಿಬಿರಗಳು ಯುವಜನತೆಯ ಸಂಘಟನೆಗೆ ಹಾಗೂ ಶ್ರಮದಾನಕ್ಕೆ ಸಹಕಾರಿಯಾಗಲಿವೆ.  ದೇಶದಲ್ಲಿ ಜರುಗುವ ಅಪರಾಧಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ ಶೇ. ೪ ರಿಂದ ೫ ರಷ್ಟು ಪ್ರಕರಣಗಳಿಗೆ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತವೆ.  ಉಳಿದಂತೆ ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳ ಪರಿಣಾಮವಾಗಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.  ಯುವಕರು ಕಾನೂನಿನ ಮಹತ್ವವನ್ನು ಅರಿತು, ನಡೆದಲ್ಲಿ ಅಪರಾಧ ಸಂಖ್ಯೆಯನ್ನು ಕಡಿಮೆಗಳಿಸಲು ಸಾಧ್ಯವಿದೆ ಎಂದರು.
  ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎ.ಆರ್. ಶಿವಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು,  ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಜೆ. ಕೊಂಡಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಗ್ರಾ.ಪಂ. ಸದಸ್ಯರುಗಳಾದ ಬಸವರಾಜ ಬಂಡಿಹಾಳ, ದೇವೇಂದ್ರಪ್ಪ ಹೊಸಮನಿ, ಪಾಲಿಟೆಕ್ನಿಕ್‌ನ ವಾದಿರಾಜ ಮಠದ್, ಸಮುದಾಯ ಪಾಲಿಟೆಕ್ನಿಕ್‌ನ ನಾಸಿರುದ್ದೀನ್, ಮುಂತಾದವರು ಉಪಸ್ಥಿತರಿದ್ದರು.  ಎನ್.ಎಸ್.ಎಸ್. ಶಿಬಿರಾರ್ಥಿಗಳಾಗಿ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಯುವರಾಜ್ ಸ್ವಾಗತಿಸಿದರು, ರೋಹಿಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ನಾಗರತ್ನ ವಂದಿಸಿದರು.
Please follow and like us:
error