You are here
Home > Koppal News > ಮೇ ೧ರಿಂದ ರಾಜ್ಯವ್ಯಾಪಿ ‘ಆಶಾ ಕಾರ್ಯಕರ್ತೆ’ಯರ ‘ಕೆಲಸ ಬಂದ್’ ಮುಷ್ಕರ.

ಮೇ ೧ರಿಂದ ರಾಜ್ಯವ್ಯಾಪಿ ‘ಆಶಾ ಕಾರ್ಯಕರ್ತೆ’ಯರ ‘ಕೆಲಸ ಬಂದ್’ ಮುಷ್ಕರ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ನಿರಂತರವಾಗಿ ನಡೆಸಿದ ಹೋರಾಟದಿಂದಾಗಿ ರಾಜ್ಯ ಸರ್ಕಾರವು ೨೮ನೇ ಅಕ್ಟೋಬರ್ ೨೦೧೩ ರಂದು ಕೇಂದ್ರದ ಪ್ರೊತ್ಸಾಹ ಧನದ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ‘ಮ್ಯಾಚಿಂಗ್ ಇನ್ಸೆಂಟಿವ್’ ನೀಡುವ ಆದೇಶವನ್ನು ಹೊರಡಿಸಿತು. ಅಂದಿನಿಂದಲೂ ಇದನ್ನು ಸಂಘದಿಂದ ಸ್ವಾಗತಿಸಿರುತ್ತೇವೆ. ಹಾಗೆಯೇ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿಗಳಿಗೆ, ಆರೋಗ್ಯ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿರುತ್ತೇವೆ. 
    ಆದರೆ, ಆದೇಶವಾಗಿ ಒಂದೂವರೆ ವರ್ಷವಾಗಿದೆ. ಇಲ್ಲಿಯವರೆಗೆ ರಾಜ್ಯದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ೧ ವರ್ಷದಿಂದ ಹಿಡಿದು ಒಂದೂವರೆ ವರ್ಷದವರೆಗೆ ‘ಮ್ಯಾಚಿಂಗ್ ಇನ್ಸೆಂಟಿವ್’ ನೀಡಿರುವುದಿಲ್ಲ. ಈವರೆಗೆ ಕೆಲ ಜಿಲ್ಲೆಗಳಲ್ಲಿ ಮಾತ್ರ ೨-೫ ತಿಂಗಳ ‘ಮ್ಯಾಚಿಂಗ್ ಇನ್ಸೆಂಟಿವ್’ ದೊರೆತಿರುತ್ತದೆ. ಮತ್ತೊಂದೆಡೆ ಮಾಡಿದ ಕೆಲಸಕ್ಕೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನೂ ಸಹ ಪ್ರತೀ ತಿಂಗಳು ನೀಡಲಾಗುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ೪-೮ ತಿಂಗಳ ತನಕ ಬಾಕಿ ಉಳಿದಿರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು- ಜಿಲ್ಲಾ ಕೇಂದ್ರಗಳಲ್ಲಿ ಪ್ರೋತ್ಸಾಹಧನ ಕೇಳಿದರೆ ಬಜೆಟ್ ಇಲ್ಲವೆನ್ನುತ್ತಾರೆ.  ರಾಜ್ಯ ಮಟ್ಟದಲ್ಲಿ ಕೇಳಿದರೆ ರಾಜ್ಯಾದ್ಯಂತ ೨೦೧೪-೧೫ ಸಾಲಿನಲ್ಲಿ ಎಪ್ರಿಲ್೨೦೧೪ ರಿಂದ ಡಿಸೆಂಬರ್ ೨೦೧೪ ರವರಗೆ ಬಿಡುಗಡೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಳೆದ ೫ ತಿಂಗಳಿನಿಂದ ನಮ್ಮ ಸಂಘಟನೆಯಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಮಾನ್ಯ ಆರೋಗ್ಯ ಮಂತ್ರಿಗಳು, ಆರೋಗ್ಯ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ನಿರ್ದೇಶಕರು, ಯೋಜನಾ ನಿರ್ದೇಶಕರು – ಆಶಾ ಸಂಶೋಧನಾಧಿಕಾರಿಗಳೊಂದಿಗೆ ಹಲವಾರು ಬಾರಿ ಸುದೀರ್ಘವಾಗಿ ಚರ್ಚಿಸಿರುತ್ತಾರೆ. ನಡಾವಳಿಗಳನ್ನು ಹೊರಡಿಸಲಾಗಿದೆ. ಆದರೆ ಅದರಂತೆ ಇಲ್ಲಿಯವರೆಗೆ  ಜಾರಿಯಾಗದಿರುವುದಕ್ಕೆ ಸಂಘವು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತದೆ.
