fbpx

ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಸೂಚನೆ.

ಕೊಪ್ಪಳ ಆ. ೦೬ ನಗರ, ಪಟ್ಟಣಗಳ ಸ್ವಚ್ಛತೆಗೆ ತಮ್ಮ ಸೇವೆಯನ್ನು ಮುಡಿಪಾಗಿಡುವ ಪೌರ ಕಾರ್ಮಿಕರಿಗೆ ನಿಯಮಾನುಸಾರ ಅಗತ್ಯ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅವರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಪೌರ ಕಾರ್ಮಿಕರ ಕುಂದುಕೊರತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರಾಜ್ಯದಲ್ಲಿ ಒಟ್ಟು ೧. ೨೦ ಲಕ್ಷ  ಪೌರ ಕಾರ್ಮಿಕರಿದ್ದು, ಪೌರ ಕಾರ್ಮಿಕರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ನಗರ, ಪಟ್ಟಣಗಳ ಸ್ವಚ್ಛತೆಗೆ ನೇಮಕಗೊಂಡಿರುವ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಿದ್ದು, ಇದರ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ.  ಸದ್ಯ ರಾಜ್ಯಾದ್ಯಂತ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ರದ್ದುಪಡಿಸಿ, ಸ್ಥಳೀಯ ಸಂಸ್ಥೆಗಳಿಂದಲೇ ನೇಮಕ ಮಾಡಿಕೊಂಡು, ಸಮರ್ಪಕ ವೇತನ ಪಾವತಿಸಲು ಆಯೋಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.  ಎಲ್ಲ ಪೌರಾ ಕಾರ್ಮಿಕರಿಗೆ ತಪ್ಪದೆ ಗುರುತಿನ ಚೀಟಿ ವಿತರಣೆ ಆಗಬೇಕು.  ೧೦ ವರ್ಷಗಳಿಗೂ ಹೆಚ್ಚು ಕಾಲ ದಿನಗೂಲಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂ ಸಿಬ್ಬಂದಿಯಾಗಿಸಲು ಕ್ರಮ ಕೈಗೊಳ್ಳಬೇಕು.  ದಿನವೊಂದಕ್ಕೆ ರೂ. ೨೬೮. ೩೫ ಗಳ ಕನಿಷ್ಟ ವೇತನವನ್ನು ಕಾರ್ಮಿಕ ಕಾಯ್ದೆಯನ್ವಯ ನಿಗದಿಪಡಿಸಲಾಗಿದ್ದು, ಇದರನ್ವಯ ದಿನಗೂಲಿ ಅಥವಾ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿ ವ್ಯವಸ್ಥೆ ಪಾಲನೆ ಆಗಬೇಕು ಜೊತೆಗೆ ಪಿಎಫ್, ಹಾಗೂ ಇಎಸ್‌ಐ ವಂತಿಗೆ ಜಮಾ ಆಗಬೇಕು.  ಎಲ್ಲ ಕಾರ್ಮಿಕರಿಗೆ ವೇತನವನ್ನು ಆರ್‌ಟಿಜೆಎಸ್ ವ್ಯವಸ್ಥೆಯಲ್ಲಿ ಆಯಾ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಬೇಕು.  ಪೌರ ಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳನ್ನು ಒದಗಿಸಬೇಕು.  ಕನಿಷ್ಟ ಮೂರು ತಿಂಗಳಿಗೊಮ್ಮೆ ಎಲ್ಲ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಆಗಬೇಕು.  ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ನಗರಸಭೆಯಿಂದಲೇ ಚಿಕಿತ್ಸೆ ದೊರಕಿಸಬೇಕು, ವಸತಿ ಸೌಲಭ್ಯ ಕಲ್ಪಿಸಬೇಕು.  ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ಸಮರ್ಪಕವಾಗಿ ದೊರೆಯಬೇಕು.  ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ನಗರಸಭೆಯಿಂದಲೇ ಒದಗಿಸಬೇಕು.  ಇವಿಷ್ಟು ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ತಪ್ಪದೆ ಒದಗಿಸಬೇಕು.  ಯಾವುದೇ ನ್ಯೂನತೆಗಳನ್ನು ಒಂದು ತಿಂಗಳ ಒಳಗಾಗಿ ಸರಿಪಡಿಸಿಕೊಳ್ಳಬೇಕು.  ಆಯೋಗವು ಮುಂದಿನ ತಿಂಗಳು ಮತ್ತೊಮ್ಮೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನ್ಯೂನತೆಗಳು ಕಂಡು ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳನ್ನು ಆಯೋಗವು ವಿಚಾರಣೆಗೆ ಒಳಪಡಿಸಿ, ಕ್ರಮ ಕೈಗೊಳ್ಳಲಿದೆ.  ಎಂದು ಆಯೋಗದ ಅಧ್ಯಕ್ಷ ನಾರಾಯಣ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗಂಗಾವತಿಯಲ್ಲಿ ಕೂಡಲೆ ವೇತನ ಪಾವತಿಸಿ : ಗಂಗಾವತಿ ನಗರಸಭೆಯಲ್ಲಿ ೬೮ ಜನ ಖಾಯಂ ಹಾಗೂ ೭೮ ಜನ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ೦೯ ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ ಎಂದು ತಿಳಿದು ತೀವ್ರ ಅಸಮಾಧಾನಗೊಂಡ ಆಯೋಗದ ಅಧ್ಯಕ್ಷರು, ಗಂಗಾವತಿ ನಗರಸಭೆ ಪೌರಾಯುಕ್ತ ರಂಗಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.  ಇದಕ್ಕೆ ಉತ್ತರಿಸಿದ, ರಂಗಸ್ವಾಮಿ ಅವರು, ಹಿಂದಿನ ಅವಧಿಯಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವುದು, ಇದಕ್ಕೆ ಕಾರಣವಾಗಿದೆ.  ೭೮ ಜನರಿಗೆ ವೇತನ ಪಾವತಿಗೆ ಸರ್ಕಾರ ಈ ಹಿಂದೆ ಅನುದಾನ ಒದಗಿಸುತ್ತಿತ್ತು.  ಆದರೆ ಕಳೆದ ಒಂದು ವರ್ಷದಿಂದ ಅನುದಾನ ಸ್ಥಗಿತಗೊಂಡಿದೆ.  ಪೌರ ಕಾರ್ಮಿಕರ ವೇತನ ಪಾವತಿಗೆ ತಿಂಗಳಿಗೆ ಕನಿಷ್ಟ ೨೫ ಲಕ್ಷ ರೂ. ಗಳ ಅನುದಾನದ ಅಗತ್ಯವಿದೆ.  ಇದೀಗ ನಗರಸಭೆಯ ಆದಾಯ ಸಂಪನ್ಮೂಲದಿಂದಲೇ ವೇತನ ಪಾವತಿ ಮಾಡಬೇಕಿರುವುದರಿಂದ, ತೊಂದರೆ ಉಂಟಾಗಿದೆ.  ನಗರಸಭೆಯಿಂದ ತೆರಿಗೆ ಸಂಪನ್ಮೂಲ ಕ್ರೋಢೀಕರಿಸಿ, ೧೫ ದಿನಗಳ ಒಳಗಾಗಿ ಮೂರು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕನಿಷ್ಟ ವೇತನ ಪಾವತಿಸದವರ ವಿರುದ್ಧ ಪ್ರಕರಣ ದಾಖಲಿಸಿ : ಯಾವುದೇ ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತಿಗಳ ಪೌರ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯನ್ವಯ ಕನಿಷ್ಟ ವೇತನ ಪಾವತಿ ಮಾಡದವರ ವಿರುದ್ಧ ಪ್ರಕರಣ ದಾಖಲಿಸಬೇಕು.  ಕಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಯೋಗದ ಕಾರ್ಯದರ್ಶಿ ಡಾ. ಸಂಗಾಪುರ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಕಾರ್ಮಿಕ ಅಧಿಕಾರಿ, ಈಗಾಗಲೆ ಕನಿಷ್ಟ ವೇತನ ಕಾಯ್ದೆಯನ್ನು ಉಲ್ಲಂಘಿಸಿರುವ ಗಂಗಾವತಿ ನಗರಸಭೆ ಅಧಿಕಾರಿಗಳ ವಿರುದ್ಧ ಕಾರ್ಮಿಕ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ವಿಭಾಗ ಮಟ್ಟದ ಕಾರ್ಮಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಗೊಳಿಸಲಾಗಿದೆ.  ಆದರೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿಸಿದರು. ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ : ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ, ಶಿಕ್ಷಣ, ಸಾಲ ಸೌಲಭ್ಯ ಮುಂತಾದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಮರ್ಪಕ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ ಈ ಮೂಲಕ ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಆಯೋಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಆಯೋಗದ ಕಾರ್ಯದರ್ಶಿ ಡಾ. ಸಂಗಾಪುರ ಅವರು ತಿಳಿಸಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದರ್, ಗಂಗಾವತಿ ನಗರಸಭೆ ಪೌರಾಯುಕ್ತ ರಂಗಸ್ವಾಮಿ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವಿವಿಧೆಡೆ ಬಿಎಸ್‌ಎನ್‌ಎಲ್ ೩ಜಿ ಟವರ್ ಮಂಜೂರು
ಕೊಪ್ಪಳ, ಆ.೦೬ (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಬಿಎಸ್‌ಎನ್‌ಎಲ್ ೩ಜಿ ಟವರ್ ಅನ್ನು ಭಾರತೀಯ ದೂರ ಸಂಪರ್ಕ ನಿಗಮ ಮಂಜೂರು ಮಾಡಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ 
     ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ತ್ವರಿತ ಇಂಟರ್‌ನೆಟ್ ಮತ್ತು ಮೊಬೈಲ್ ಸಂಪರ್ಕ ಒದಗಿಸುವ ದೃಷ್ಠಿಯಿಂದ ೩ಜಿ ಟವರ್ ಮಂಜೂರು ಮಾಡುವಂತೆ ಸಂಸದರು ಭಾರತೀಯ ದೂರ ಸಂಪರ್ಕ ನಿಗಮಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇದೀಗ ನಿಗಮವು ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ-೦೨, ಗಿಣಗೇರಾ-೦೧, ಭಾಗ್ಯನಗರ-೦೧, ಕುಷ್ಟಗಿ ಪಟ್ಟಣ-೦೨, ಯಲಬುರ್ಗಾ -೦೧, ಕುಕನೂರು-೦೧, ಗಂಗಾವತಿ ತಾಲೂಕಿನ ಕಾರಟಗಿ-೦೨, ಹೊಸಳ್ಳಿ-೦೧, ಮಿನಿ ವಿಧಾನಸೌಧ(ಗಂಗಾವತಿ)-೦೧, ಗಂಗಾವತಿ-೦೧, ಸಿಂಧನೂರು -೦೪, ಪಿ.ಡಬ್ಲ್ಯೂ.ಡಿ ಕ್ಯಾಂಪ್-೦೧ ಹಾಗೂ ಮಸ್ಕಿ ಪಟ್ಟಣದಲ್ಲಿ ೦೨ ಕಡೆ ೩ಜಿ ಟವರ್‌ಗಳನ್ನು ಮಂಜೂರು ಮಾಡಿದೆ ಎಂದು ಸಂಸದರ ಕಚೇರಿ ತಿಳಿಸಿದೆ.

Please follow and like us:
error

Leave a Reply

error: Content is protected !!