ಪ್ರತಿ ಮನೆ, ಮನೆಗೆ ಮತದಾರರ ಜಾಗೃತಿಯ ಕರಪತ್ರ ವಿತರಣೆಗೆ ಸೂಚನೆ

 ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರನ್ನು ಜಾಗೃತಿಗೊಳಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮತದಾರರ ಜಾಗೃತಿ ಮೂಡಿಸುವ ಕರಪತ್ರಗಳನ್ನು ಪ್ರತಿ ಮನೆ, ಮನೆಗೆ ತಲುಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಹೇಳಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಿದ್ದತೆ ಕುರಿತಂತೆ ಮಂಗಳವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮತದಾರರ ಜಾಗೃತಿಗಾಗಿ ಈಗಾಗಲೆ ಸ್ವೀಪ್ ಕಾರ್ಯಕ್ರಮದಡಿ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಮತದಾರರ ಜಾಗೃತಿಗಾಗಿ ಸುಮಾರು ೫ ಲಕ್ಷ ಕರಪತ್ರಗಳನ್ನು ಮುದ್ರಿಸಿ ಪಡೆಯಲಾಗಿದ್ದು, ಈಗಾಗಲೆ ಶಾಲಾ ವಿದ್ಯಾರ್ಥಿಗಳ ಮೂಲಕ ಪೋಷಕರು ಪಾಲಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.  ಪೋಷಕರು, ಪಾಲಕರಿಂದ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.  ಇದೇ ಪ್ರಥಮ ಬಾರಿಗೆ ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗೆ ಗುರುತಿನ ಚೀಟಿ ವಿತರಿಸುವ ಸಂದರ್ಭದಲ್ಲಿ, ಪ್ರತಿ ಮನೆಗೂ ಕರಪತ್ರ ತಲುಪಿಸಬೇಕು.  ಈ ನಿಟ್ಟಿನಲ್ಲಿ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳಿಗೆ ಕರಪತ್ರ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಹೇಳಿದರು.
     ಸಭೆಯಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಎಲ್ಲ ಕ್ಷೇತ್ರ ಚುನಾವಣಾ ಅಧಿಕಾರಿಗಳು, ತಹಸಿಲ್ದಾರರು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Comment