 ಎನ್‌ಎಚ್‌ಎಂ ಯೋಜನೆಯ ಬಹು ಮುಖ್ಯ ಉದ್ದೇಶ ಗ್ರಾಮೀಣ ಜನರ ಆರೋಗ್ಯ ರಕ್ಷಿಸುವುದೇ ಆಗಿದೆ. ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾದುದೆಂದು, ಇಲಾಖೆ ಮತ್ತು ಸಾರ್ವಜನಿಕರ ಸಂಪರ್ಕ ಸೇತುವೆಯಾಗಿ ಅವರು ಕಾರ್ಯನಿರ್ವಹಿಸುತ್ತಾರೆಂದೂ, ಬಡ ಫಲಾನುಭವಿಗಳಿಗೆ ಸೇವೆಯನ್ನು ಒದಗಿಸುತ್ತಾರೆಂದೂ ಇಲಾಖೆಯ ಅಧಿಕಾರಿಗಳು ಘೋಷಿಸುತ್ತಾರೆ. ಇದರೊಂದಿಗೆ ರಾಜ್ಯದಲ್ಲಿ ಆರೋಗ್ಯ ಸೂಚಿಮಾಪಕಗಳು ಹಿಂದಿಗಿಂತ ಉತ್ತಮವಾಗಿದ್ದು, ಶಿಶುಮರಣ-ತಾಯಿಮರಣ ಕಡಿಮೆಯಾಗಿರುತ್ತದೆ;  ಶೇ.೯೭ರಷ್ಟು ಸಾಂಸ್ಥಿಕ ಹೆರಿಗೆಗಳಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ‘ಆಶಾಗಳ ಸೇವೆ’ ಎಂದು ಆದೇಶದಲ್ಲಿ ಬಣ್ಣಿಸಲಾಗಿದೆ. ನಿಜಕ್ಕೂ ಕಾರ್ಯಕರ್ತೆಯರ ಸೇವೆಗೆ ಸರ್ಕಾರದ ಶ್ಲಾಘನೆ ಸ್ವಾಗತಾರ್ಹವಾಗಿದೆ. ಅತೀ ಮಹತ್ವದ ಸೇವೆಯನ್ನು ಪಡೆಯುತ್ತಿರುವ ಇಲಾಖೆಯು ಆಶಾಗಳನ್ನು ಇಲಾಖೆಯ ‘ಹೃದಯ’ಗಳೆಂದೇ ಗುರುತಿಸುತ್ತಾರೆ. ಆದರೆ ನಿಗದಿಯಾದ ಪ್ರೋತ್ಸಾಹಧನವನ್ನು ವರ್ಷಾನುಗಟ್ಟಲೆ ಇವರಿಗೆ ನೀಡದೇ ಈ ಹೃದಯಗಳ ಹೃದಯ ಬಡಿತ ‘ನಿಲ್ಲಿಸ’ ಹೊರಟಿರುವುದು ಘೋರ ಅಪರಾಧವಲ್ಲದೆ ಇನ್ನೇನು?       
    ಇವರು ಅತ್ಯಂತ ಕಡುಕಷ್ಟಕರ ವಾತಾವರಣದಲ್ಲಿ ಬೆಲೆಕಟ್ಟಲಾಗದ ಸೇವೆ ಸಲ್ಲಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ನವಜಾತಶಿಶುಗಳು, ರೋಗಿಗಳು ಮುಂತಾದವರಿಗೆ ಇವರು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಇದರಿಂದಲೇ ಗ್ರಾಮೀಣ ಜನತೆ ಅವರ ಬಗ್ಗೆ ಅಭಾರಿಯಗಿದ್ದಾರೆ. ಬಹುತೇಕ ಆಶಾಗಳು ಒಂಟಿಜೀವಿಗಳಾಗಿದ್ದಾರೆ ಅಥವಾ ವಿಧವೆಗಳಾಗಿದ್ದಾರೆ. ಅವರ ದುಡಿಮೆಗೆ ದೊರಕಬೇಕಾದ ಮೊತ್ತ ಸಕಾಲದಲ್ಲಿ ಸಿಗದಿದ್ದರೆ ಅವರು ತೀವ್ರ ಬವಣೆಗೆ ತುತ್ತಾಗುತ್ತಾರೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಅವರ ಅಮಾನವೀಯ ಸಂಕಷ್ಟಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹಲವಾರು ತಿಂಗಳಿಂದ ಆಶಾಗಳು ವೇತನ ಪಡೆಯದೇ ಸಾಲ ಮಾಡಿ ಈ ಕೆಲಸ ಮಾಡುತ್ತಾರೆ. ಈಗ ಮನೆಗಳಲ್ಲಿ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪದೇಪದೇ ಅಧಿಕಾರಸ್ಥರ ಗಮನ ಸೆಳೆದಾಗಲೂ ಸೂಕ್ತ ಪರಿಹಾರ ದೊರಕಿರುವುದಿಲ್ಲ. ಅವುಗಳ ಪರಿಹಾರಕ್ಕಾಗಿ ತುರ್ತು ಕ್ರಮಕೈಗೊಳ್ಳುವವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ಅನಿವಾರ್ಯವಾಗಿ ದಿ:೦೧-೦೫-೨೦೧೫ರಿಂದ ರಾಜ್ಯವ್ಯಾಪಿ ‘ಕೆಲಸ ಬಂದ್’ ಮುಷ್ಕರಕ್ಕೆ ಮುಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ದಿ: ೦೧-೦೫-೨೦೧೫ರಿಂದ ‘ಕೆಲಸ ಬಂದ್’ ಮುಷ್ಕರಕ್ಕೆ ಕಾರ್ಯಕರ್ತೆಯರು ಮುಂದಾಗಿದ್ದಾರೆ.
