ಬೇಥಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹೇಮಾ ಮತ್ತು ಸುಮಿತ್ರಾ ಸುಧಾಕರ ಶ್ಲಾಘನೀಯ ಕಾರ್ಯ

ಗಂಗಾವತಿ: ಕನ್ನಡ ಸಾಹಿತ್ಯ ಸಮ್ಮೇಳನದಂತ ಸಾರ್ವಜನಿಕ ಸಭೆ ಸಮಾರಂಭಕ್ಕೆ ಜನ ನೆರವಾಗುವುದು ವಿರಳ. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಕಡೆಗಾಣಿಸಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಹಾಯ ಹಸ್ತ ಚಾಚುವವರ ಸಂಖ್ಯೆ ಅತಿವಿರಳ.
ಆದರೆ ನಗರದಲ್ಲಿನ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರು ತಮ್ಮ ಮನೆಯಲ್ಲಿರುವ ಶುಭ ಕಾರ್ಯ  ಲೆಕ್ಕಿಸದೇ, 78ನೇ ಸಾಹಿತ್ಯ ಸಮ್ಮೇಳನಕ್ಕಾಗಿ ನಗರಕ್ಕೆ ಬರುವ ನೂರಾರು ಅತಿಥಿಗಳಿಗೆ ವಸತಿ, ಉಪಹಾರದ ವ್ಯವಸ್ಥೆಯ ಏರ್ಪಾಡು ಮಾಡುವ ಭರವಸೆ ನೀಡಿ ಮಾದರಿ ಎನಿಸಿದ್ದಾರೆ.
ನಗರದ ಗುಡ್ ಶಪರ್ಡ್ ಶಿಕ್ಷಣ ಸಂಸ್ಥೆಯ ಬೇಥಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹೇಮಾ ಮತ್ತು ಸುಮಿತ್ರಾ ಸುಧಾಕರ ಅತಿಥಿಗಳಿಗೆ ವಸತಿ ಏರ್ಪಾಡು ಮಾಡುವ ಮೂಲಕ ಶ್ಲಾಘನೀಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಮೊದಲು ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 18,19 ಮತ್ತು 20 ಎಂದು ನಿಗದಿಪಡಿಸಲಾಗಿತ್ತು. ತಮ್ಮ ಸಂಸ್ಥೆಯ ಶಾಲೆಯಲ್ಲಿನ ಕೋಣೆಗಳಲ್ಲಿ ಎಷ್ಟೇ ಅತಿಥಿ ಬಂದರೂ ಸೂಕ್ತ ಏರ್ಪಾಡು ಮಾಡುವುದಾಗಿ ಸಂಸ್ಥೆಯ ಮುಖ್ಯಸ್ಥರು ಭರವಸೆ ನೀಡಿದ್ದರು.  
ಆದರೆ ಏಕಾಏಕಿ ಸಮ್ಮೇಳನ ಡಿ. 8, 9 ಮತ್ತು 10ಕ್ಕೆ ನಿಗದಿಯಾಯಿತು. ಆದರೆ ಅದೇ ಹೊತ್ತಿಗೆ ಸುಮಿತ್ರಾ ಸುಧಾಕರ ಅವರ ಪುತ್ರನ ವಿವಾಹ ಡಿ. 10ಕ್ಕೆ ವಿಶಾಲ ಶಾಲಾ ಆವರಣದಲ್ಲಿಯೇ ನಿಗದಿಗೊಳಿಸಿ ಮೂರ‌್ನಾಲ್ಕು ತಿಂಗಳ ಹಿಂದೆಯೆ ನಿರ್ಣಯಿಸಲಾಗಿತ್ತು. 
ಸಂಸ್ಥೆಯ ಮುಖ್ಯಸ್ಥೆಯ ಪುತ್ರನ ವಿವಾಹ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ಸಮ್ಮೇಳನ ಎದುರಾಗಿದ್ದರಿಂದ ಸಮಸ್ಯೆಯಾಯಿತು. ಸಮ್ಮೇಳನ ಸಂದರ್ಭದಲ್ಲಿ ಅತಿಥಿ ಸತ್ಕಾರ ಮಾಡುವುದಾಗಿ ಈ ಮೊದಲೇ ಮಾತು ಕೊಡಲಾಗಿತ್ತು ಬೇರೆ.
ಈ ಹಿನ್ನೆಲೆ ಶನಿವಾರ ನಡೆದ ವಸತಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ಸುಮಿತ್ರಾ ಸುಧಾಕರ ಅವರು, ಪುತ್ರನ ವಿವಾಹ ಸಮಾರಂಭವಿದ್ದರೂ ಕೂಡ ಕನಿಷ್ಟ ಇನ್ನೂರು ಅತಿಥಿಗಳಿಗೆ ಮೂರು ದಿನಗಳ ಕಾಲ ಆತಿಥ್ಯ ನೀಡುವುದಾಗಿ ಭರವಸೆ ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.

Leave a Reply