ಮಕ್ಕಳಿಗೆ ತಮ್ಮ ಹಕ್ಕುಗಳು ಲಭ್ಯವಾಗಬೇಕು- ಡಿ.ಸಿ. ತುಳಸಿ ಮದ್ದಿನೇನಿ

ಕೊಪ್ಪಳ ನ. ): ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಸೂಚಿಸಿರುವ ಎಲ್ಲಾ ಹಕ್ಕುಗಳು ಜಿಲ್ಲೆಯ ಎಲ್ಲಾ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.
  ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಶುಭಾಶಯ ಸಲ್ಲಿಸಿರುವ ಅವರು, ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.  ೧೯೮೯ ರ ನವೆಂಬರ್ ೨೦ ರಲ್ಲಿ ವಿಶ್ವ ಸಂಸ್ಥೆಯು ಜಗತ್ತಿನ ಎಲ್ಲಾ ಮಕ್ಕಳಿಗೆ ಬದುಕುವ, ರಕ್ಷಣೆಯ, ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿದೆ.  ಭಾರತ ಸರ್ಕಾರ ೧೯೯೨ ಡಿಸೆಂಬರ್ ೧೧ ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿದೆ.  ಈ ಒಡಂಬಡಿಕೆಯಲ್ಲಿ ೫೪ ಪರಿಚ್ಛೇದಗಳಿದ್ದು, ಅದರಲ್ಲಿ ತಿಳಿಸಿರುವಂತೆ ತಾಯಿಯ ಗರ್ಭದಿಂದ ೧೮ ವರ್ಷದೊಳಗಿನ ಎಲ್ಲಾ ಮನುಷ್ಯ ಜೀವಗಳು ಮಕ್ಕಳು, ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ, ಪ್ರತಿ ಮಗುವಿಗೂ ಜೀವಿಸುವ ಹಕ್ಕಿದ್ದು, ಯಾವುದೇ ಮಗುವನ್ನು ಸರ್ಕಾರದ ಮತ್ತು ಪೋಷಕರ ಅನುಮತಿ ಇಲ್ಲದೆ ಸ್ಥಳಾಂತರ ಮಾಡುವಂತಿಲ್ಲ.  ಮಕ್ಕಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇದ್ದು, ಮಾಹಿತಿ ಪಡೆಯುವ, ಸಂಘಟಿತರಾಗುವ ಹಾಗೂ ದುರುಪಯೋಗದಿಂದ ರಕ್ಷಣೆ ಪಡೆಯುವ ಹಕ್ಕು ಇದೆ.  ನಿರಾಶ್ರಿತ ಮತ್ತು ನಿರ್ವಸಿತರಾಗುವುದರಿಂದ ರಕ್ಷಿಸಿಕೊಳ್ಳುವ ಹಕ್ಕು, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ರಕ್ಷಣೆಯ ಮತ್ತು ಸೌಲಭ್ಯದ ಹಕ್ಕು, ಉತ್ತಮ ಆರೋಗ್ಯ ಹೊಂದುವ ಹಕ್ಕು, ಶಿಕ್ಷಣದ ಹಕ್ಕು, ಭಾಗವಹಿಸುವ ಹಕ್ಕು, ಬಾಲಕಾರ್ಮಿಕ ಪದ್ಧತಿ ನಿಶೇಧ/ಅದರ ವಿರುದ್ಧ ರಕ್ಷಣೆಯ ಹಕ್ಕು, ಮಾದಕ ದ್ರವ್ಯಗಳಿಂದ ದೂರ ಮತ್ತು ರಕ್ಷಣೆಯ ಹಕ್ಕು, ಲೈಂಗಿಕ ಶೋಷಣೆಯಿಂದ ರಕ್ಷಣೆಯ ಹಕ್ಕು, ಮಕ್ಕಳ ಮಾರಾಟ ಮತ್ತು ಅಕ್ರಮ ಬಂಧನದಿಂದ ರಕ್ಷಣೆಯ ಹಕ್ಕು, ಎಲ್ಲಾ ರೀತಿಯ ಶೋಷಣೆ, ಹಿಂಸೆ, ವಲಸೆ ಮತ್ತು ದಬ್ಬಾಳಿಕೆಯಿಂದ ರಕ್ಷಣೆ ಪಡೆದುಕೊಳ್ಳುವ ಹಕ್ಕುಗಳನ್ನು ಎಲ್ಲಾ ಮಕ್ಕಳು ಹೊಂದಿದ್ದಾರೆ.  ಈ ಮಕ್ಕಳ ಹಕ್ಕುಗಳು ಎಲ್ಲಾ ಮಕ್ಕಳಿಗೆ ದೊರೆಯಬೇಕು, ಮಕ್ಕಳಿಗೆ ಇವುಗಳ ಅರಿವು ಮೂಡಿಸಬೇಕು.  ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು, ಅಧಿಕಾರಿಗಳು, ಸಾರ್ವಜನಿಕರು ಪ್ರಾಮಾಣಿಕ ಪ್ರಯತ್ನ ಮಾಡುವುದು ಅವರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply