ಅಂತರಂಗವನ್ನು ತಟ್ಟುವಂತೆ, ಬರೆಯುವವನೇ ನಿಜವಾದ ಸಾಹಿತಿ -ಬೈರಪ್ಪ

ಹಾಸನ: `ವೇದ, ರಾಮಾಯಣ, ಮಹಾಭಾರತ ಕಾಲದಿಂದ ಇಲ್ಲಿಯರಿಗೆ ಮನುಷ್ಯನ ಮೂಲ ಸ್ವಭಾವದಲ್ಲಿ ಬದಲಾವಣೆ ಆಗಿಲ್ಲ. ಮನುಷ್ಯನ ಸ್ವಭಾವವನ್ನು ಅರಿತು ಅಂತರಂಗವನ್ನು ತಟ್ಟುವಂತೆ, ಬರೆಯುವವನೇ ನಿಜವಾದ ಸಾಹಿತಿ. ಅಂಥ ಸಾಹಿತ್ಯ ಸಾರ್ವಕಾಲಿಕವಾಗಿರುತ್ತದೆ` ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಭಾನುವಾರ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಹುಟ್ಟೂರ ಸನ್ಮಾನ` ಸ್ವೀಕರಿಸಿ ಅವರು ಮಾತನಾಡಿದರು.
`ಮನುಷ್ಯ ಸ್ವಭಾವ ಬದಲಾಗಿಲ್ಲ, ಮುಂದೆ ಬದಲಾಗುವುದೂ ಇಲ್ಲ ಎಂಬುದು ನನ್ನ ನಂಬಿಕೆ. ಆ ನಿಟ್ಟಿನಲ್ಲಿ ಇನ್ನೂ ಐದುನೂರು ವರ್ಷ ಕಳೆದ ಬಳಿಕವೂ ನನ್ನ ಕೃತಿಗಳನ್ನು ಓದುವ, ಮೆಚ್ಚುವ  ಜನರಿರಬೇಕು ಎಂಬ ದೃಷ್ಟಿಯಿಂದ ಬರೆಯುತ್ತೇನೆ. ನನ್ನ ಕೃತಿಗೆ ಅಂಥ ಶಕ್ತಿ ಇದೆಯೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡೇ ಬರೆಯಲು ಕುಳಿತಿರುತ್ತೇನೆ` ಎಂದರು.
`ಗ್ರಾಮೀಣ ಜನರ ಕಷ್ಟ ಸುಖಗಳನ್ನು ಅರಿಯದವನಿಗೆ ಭಾರತ ಅರ್ಥವಾಗುವುದಿಲ್ಲ. ಜನರ ನಾಡಿಮಿಡಿತ ಅರಿಯಬೇಕಾದರೆ ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆಯಬೇಕು. ಮನುಷ್ಯ ಸ್ವಭಾವವನ್ನು ಅರಿತು ಮನ ಕಲಕುವಂತೆ ರಚಿಸಿದ ಸಾಹಿತ್ಯ ಬೇಗನೆ ಹತ್ತಿರವಾಗುತ್ತದೆ ಮತ್ತು ಜನ ಅಂಥ ಸಾಹಿತಿಯನ್ನು ಪ್ರೀತಿಸುತ್ತಾರೆ. ಎಲ್ಲ ವಿಚಾರಗಳನ್ನೂ ವಿಶ್ವವಿದ್ಯಾಲಯಗಳಲ್ಲಿ ಕಲಿತ ವಾದ ಅಥವಾ ಇಸಂಗಳ ದೃಷ್ಟಿಯಿಂದಲೇ ನೋಡಲು ಹೋದರೆ ಅಂಥ ಸಾಹಿತ್ಯ ಉಳಿಯುವುದಿಲ್ಲ. ಸಾಹಿತಿ ತನ್ನ ಕಣ್ಣಿನಿಂದಲೇ ಎಲ್ಲವನ್ನೂ ನೋಡಬೇಕಾಗುತ್ತದೆ ಎಂದು ಭೈರಪ್ಪ ನುಡಿದರು.
`ಸಮಾಜವಾದ, ಮಾರ್ಕ್ಸ್‌ವಾದ-ಹೀಗೆ ವಿವಿಧ ಸಿದ್ಧಾಂತಗಳನ್ನು ಸಾಹಿತಿಗಳ ಮೇಲೆ ಹೇರುವಂತಹ ಒಂದು ಗುಂಪು ನಮ್ಮಲ್ಲೂ ಇದೆ. ತಮ್ಮ ಸಿದ್ಧಾಂತಕ್ಕೆ ಒಪ್ಪುವಂತೆ ಬರೆಯದಿದ್ದರೆ ವಿರೋಧಿಸುವ, ಮಾಧ್ಯಮಗಳಲ್ಲಿ ಕೃತಿಯ ಬಗ್ಗೆ ವಿಮರ್ಶೆ ಬರದಂತೆ ತಡೆಯುವ ಗುಂಪುಗಳೂ ಇವೆ. ಲೇಖಕ ಇವೆಲ್ಲವನ್ನೂ ಮೀರಿ ನಿಲ್ಲಬೇಕಾಗುತ್ತದೆ` ಎಂದರು.
