ಬ್ಲೂಫಿಲಂ ವೀಕ್ಷಣೆ ಪ್ರಕರಣ : ತನಿಖೆಗೆ ಕೋರ್ಟ್ ಆದೇಶ

ಬೆಂಗಳೂರು, ಫೆ.13: ವಿಧಾನಸಭೆಯೊಳಗೆ ಬ್ಲೂಫಿಲಂ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಂಟನೆ ಎಸಿಎಂಎಂ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಸದನದೊಳಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಬ್ಲೂಫಿಲಂ ವೀಕ್ಷಿಸಿ ಸಿಕ್ಕಿಬಿದ್ದಿದ್ದರು. ಬಳಿಕ ಅವರು ರಾಜೀನಾಮೆ ನೀಡಿದ್ದು, ಈಗ ಮತ್ತೆ ಕಷ್ಟದ ಮೇಲೆ ಕಷ್ಟವನ್ನು ಎದುರಿಸುವಂತಾಗಿದೆ. ತಾವು ಮಾಡಿದ ತಪ್ಪಿಗೆ ರಾಜೀನಾಮೆ ನೀಡಿದ ಬಳಿಕ ಸದನ ಸಮಿತಿ ರಚಿಸಿ, ಅವರಿಗೆ ಕಾರಣ ಕೇಳಿ ನೋಟಿಸ್ ಕೂಡಾ ನೀಡಲಾಗಿತ್ತು.
ಸಚಿವರು ಬ್ಲೂಫಿಲಂ ನೋಡಿದ್ದನ್ನು ಪ್ರಶ್ನಿಸಿ ವಕೀಲ ಧರ್ಮಪಾಲ್ ಗೌಡ ಎಂಬವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಕೋರಿ ಸ್ಪೀಕರ್ ಬೋಪಯ್ಯ ಹಾಗೂ ನ್ಯಾಯಾಲಯದಲ್ಲಿಯೂ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕೇಣಿ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ನಿರೀಕ್ಷಕರಿಗೆ ಆದೇಶಿಸಿದ್ದಾರೆ. ತನಿಖಾ ವರದಿಯನ್ನು ಈ ತಿಂಗಳ 27ರೊಳಗೆ ಸಲ್ಲಿಸುವಂತೆ ಪೊಲೀಸ್ ನಿರೀಕ್ಷಕರಿಗೆ ಅವರು ಸೂಚನೆ ನೀಡಿದ್ದಾರೆ.
ಕಳಂಕಿತರ ವಿರುದ್ಧ ಭಾರತೀಯ ದಂಡ ಸಂಹಿತೆ 274ರ ಅನ್ವಯ ಕ್ರಮ ಜರಗಿಸುವಂತೆ ಅರ್ಜಿದಾರರು ಕೋರಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕೇಣಿ ಸಿಆರ್‌ಪಿಸಿ 156(3)ರ ಅನ್ವಯ ವಿಧಾನಸೌಧ ಪೊಲೀಸರಿಗೆ ತನಿಖೆಗೆ ಆದೇಶಿಸಿದ್ದಾರೆ. ಈ ಮಧ್ಯೆ ಇಂದು ಸ್ವೀಕರ್ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಮೂವರು ಮಾಜಿ ಸಚಿವರು ಸಮಯಾವಕಾಶ ಕೇಳಿ ಪತ್ರ ಬರೆದಿದ್ದಾರೆ. ಒಂದು ವೇಳೆ ಇಂದು ಉತ್ತರ ನೀಡಿದ್ದರೆ ನಾಳೆ ಸದನ ಸಮಿತಿ ರಚನೆಯಾಗುತ್ತಿತ್ತು. ಇದೇ ವೇಳೆ ಈಗ ಎಂಟನೆ ಎಸಿಎಂಎಂ ನ್ಯಾಯಾಲಯ ತನಿಖೆಗೆ ಆದೇಶಿರುವುದು ಮೂವರು ಮಾಜಿ ಸಚಿವರ ನಿದ್ದೆಗೆಡುವಂತೆ ಮಾಡಿದೆ
Please follow and like us:
error