ಮಕ್ಕಳ ಹಕ್ಕುಗಳನ್ನು ಗೌರವಿಸಿ : ವಿದ್ಯಾರ್ಥಿಗಳಿಗೆ ಬಸಪ್ಪ ಹಾದಿಮನಿ ಕರೆ

 ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆಯನ್ನು ಸರ್ಕಾರವು ಜಾರಿಗೆಗೊಳಿಸಿದ್ದು, ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಾಗಿದೆ. ಈ ಕಾಯ್ದೆಯಡಿಯಲ್ಲಿ ೧೮ ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ದಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದಲ್ಲಿ ಅದು ವಿಚಾರಣಾ ಅರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕೆಂದು ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ದೇಶವು ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಪ್ರಯತಿಸುತ್ತಿದೆ. ಅಲ್ಲದೇ ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆಯನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ತಿಳಿಸಿದರು.
  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಮಾತನಾಡಿ, ಪ್ರತಿಯೊಂದು ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಪ್ರಾರಂಬ ಮಾಡಲಾಗಿದೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಚ್.ಐ.ವಿ ಸೋಂಕಿತ ಭಾದಿತ ಕುಟುಂಬದ ಮಕ್ಕಳಿ ವಿಶೇಷ ಪಾಲನಾ ಯೋಜನೆಯಡಿಯಲ್ಲಿ ಎಚ್.ಐ.ವಿ ಸೋಂಕಿತದಿಂದ ತಂದೆ ತಾಯಿ ತೀರಿ ಹೋದಲ್ಲಿ ಪ್ರತೀ ತಿಂಗಳು ೭೫೦ ರೂಗಳಂತೆ, ತಂದೆ-ತಾಯಿ ಇಬ್ಬರಲ್ಲಿ ಒಬ್ಬರು ಜೀವಂತ ಇದ್ದರೆ ಪ್ರತೀ ತಿಂಗಳು ೬೫೦ ರೂಗಳಂತೆ ೧೮ ವರ್ಷದವರೆಗೆ ಸಹಾಯಧನವಾಗಿ ನೀಡಲಾಗುತ್ತದೆ. ಶೈಕ್ಷಣಿಕ ವೆಚ್ಚವಾಗಿ ವರ್ಷಕ್ಕೆ ೫೦೦ ರೂಗಳನ್ನು ಸಹ ನೀಡಲಾಗುತ್ತದೆ. ಸಮಾಜಕ್ಕೆ ಬೇಡವಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ನಂತರ ಅಂತಹ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಓಳಪಡಿಸಲಾಗುತ್ತದೆ.  ಮಕ್ಕಳ ಸಹಾಯವಾಣಿಯ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ೧೦೯೮ ಸ್ಥಾಪಿತವಾಗಿದೆ. ಬಾಲಕಾರ್ಮಿಕ, ಬಾಲ್ಯವಿವಾಹ,  ಬಿಕ್ಷಾಟನೆ, ಚಿಂದಿ ಆರಿಸುವ ಮಕ್ಕಳು ಯಾವುದೇ ರೀತಿ ತೊಂದರೆಯಲ್ಲಿ ಸಿಲುಕಿರುವಂತಹ ಮಕ್ಕಳು ಕಂಡು ಬಂದಲ್ಲಿ ಕೂಡಲೆ ೧೦೯೮ ಕ್ಕೆ ಕರೆ ಮಾಡಿ ಇದು ೨೪*೭ ಗಂಟೆಗಳಲ್ಲಿಯೂ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ನಿಂಗಪ್ಪ ಚಕ್ರಸಾಲಿ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.  ಶಾಲೆಯ ಸಹಶಿಕ್ಷಕರು ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಮಹೇಶ ಮತ್ತು ಭಾಗಮ್ಮ ಕಂಬಳಿ ಭಾಗವಹಿಸಿದ್ದರು. ಸಮಾಜ ಕಾರ್ಯ ವಿದ್ಯಾರ್ಥಿ ಮಹೇಶ ಕೊನೆಯಲ್ಲಿ ವಂದಿಸಿದರು.

Leave a Reply