ವಿತ್ತೀಯ ನಿರ್ವಹಣೆ ಹಾಗೂ ಸಂಪನ್ಮೂಲ ಸಂಗ್ರಹಣೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಸ್ಥಾನದಲ್ಲಿ ಕರ್ನಾಟಕ

  ವಿತ್ತೀಯ ನಿರ್ವಹಣೆ ಹಾಗೂ ಸಂಪನ್ಮೂಲ ಸಂಗ್ರಹಣೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ  

ಸಿದ್ದರಾಮಯ್ಯ ಅವರು ರಾಜ್ಯ ವಿಧಾನ ಸಭೆಗೆ ಇಂದು ತಿಳಿಸಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು ಸ್ವಂತ ತೆರಿಗೆ ರಾಜಸ್ವವನ್ನು 69.870 ಕೋಟಿ ರೂ ಗುರಿಗೆ ಪ್ರತಿಯಾಗಿ ಜನವರಿ ಮಾಸಾಂತ್ಯಕ್ಕೆ 55,726 ಕೋಟಿ ರೂ ರಾಜಸ್ವ ಸಂಗ್ರಹಿಸಲಾಗಿದೆ. ಈ ಮೊತ್ತವು ಕಳೆದ ವರ್ಷಕ್ಕಿಂತಲೂ ಶೇಕಡಾ 14.3 ರಷ್ಟು ಹೆಚ್ಚಾಗಿದೆ. ಅಂತೆಯೇ, ವಾಣಿಜ್ಯ ತೆರಿಗೆಯಲ್ಲಿ 34,362 ಕೋಟಿ ರೂ ಸಂಗ್ರಹಿಸುವ ಮೂಲಕ ಕಳೆದ ಸಾಲಿಗಿಂತಲೂ ಶೇಕಡಾ 16.8 ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳನ್ನು ಪ್ರಕಟಿಸಿ, ರಾಜ್ಯದ ಸಂಪನ್ಮೂಲ ಸಂಗ್ರಹಣೆಯಲ್ಲಿ ಕುಸಿತ ಉಂಟಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಮುಖ್ಯಮಂತ್ರಿ ಸಾರಾಸಗಟಾಗಿ ತಳ್ಳಿ ಹಾಕಿದರು.
ತಮ್ಮ ಸರ್ಕಾರದಲ್ಲಿ ಲವಲವಿಕೆ, ಕ್ರಿಯಾಶೀಲತೆ, ಜೀವಂತಿಕೆ ಇರುವುದರಿಂದಲೇ ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ದಾಖಲೆ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹಣೆ ಮಾಡಿ, ವಿತ್ತೀಯ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ 130 ಟಿ ಎಂ ಸಿ ನೀರಿನ ಬಳಕೆಗಾಗಿ ಒಂಭತ್ತು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಎಂಟು ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ.
ಆಲಮಟ್ಟಿ ಅಣೆಕಟ್ಟಿನ ಎತ್ತರ 524.25 ಅಡಿ ಹೆಚ್ಚಿಸುವುದರಿಂದ ಮುಳುಗಡೆಯಾಗುವ 22 ಗ್ರಾಮಗಳ ಸರ್ವೇಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಹೊಸ ಕಾಯಿದೆ ಅನ್ವಯ ಭೂಸ್ವಾದೀನ ಪ್ರಕ್ರಿಯೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಯೋಜನೆಗಳಿಗೆ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನ ಮೀಸಲಿರಿಸಲು ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದು ಶ್ರೀ ಸಿದ್ದರಾಮಯ್ಯ ಅವರು ಸದನಕ್ಕೆ ಭರವಸೆ ನೀಡಿದರು.
ಆಂಧ್ರ ಪ್ರದೇಶ ಪುನವಿಂಗಡನಾ ಕಾಯಿದೆ ಪರಿಚ್ಛೇಧ 89 ರ ಉಪಬಂಧಗಳನ್ನು ಜಾರಿಗೊಳಿಸಲು ಕೃಷ್ಣಾ ಜಲ ವಿವಾದದ ನ್ಯಾಯಾಧಿಕರಣದ ಕಾಲಾವಧಿಯನ್ನು ದಿನಾಂಕ : 01-08-2014 ರಿಂದ ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ನ್ಯಾಯಾಧಿಕರಣವು ದಿನಾಂಕ : 24-07-2014 ರಂದು ಕಲಾಪಗಳನ್ನು ನಡೆಸಿ ರಾಜ್ಯಗಳ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಅದರಂತೆ, ಕರ್ನಾಟಕವು ದಿನಾಂಕ : 17-09-2014 ರಂದು ತನ್ನ ಪ್ರತಿಕ್ರಿಯೆಯನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಿದೆ. ಪರಿಚ್ಛೇಧ 89 ರ ವ್ಯಾಪ್ತಿಯ ಅವಿಭಜಿತ ಆಂಧ್ರ ಪ್ರದೇಶದ ಉತ್ತರಾಧಿಕಾರಿ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕರ್ನಾಟಕವು ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಪ್ರತಿಪಾದಿಸಲಾಗಿದೆ. ಮುಂದಿನ ಕಲಾಪ ಫೆಬ್ರವರಿ 25 ರಂದು ನಡೆಯಲಿದೆ ಎಂದರು.
ಭಾರತೀಯ ಜನತಾ ಪಕ್ಷವು ಅಧಿಕಾರದಲ್ಲಿದ್ದಾಗ ಕುಟೀರ ಜ್ಯೋತಿ ಹಾಗೂ ಭಾಗ್ಯ ಜ್ಯೋತಿ ಯೋಜನೆಗಳಲ್ಲಿನ ವಿದ್ಯುತ್ ಬಿಲ್ ಬಾಕಿ ಪಾವತಿಸದ ಫಲಾನುಭವಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿಯೇ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಿ, ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಿ ಬಡವರ ಮನೆಗಳಿಗೆ ಮಾತ್ರವಲ್ಲ, ಅವರ ಬಾಳಿಗೂ ಬೆಳಕು ನೀಡಿದ್ದೇವೆ ಎಂದು ಹೇಳಿದರು.
ತಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಆದರೆ, 2013 ರ ಡಿಸೆಂಬರ್‍ನಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಭಾರತೀಯ ದಂಡ ಪ್ರಕ್ರಿಯಾ ಸಂಹಿತಿಯ ಪರಿಚ್ಛೇಧ 375 ಮತ್ತು 376 ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದು, ಅತ್ಯಾಚಾರದ ವ್ಯಾಖ್ಯಾನವನ್ನು ವಿಸ್ತøತಗೊಳಿಸಿರುವುದರಿಂದ ದೂರುಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲದೆ, 2012 ನೇ ಸಾಲಿನ ಪೋಸ್ಕೋ ಕಾಯಿದೆ ಜಾರಿಗೆ ತರಲಾಗಿದ್ದು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣವನ್ನೂ ಈ ಕಾಯಿದೆಯ ಅಡಿಯಲ್ಲೇ ದಾಖಲು ಮಾಡುವ್ಯದರಿಂದ ನೋಂದಣಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹತ್ತು ತ್ವರಿತ ನ್ಯಾಯಾಲಯಗಳನಗ್ನು ಸ್ಥಾಪಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ನ್ಯಾಯಾಲಯವನ್ನು ಅಧಿಸೂಚಿಸಲಾಗಿದೆ. ಅಲ್ಲದೆ, ವಿಶೇಷ ಸರ್ಕಾರಿ ಅಭಿಯೋಜಕರನ್ನೂ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
Please follow and like us:
error