     ‘ಸರ್ಕಾರ/ಇಲಾಖೆಯು ಜನತೆಯ ಆರೋಗ್ಯದ ನಿರ್ಲಕ್ಷ್ಯದ ಹೊಣೆಗೆ ಜವಾಬ್ದಾರವಾಗುತ್ತದೆ’ ಎಂಬುದನ್ನು ಈ ಮೂಲಕ ತಿಳಿಸಲು ಇಚ್ಛಿಸುತ್ತೇವೆ. ಗ್ರಾಮೀಣ ಜನತೆ ಅದರಲ್ಲೂ ಮಹಿಳೆಯರು ತೀವ್ರ ಸಂಕಷ್ಟಕ್ಕೆ ತುತ್ತಾಗುತ್ತಾರೆ ಎಂಬುದು ನಮಗೆ ತಿಳಿದಿದೆ. ಅನಿವಾರ್ಯ ಕಾರಣಗಳಿಂದಾಗಿ ಈ ತೀರ್ಮಾನ ತೆಗೆದುಕೊಳ್ಳಬೇಕಾಗಿ ಬಂದಿರುವುದರಿಂದ ನಮ್ಮ ಸಂಕಷ್ಟಗಳಿಗೆ ಅವರು ಸ್ಪಂದಿಸಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದು ನಾವು ನಂಬಿದ್ದೇವೆ.

ಬೇಡಿಕೆಗಳು:
ಬೇಡಿಕೆಗಳ ಕುರಿತು ಹಿಂದಿನ ಸಭೆಗಳ ನಡಾವಳಿಗಳಲ್ಲಿರುವಂತೆ ಹಲವು ನಿರ್ಣಯಗಳ ಬಗ್ಗೆ
ಇಲಾಖೆಯಿಂದ ಸೂಕ್ತ ಕ್ರಮಕೈಗೊಳ್ಳಬೇಕಾಗಿರುವುದು

೧.    ನವಂಬರ್೨೦೧೩ ರಿಂದ ಮಾರ್ಚ್ ೨೦೧೫ವರೆಗೆ ಬಾಕಿ ಇರುವ ಜಿಲ್ಲೆಗಳಿಗೆ ಕೂಡಲೇ ರಾಜ್ಯ ಸರ್ಕಾರದ ಸರಿಸಮ ಪ್ರೋತ್ಸಾಹಧನವನ್ನು (ಮ್ಯಾಚಿಂಗ್ ಇನ್ಸೆಂಟಿವ್) ಬಿಡುಗಡೆ ಮಾಡಲು ಸೂಕ್ತಕ್ರಮಕ್ಕೆ ಮುಂದಾಗಬೇಕು.
೨.    ೪-೮ ತಿಂಗಳಿಂದ ಬಾಕಿ ಇರುವ ಕೇಂದ್ರದ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು.
೩.    ಕೇಂದ್ರದಿಂದ ನಿಗದಿಯಾದ ಮೊತ್ತಕ್ಕೆ ರಾಜ್ಯದ ಸರಿಸಮ ಪ್ರೋತ್ಸಾಹಧನ ಸೇರಿಸಿ ಆದೇಶದಂತೆ ಪ್ರತೀ ತಿಂಗಳು ಪ್ರತೀ ಆಶಾಗೆ ಕನಿಷ್ಟ ರೂ.೨೨೦೦ ಅನ್ನು ಜನವರಿ ೨೦೧೪ ರಿಂದ ನೀಡಲು ಸೂಕ್ತಕ್ರಮ ಕೈಗೊಳ್ಳಬೇಕು. 