ಹುಟ್ಟೂರಿನಲ್ಲಿ ಮೊದಲ ಬಾರಿ ಸನ್ಮಾನ ಸ್ವೀಕರಿಸಿದ ಭೈರಪ್ಪ ತಾವು ಬಾಲ್ಯದಲ್ಲಿ ಸಂತೇಶಿವರದ ಬೀದಿಗಳಲ್ಲಿ ಓಡಾಡಿದ ದಿನಗಳನ್ನು ಸ್ಮರಿಸಿದರು. 
`ಬಾಲ್ಯದಲ್ಲಿ ಇಲ್ಲಿ ಪಡೆದ ದಟ್ಟ ಅನುಭವ `ಗೃಹಭಂಗ` ಕಾದಂಬರಿಯಲ್ಲಿ ಸಾಂದ್ರವಾಗಿ ಮೂಡಿದೆ. ವಿವಿಧ ಬೀದಿಗಳಲ್ಲಿ ಓಡಾಡಿ ಆ ವಯಸ್ಸಿನಲ್ಲಿ ಅರಿತುಕೊಂಡ ನಮ್ಮ ಜಾತಿ ವ್ಯವಸ್ಥೆ `ದಾಟು` ಕಾದಂಬರಿಯ ವಸ್ತುವಾಯಿತು. ಆದ್ದರಿಂದ ಇಂದಿಗೂ ಹುಟ್ಟೂರನ್ನು ಮರೆತಿಲ್ಲ. ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಸುವ ಮೂಲಕ ಭಾವನಾತ್ಮಕ ನಂಟನ್ನು ಉಳಿಸಿಕೊಂಡಿದ್ದೇನೆ` ಎಂದು ಹೇಳಿದರು.
ಗ್ರಾಮಸ್ಥರು ಸಹ ಅತ್ಯಂತ ಉತ್ಸಾಹದಿಂದ ಭೈರಪ್ಪ ಅವರನ್ನು ಬರಮಾಡಿಕೊಂಡರು. ಚಿಕ್ಕೋನಹಳ್ಳಿ ಗೇಟ್‌ನಿಂದ ಸಂತೇಶಿವರ ಗ್ರಾಮದವರಿಗೆ ಮೆರವಣಿಗೆ ಮೂಲಕ ಭೈರಪ್ಪ ಅವರನ್ನು ಕರೆತಂದರು. ಗ್ರಾಮದ ಬೀದಿಗಳನ್ನು ಮತ್ತು ಪ್ರತಿ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮನೆಯ ಮುಂದೆ ರಂಗೋಲಿ ಇಟ್ಟು ಭೈರಪ್ಪ ಅವರಿಗೆ ಸ್ವಾಗತ ಕೋರಿದರು. ಭೈರಪ್ಪ ರಚಿಸಿದ ಎಲ್ಲ ಕಾದಂಬರಿಗಳ ಮುಖಪುಟದ ದೊಡ್ಡ ಗಾತ್ರದ ಪ್ಲೆಕ್ಸ್‌ಗಳನ್ನು ನಿರ್ಮಿಸಿ ಆಟೋಗಳ ಮೇಲಿಟ್ಟು ಮೆರವಣಿಗೆ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್. ಪುಟ್ಟೇಗೌಡ, `ಹುಟ್ಟೂರಿನಲ್ಲೇ ಭೈರಪ್ಪ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಿಲ್ಲ ಎಂಬ ಕೊರಗು ಬಹಳ ವರ್ಷಗಳಿಂದ ಕಾಡುತ್ತಿತ್ತು. ಇಂದು ಅದು ಈಡೇರಿದೆ` ಎಂದರು.
ಅನುವಾದ ಅಕಾಡೆಮಿ ಅಧ್ಯಕ್ಷ ಪ್ರಧಾನ ಗುರುದತ್ತ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿಗಳಾದ ಸುಮತೀಂದ್ರ ನಾಡಿಗ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಗಾಯಕ ಶಿವಮೊಗ್ಗ ಸುಬ್ಬಣ್ಣ, ಗರುಡನಗಿರಿ ನಾಗರಾಜ್, ಡಾ.ಕೃಷ್ಣಮೂರ್ತಿ ಹನೂರು ಇತರರು ಇದ್ದರು – ಪ್ರಜಾವಾಣಿ
Please follow and like us:
error