You are here
Home > Koppal News > ಮೇ. ೫ ರಿಂದ ಹುಲಿಗೆಮ್ಮ ದೇವಿ ಜಾತ್ರೆ.

ಮೇ. ೫ ರಿಂದ ಹುಲಿಗೆಮ್ಮ ದೇವಿ ಜಾತ್ರೆ.

ಕೊಪ್ಪಳ, ಏ.೨೪ (ಕರ್ನಾಟಕ ವಾರ್ತೆ) : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ ೫ ರಿಂದ ಪ್ರಾರಂಭವಾಗಲಿದ್ದು,  ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಗೃಹ ಕಛೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ  ಪೂರ್ವಭಾವಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಹುಲಿಗೆಮ್ಮ ದೇವಿಯ ಜಾತ್ರೆಯು ಮೇ.೦೫ ರಿಂದ ೧೫ ರವರೆಗೆ ಜರುಗಲಿದ್ದು, ಪ್ರತಿ ವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ನಡೆಯಲಿದೆ. ಮೇ. ೧೨ ರಂದು ಸಂಜೆ ೫.೩೦ ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.   ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ ನಿಟ್ಟಿನಲ್ಲಿ ಹುಲಿಗಿ ಗ್ರಾಮದಲ್ಲಿ ಒಟ್ಟು ೦೪ ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು, ಸೂಕ್ತ ಸ್ಥಳ ಗುರುತಿಸಿ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ನೈರ್ಮಲ್ಯತೆ ಕಾಪಾಡುವ ದೃಷ್ಠಿಯಿಂದ  ಪಾರ್ಕಿಂಗ್ ಸ್ಥಳಗಳು ಸೇರಿದಂತೆ ದೇವಸ್ಥಾನದ ನಾಲ್ಕು ದಿಕ್ಕುಗಳಿಗೂ ಒಟ್ಟು ೩೫೦ ಶೌಚಾಲಯ ಹಾಗೂ ಸ್ನಾನ ಗೃಹಗಳ ವ್ಯವಸ್ಥೆ ಮಾಡಬೇಕು.  ಈ ಬಾರಿ ಜಾತ್ರೆಯಲ್ಲಿ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕು.  ಈ ಹಿಂದಿನ ಜಾತ್ರೆಗಳ ಸಂದರ್ಭದಲ್ಲಿ ಸ್ವಚ್ಛತೆಗೆ ಹಲವು ಕ್ರಮ ಕೈಗೊಂಡಿದ್ದರೂ, ಪರಿಣಾಮಕಾರಿಯಾಗಿ ಆಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರಾ ಸಂದರ್ಭದಲ್ಲಿ ಸಾರ್ವಜನಿಕರು ನೈರ್ಮಲ್ಯತೆಯನ್ನು ಕಾಪಾಡಬೇಕು.  ತಪ್ಪಿದಲ್ಲಿ ಅಂತಹವರಿಗೆ ೨೫೦ ರೂ.ಗಳ ದಂಡ ವಿಧಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಈ ಕುರಿತ ಮಾಹಿತಿ ಫಲಕಗಳನ್ನು ನಾನಾ ಕಡೆಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು.  ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಹೊಸಪೇಟೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಗ್ರಾಮದ ಪ್ರಮುಖರು, ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿಬಲಿ ನಿಷೇಧ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಮನವಿ ಮಾಡಿಕೊಂಡರು. 
       ಜಾತ್ರೆಯ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಅವರು ಮನವಿ ಮಾಡಿಕೊಂಡರು.
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಡಿ.ವೈ.ಎಸ್.ಪಿ ರಾಜೀವ್ ಎಂ., ಮುನಿರಾಬಾದ್ ಜೆಸ್ಕಾಂ ಕಛೇರಿಯ ವೀರೇಶ್, ಕೊಪ್ಪಳ ನಗರಸಭೆ ಆಯುಕ್ತ ರಮೇಶ್ ಪಟ್ಟೇದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಕಾಂತ ಬಾಸೂರು, ಹುಲಿಗಿ ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Top