You are here
Home > Koppal News > ಡಿ. ೧೨ ರಿಂದ ಬಾಗಲಕೋಟೆಯಲ್ಲಿ ಬೃಹತ್ ಉದ್ಯಾನ ಮೇಳ- ಡಾ. ಕೆ.ಎನ್. ಕಟ್ಟಿಮನಿ

ಡಿ. ೧೨ ರಿಂದ ಬಾಗಲಕೋಟೆಯಲ್ಲಿ ಬೃಹತ್ ಉದ್ಯಾನ ಮೇಳ- ಡಾ. ಕೆ.ಎನ್. ಕಟ್ಟಿಮನಿ

 ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು   ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳು ಹಾಗೂ ಕೃಷಿ ಕ್ಷೇತ್ರದ ಫಲಾನುಭವಿಗಳ ಸಹಯೋಗದೊಂದಿಗೆ ಡಿ. ೧೨ ರಿಂದ ೧೫ ರವರೆಗೆ ನಾಲ್ಕು ದಿನಗಳ ಕಾಲ ಬೃಹತ್ ಉದ್ಯಾನ ಮೇಳವನ್ನು ಬಾಗಲಕೋಟೆಯಲ್ಲಿ ಆಯೋಜಿಸಿದ್ದು, ರೈತರು ಈ ಉದ್ಯಾನ ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುನಿರಾಬಾದಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿರುವ ಡಾ. ಕೆ.ಎನ್. ಕಟ್ಟಿಮನಿ ಅವರು ಮನವಿ ಮಾಡಿಕೊಂಡಿದ್ದಾರೆ.
  ಈ ಕುರಿತಂತೆ ಮುನಿರಾಬಾದಿನ ತೋಟಗಾರಿಕೆ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.  ಈ ಮೇಳದಲ್ಲಿ ತೋಟಗಾರಿಕೆ ಹಾಗೂ ಪೂರಕ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು.  ಮೇಳದಲ್ಲಿ ಸಮೃದ್ಧಿಗಾಗಿ ಯಾಂತ್ರೀಕರಣ ಎಂಬ ವಿಷಯವನ್ನು ಪ್ರಮುಖವನ್ನಾಗಿಸಿದೆ. ತೋಟಗಾರಿಕೆ ಕುರಿತು ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಳದಲ್ಲಿ ೪೫೦ ಕ್ಕೂ ಹೆಚ್ಚು ಆಧುನಿಕ ಹಾಗೂ ಸಾಮಾನ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಪ್ರತಿ ನಿತ್ಯ ೭೫ ರಿಂದ ೯೦ ಸಾವಿರದಂತೆ ಒಟ್ಟು ೩.೫ ಲಕ್ಷಕ್ಕೂ ಹೆಚ್ಚು ರೈತಬಾಂಧವರು, ತೋಟಗಾರಿಕೆ ಬೆಳೆಗಾರರು ಅದರಲ್ಲೂ ವಿಶೇಷವಾಗಿ ಸಂಶೋಧಕರು, ವಿಸ್ತರಣಾ ಹಾಗೂ ಸ್ವಸಹಾಯ ಗುಂಪಿನ ಕಾರ್ಯಕರ್ತರು, ರೈತ ಮಹಿಳೆಯರು, ಕೃಷಿ ಪರಿಕರಗಳ ವಿತರಕರು, ಕಾರ್ಯದರ್ಶಿಗಳು, ಆಡಳಿತಗಾರರು, ರಾಜ್ಯ ಹಾಗೂ ಕೇಂದ್ರದ ಸಚಿವರುಗಳು, ರೈತ ವಿಜ್ಞಾನಿಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ.      
ಉದ್ಯಾನ ಮೇಳ ನಡೆಯುವ ನಾಲ್ಕು ದಿನಗಳಲ್ಲಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ವಿವರ ಇಂತಿದೆ.  ತೋಟಗಾರಿಕೆಯಲ್ಲಿ ಬಳಸಬಹುದಾದ ಯಂತ್ರೋಪಕರಣಗಳ ಪ್ರದರ್ಶನ, ಉತ್ತಮ ಗುಣಮಟ್ಟದ ಸಸಿ, ಬೀಜ ಹಾಗೂ ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಸಸಿಗಳ ಪ್ರದರ್ಶನ ಹಾಗೂ ಮಾರಾಟದ ವ್ಯವsಸ್ಥೆ, ಫಲಪುಷ್ಪ ಪ್ರದರ್ಶನ, ಸಸ್ಯ ಸಂರಕ್ಷಣೆ ಹಾಗೂ ಮಣ್ಣು ಆರೋಗ್ಯ ಕುರಿತಾದ ಪ್ರದರ್ಶನ, ವಿಶ್ವವಿದ್ಯಾಲಯಗಳು/ಭಾರತೀಯ ಕೃಷಿ ಅನುಸಂಧಾನ ಪರಿಷತ್/ಸರಕಾರಿ ಇಲಾಖೆಗಳ ಮಳಿಗೆಗಳು, ಜಿಲ್ಲೆಗೊಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಪ್ರಶಸ್ತಿ, ರೈತರು