೪.    ಪ್ರತೀ ತಿಂಗಳು ಮಾಡಿದ ಕೆಲಸಕ್ಕೆ ಎಲ್ಲಾ ಕಾಂಪೋನೆಂಟ್‌ಗಳ ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹಧನವನ್ನು ಪ್ರತೀ ತಿಂಗಳಿಗೇ ಆನ್‌ಲೈನ್ ಮುಖಾಂತಾರ ನೀಡಲು ಸೂಕ್ತಕ್ರಮ ಕೈಗೊಳ್ಳಬೇಕು.
೫.    ಕೇಂದ್ರದ ನಿರ್ದೇಶನದಂತೆ ಎಲ್ಲಾ ಕಾರ್ಯಕರ್ತೆಯರಿಗೆ ೧ ವರ್ಷಕ್ಕೆ ೪ ಗುಲಾಬಿ ಸೀರೆ(ಸಮವಸ್ತ್ರ)ಗಳನ್ನು ನೀಡಲು ಕೂಡಲೇ ಕ್ರಮ.
೬.    ಕೇಂದ್ರದ ನಿರ್ದೇಶನದಂತೆ, ರಾಜ್ಯದಿಂದ ನೀಡಿದ ಭರವಸೆಯಂತೆ ಮೊಬೈಲ್-ಸಿಮ್ ನೀಡಲು ಕೂಡಲೇ ಕ್ರಮ.
೭.    ಆಶಾಗಳ ಬುಡಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಆಶಾ ಮೆಂಟರ್‌ಗಳ ರಾಜ್ಯ ಮಟ್ಟದ ಸಭೆ ಅಥವಾ ವಿಡಿಯೋ ಕಾನ್‌ಫೆರೆನ್ಸ್ ಮಾಡಲಾಗುವುದು ಎಂಬುವುದರ ಬಗ್ಗೆ ಸೂಕ್ತ ಕ್ರಮ.
೮.    ಆಶಾ ಕಾರ್ಯಕರ್ತೆಯರಿಗೆ ಮರಣ ಪರಿಹಾರ, ಮಾರಣಾಂತಿಕ ಕಾಯಿಲೆಗೆ ತುತ್ತಾದ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ಚಿಕಿತ್ಸೆ/ಆರ್ಥಿಕ ನೆರವನ್ನು ನೀಡಲು ಆಶಾ ಕ್ಷೇಮಾಭಿವೃದ್ದಿ ನಿಧಿ (ಅoಡಿಠಿus ಈuಟಿಜ) ಗಾಗಿ ರೂ. ೫ ಕೋಟಿ ಮೀಸಲಿಡುವ ಭರವಸೆಯಂತೆ ಜಾರಿಗಾಗಿ ಸೂಕ್ತಕ್ರಮ.
೯.    ಸಾಮಾಜಿಕ ಭದ್ರತೆಗಾಗಿ ಆಶಾಗಳಿಗೆ ಜನಶ್ರೀಭೀಮಾ ಯೋಜನೆಯಂತೆ ತಲಾ ಒಬ್ಬರಿಗೆ ಕೇಂದ್ರದ ವಾರ್ಷಿಕ ರೂ.೧೦೦ ಪ್ರೀಮಿಯಂಗೆ ಕಾರ್ಯಕರ್ತೆ ನೀಡಬೇಕಾದ ಪ್ರೀಮಿಯಂ ರೂ.೧೦೦ನ್ನು ರಾಜ್ಯ ಸರ್ಕಾರದಿಂದ ನೀಡುವ ಭರವಸೆಯಂತೆ ಸೂಕ್ತಕ್ರಮ.
೧೦.    ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಜಾರಿ ಮಾಡಲು ಭರವಸೆಯಂತೆ ಸೂಕ್ತಕ್ರಮ.  ಪ್ರಮುಖ ಬೇಡಿಕೆ:
೧೧.    ಆಶಾ ಕಾರ್ಯಕರ್ತೆಯರಿಗೆ ಜೀವನಯೋಗ್ಯ ಮಾಸಿಕ ನಿಗದಿತ ವೇತನ ನಿಗದಿ ಮಾಡಿ, ಇಲಾಖೆಯಿಂದ ಪ್ರೋತ್ಸಾಹಧನ ನೀಡುವಲ್ಲಿ ಆಗುತ್ತಿರುವ ತೊಂದರೆ-ವಿಳಂಬ-ಗೊಂದಲಗಳ ಸಮಸ್ಯೆಗಳನ್ನು ಪರಿಹರಿಸಿ.      

Leave a Reply

Top