fbpx

ಬದುಕಿನ ಭಾವಗಳ “ಪ್ರಕಾಶ”ಮಾನ “ಕನಸು”


ಬಹಳ ದಿನಗಳ ನಂತರ ಪ್ರಕಾಶ ರೈ ಕನ್ನಡ ತೆರೆಗೆ ಬಂದಿದ್ದಾರೆ. ಅದೂ ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕೂಡಾ. ತಮಿಳಿನ ಅಭಿಯುಂ ನಾನುಂ ಚಿತ್ರವನ್ನು ಕನ್ನಡದಲ್ಲಿ ನಾನು ನನ್ನ ಕನಸೂ ಎಂಬ ಸೊಗಸಾದ ಹೆಸರಿನಲ್ಲಿ ಮೂಲ ಚಿತ್ರಕ್ಕಿಂತ ಮತ್ತಷ್ಟೂ ಸೊಗಸಾಗಿ ನಮ್ಮ ನೆಲದ, ಜನರ ಅಭಿರುಚಿಗೆ ತಕ್ಕಂತೆ ನಿರೂಪಿಸಿದ್ದಾರೆ. ಬದುಕಿನ ಸೂಕ್ಷ್ಮ ಭಾವನೆಗಳನ್ನು ಮನ ಮುಟ್ಟುವಂತೆ ಕನಸಿನಲ್ಲಿ ತೋರಿಸಲಾಗಿದೆ. ಸಿನಿಮಾ ಮುಗಿದರೂ ಇದು ರಿಮೇಕ್ ಎಂದನಿಸುವುದಿಲ್ಲ. ಅಷ್ಟೂ ನಾಜೂಕಾಗಿ ಕನಸು ಮೂಡಿ ಬಂದಿದೆ. ಅಪ್ಪ ಹೇಗಿರಬೇಕು? ತಂದೆಯ ಜವಾಬ್ದಾರಿಗಳೇನು? ಮಕ್ಕಳನ್ನು ಅದರಲ್ಲೂ ಮಗಳನ್ನು ಹೇಗೆ ಬೆಳೆಸಬೇಕು? ಎಂಬ ಇತ್ಯಾದಿ ಅಂಶಗಳನ್ನು ಪ್ರೇಕ್ಷಕರಿಗೆ ತೋರಿಸುವ ಅಲ್ಲಲ್ಲ ಕಲಿಸುವ ಸಾಹಸಕ್ಕೆ ಕೈ ಹಾಕಿರುವ ರೈ ಖಂಡಿತವಾಗಿ ಗೆಲ್ಲುತ್ತಾರೆ. ಅಪ್ಪ-ಮಗಳ ಸಂಬಂಧದ ಜೊತೆಗೆ ಸಾಮಾಜಿಕ ಜವಾಬ್ದಾರಿ ಮನುಷ್ಯರ ನೈತಿಕತೆ ಹೀಗೆ ಹತ್ತು ಹಲವಾರು ಸೂಕ್ಷ್ಮ ಭಾವಗಳನ್ನು ಕನಸು ಎಡಬಿಡದೆ ಕಾಡುತ್ತದೆ. ತಾಯಿಗೆ ಮಕ್ಕಳ ಬಗ್ಗೆ ಪ್ರೀತಿ ಮಾತ್ರ ಗೊತ್ತು. ಆದರೆ ಅಪ್ಪನಿಗೆ ಪ್ರೀತಿಯ ಜೊತೆಗೆ ಕಾಳಜಿಯೂ ಇರುತ್ತದೆ ಎಂಬುದಕ್ಕೆ ಚಿತ್ರದಲ್ಲಿ ಸಾಕಷ್ಟು ಪುರಾವೆಗಳಿವೆ. ಮಕ್ಕಳು ಬೆಳೆದಂತೆ ಹೆತ್ತವರು ಬೆಳೆಯುತ್ತಾರೆ. ನಮ್ಮ ಮಕ್ಕಳು ನಮಗಿಂತ ಬುಧ್ಧಿವಂತರಾದರೆ ಹೆಮ್ಮೆ ಪಡಬೇಕು ಎಂಬ ಮಾತುಗಳು ಪ್ರಕಾಶ ರೈ ಬಗ್ಗೆ ಮತ್ತಷ್ಟೂ ಭರವಸೆ ಹುಟ್ಟು ಹಾಕುತ್ತವೆ. ಮಗಳು ಬೇಡಿದ್ದನ್ನೆಲ್ಲಾ ಬೇಡ ಎನ್ನುತ್ತಲೇ ಕೊಡಿಸುವ ಅಪ್ಪನಾಗಿ ರೈ, ಸೈ ಎನಿಸಿಕೊಂಡಿದ್ದಾರೆ. ಬಳ್ಳಾರಿಯ ಭಿಕ್ಷುಕನೊಬ್ಬನಿಗೆ ಮನೆ-ಮನದಲ್ಲಿ ಮಗಳಾಸೆಯಂತೆ ಸ್ಥಾನ ಕೊಟ್ಟು ಅವಳ ಸಂತೋಷದಲ್ಲೇ ನೋವನ್ನು ಮರೆವ ತಂದೆಯಾಗಿ ರೈ ಮೆರೆದಿದ್ದಾರೆ. ಚಿತ್ರದ ಗುಣಮಟ್ಟದ ವಿಷಯದಲ್ಲೂ ಎಲ್ಲೂ ರಾಜಿಯಾಗಿಲ್ಲ. ಸಿನಿಮಾದ ಪಾತ್ರಧಾರಿಗಳು ಯಾವ ದೃಶ್ಯದಲ್ಲೂ ನಟಿಸಿಲ್ಲ, ಬದಲಾಗಿ ತಾವೇ ಪಾತ್ರಗಳಾಗಿದ್ದಾರೆ. ಮಗಳು ಮದುವೆ ವಯಸ್ಸಿಗೆ ಬಂದ ಮೇಲೆಯೂ ಕೂಡಾ ಅಪ್ಪನ ಕಾಳಜಿ ದೊಡ್ಡದು. ಮಕ್ಕಳ ಮದುವೆ ವಿಷಯದಲ್ಲಿ ಜಾತಿಪದ್ಧತಿಯನ್ನೂ ಹೊರದಬ್ಬಬೇಕು ಎಂಬ ಸಂದೇಶ ನೀಡಲು ಸಾಕಷ್ಟು ಪ್ರಯತ್ನಿಸಿದ್ದಾರೆ ಪ್ರಕಾಶ. ಸರ್ದಾರಜಿಗಳನ್ನು ಕೇವಲ ಜೋಕ್‌ಗಳಲ್ಲಿ ನೆನೆದು ನಗುವ ನಮಗೆ ಸಿಂಗ್‌ಗಳು ದಡ್ಡರೇ ಇರಬಹುದು, ಆದರೆ ಸ್ವಾಭಿಮಾನಿಗಳು. ಭಿಕ್ಷುಕರಲ್ಲ ಎಂಬುದನ್ನು ಹೇಳಿ ಸಮರ್ಥಿಸಿಕೊಳ್ಳಲಾಗಿದೆ. ಜೊತೆಗೆ ಭಾರತದಲ್ಲಿ ಪ್ರತಿ ವರ್ಷ ೨೦೦೦ ಕೋಟಿ ರುಪಾಯಿ ಮದುವೆಗೆ ಖರ್ಚಾಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂಬ ಮಾಹಿತಿಯನ್ನು ಕನಸಿನಲ್ಲಿ ಹೇಳಲಾಗಿದೆ. ಕನಸಿನ ನಿರ್ಮಾಪಕರಾದ ಪ್ರಕಾಶ ರೈ, ಶೈಲಜಾ ನಾಗ್ ಹಾಗೂ ಸುರೇಶ ಕನ್ನಡದ ಪ್ರೇಕ್ಷಕರಿಗೆ ಒಂದು ಉತ್ತಮ ಚಿತ್ರವನ್ನು ಕೊಟ್ಟಿರುವುದಂತು ಸತ್ಯ. ಪ್ರಥಮ ಬಾರಿಗೆ ಕನ್ನಡ ಸಿನಿಮಾ ನಿರ್ದೇಶಿಸಿರುವ ಪ್ರಕಾಶ ರೈ ಯೋಚನೆ ಸುನೀಲ್‌ಕುಮಾರ ದೇಸಾಯಿಯವರನ್ನು ನೆನಪಿಸುತ್ತದೆ. ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ಅಚ್ಯುತ್‌ರಾವ್. ಉತ್ತರ ಕರ್ನಾಟಕದ ಭಾಷೆಯಲ್ಲಿ ಅಚ್ಯುತ್ ಇಷ್ಟವಾಗುತ್ತಾರೆ. ಕನಸಿನ ಪ್ರಮುಖ ಜೀವಾಳ ಸಂಗೀತ. ಹಂಸಲೇಖ ಮತ್ತೇ ಕನಸಿನ ಮೂಲಕ ಕಾಡಲು ರೆಡಿಯಾಗಿದ್ದಾರೆ. ಮಡಿಕೇರಿಯ ಸುಂದರ ತಾಣಗಳನ್ನು ಕಣ್ಮುಂದೆ ತಂದಿದ್ದಾರೆ ಛಾಯಾಗ್ರಾಹಕ ಅನಂತ ಅರಸ್. ಸಿನಿಮಾ ಬೋರಾಗಬಾರದು ಎಂಬ ಕಾರಣಕ್ಕಾಗಿ ಸಿಹಿಕಹಿ ಚಂದ್ರು ಪಾತ್ರವನ್ನು ಸೃಷ್ಠಿಸಲಾಗಿದೆ. ಸುಮಾರು ೭ ಬಾರಿ ಚಂದ್ರು-ರೈ ಎದುರಾಗುತ್ತಾರೆ. ಮಗಳ ಮದುವೆಗೆ ಬಂದ ಚಂದ್ರು, “ಒಯ್ ಮಗಳ ಮದುವೆ ಮಾಡುತಿದ್ದೀರೋ” ಎಂದು ಕೇಳಿದರೆ, ರೈ ನೀಡುವ ಉತ್ತರ,- ‘ಇಲ್ಲ, ಸೀರೆ ತಂದಿದ್ದೆ ಎಲ್ಲರಿಗೂ ತೋರ್‍ಸೋಣ ಅಂತ ಕರ್‍ದಿದಿನಿ.” ಹೀಗೆ ತರ್‍ಲೆ ಉತ್ತರ ನೀಡುತ್ತಾ ಕನಸು ತೋರಿಸುತ್ತಾ ಹೋಗುತ್ತಾರೆ ರೈ. ತಾಯಿಯಾಗಿ ಸಿತಾರಾ ಪರ್‌ಫೆಕ್ಟ್. ಅಮೂಲ್ಯಾ ನಾಲ್ಕನೇ ಚಿತ್ರಕ್ಕೆ ಮಾಗಿದಂತೆ ತೋರುತ್ತಾರೆ. ಚಿತ್ರ ನೋಡಿ ಹೊರ ಬಂದ ಮೇಲೆ ಮಗಳ ಕೈ ಹಿಡಿದುಕೊಂಡೇ ಮನೆ ಮುಟ್ಟಬೇಕು ಅನಿಸುತ್ತದೆ. -ಬಸವರಾಜ ಕರುಗಲ್, ಕೊಪ್ಪಳ.

Please follow and like us:
error

Leave a Reply

error: Content is protected !!