ಅಭಿವೃದ್ಧಿಪಡಿಸಿದ ನೂತನ ತಾಂತ್ರಿಕ ಆವಿಷ್ಕಾರಗಳ ಪ್ರದರ್ಶನ ಹಾಗೂ ಅತ್ಯುತ್ತಮ  ತಾಂತ್ರಿಕ ಆವಿಷ್ಕಾರ ಪ್ರಶಸ್ತಿ, ವಿದ್ಯಾರ್ಥಿಗಳು ಆವಿಷ್ಕರಿಸಿದ ಅತ್ಯುತ್ತಮ ಯಂತ್ರ ಪ್ರಶಸ್ತಿ, ಅತ್ಯುತ್ತಮ ಜಾನುವಾರು ಪ್ರಶಸ್ತಿ, ವಿಜ್ಞಾನಿಗಳಿಂದ ರೈತರಿಗೆ ತಾಂತ್ರಿಕ ಸಲಹಾ ಕೇಂದ್ರ (ಬೆಳೆ ಉತ್ಪಾದನೆ, ಸಂರಕ್ಷಣೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟ ಹಾಗೂ ರಫ್ತಿಗೆ ಸಂಬಂಧಿಸಿದ ವಿಚಾರಗಳ ಬಗೆಗೆ), ತೋಟಗಾರಿಕೆಯಲ್ಲಿ ನಿಖರ ಬೇಸಾಯ ಹಾಗೂ ಹನಿ ನೀರಾವರಿ ಮೂಲಕ ರಸಾವರಿ ನೀಡುವ ಪ್ರಾಯೋಗಿಕ ತಾಕುಗಳು, ಸಾವಯವ ತೋಟಗಾರಿಕೆ/ಕೃಷಿ ಪರಿಕರಗಳ ಪ್ರದರ್ಶನ, ಭವಿಷ್ಯದ ಕೃಷಿ/ತೋಟಗಾರಿಕೆ ತಂತ್ರಜ್ಞಾನಗಳು, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ರೈತಬಾಂಧವರಿಗೆ ವಿವಿಧ ಯೋಜನೆಗಳ ಮಾಹಿತಿ, ಸ್ವ ಸಹಾಯ ಹಾಗೂ ಸ್ತ್ರೀಶಕ್ತಿ ಗುಂಪುಗಳಿಂದ ಉತ್ಪಾದಿಸಿದ ವಸ್ತುಗಳ ಪ್ರದರ್ಶನ, ತಾಂತ್ರಿಕ ವಿಚಾರ ಗೋಷ್ಠಿಗಳು (ಮಳೆ ನೀರು ಕೊಯ್ಲು ಹಾಗೂ ನೀರಿನ ಸಮರ್ಥ ಬಳಕೆ/ ತೋಟಗಾರಿಕೆಯಲ್ಲಿ ಯಾಂತ್ರೀಕರಣ/ ದ್ರಾಕಿ ಹಾಗೂ ದಾಳಿಂಬೆ ಬೆಳೆಯಲ್ಲಿ ನೂತನ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಬೆಳೆ ಸಂರಕ್ಷಣೆ/ ಹೈಟೆಕ್ ತೋಟಗಾರಿಕೆ/ತೋಟಗಾಋಇಕೆ ಉತ್ಪನ್ನಗಳ ಸಂಸ್ಕತಣೆ, ಮೌಲ್ಯವರ್ಧನೆ ಹಾಗೂ ಮಾರಾಟ/ತೋಟಗಾರಿಕೆ ಉತ್ಪನ್ನಗಳ ರಫ್ತು ನಿಯಮಗಳು ಮತ್ತು ಅವಕಾಶಗಳು/ಕೃಷಿ ವಲಯಕ್ಕೆ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳು/ಬೆಳೆ ವಿಮೆ), ಉದ್ಯಾನಗಿರಿ ಆವರಣ ಹಾಗೂ ಸೆಕ್ಟರ್ ೭೦, ೧ ಹಾಗೂ ೪೧ ರಲ್ಲಿನ ವಿವಿಧ ತೋಟಗಾರಿಕೆ ಬೆಳೆಗಳ ಸಂಶೋಧನಾ ತಾಕುಗಳಿಗೆ ಹಾಗೂ ಸಂರಕ್ಷಿತ ಕೃಷಿಯಲ್ಲಿ ಬೆಳೆದ ಬೆಳೆಗಳ ವೀಕ್ಷಣೆ ಕಾರ್ಯಕ್ರಮ, ಕೃಷಿ/ತೋಟಗಾರಿಕೆ ಕುರಿತು ಲೇಖನಗಳ, ಪುಸ್ತಕಗಳ ಸಿಡಿಗಳನ್ನು ಪ್ರಕಟಿಸುವ ವಿವಿಧ  ಪ್ರಕಾಶಕರ/ ಸಂವಹನಕಾರರ ಮಳಿಗೆಗಳು, ಜಾನುವಾರು ಮೇಳ (ವಿವಿಧ ಆಕಳು/ಕುರಿ/ನಾಯಿಗಳ ಪ್ರದರ್ಶನ), ಕೃಷಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ
  ಮೇಳಕ್ಕೆ ಬರುವ ರೈತರು/ವೀಕ್ಷಕರಿಗಾಗಿ ಮಾರ್ಗದರ್ಶಿಗಳು, ಆಹಾರದ ಮಳಿಗೆಗಳು, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಸ್ಥಳೀಯ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಹಾಗೂ ಅವಶ್ಯಕತೆಯ ಮೇರೆಗೆ ರೈತರು ತಂಗಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಮುನಿರಾಬಾದಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿರುವ ಡಾ. ಕೆ.ಎನ್. ಕಟ್ಟಿಮನಿ ಅವರು ತಿಳಿಸಿದರು.

Leave a Reply

Top