ರಾಜ್ಯದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಿಂತನೆ- ಶಿವರಾಜ್ ಎಸ್. ತಂಗಡಗಿ

  ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತಿ, ಕಂದಾಯ ಇಲಾಖೆ ಹೀಗೆ ವಿವಿಧ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿ.ಪಂ. ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಸುಮಾರು ೨೬೦೦೦ ಕೆರೆಗಳು ಜಿ

ಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿದ್ದು, ಅದರಂತೆ ವಿವಿಧ ಇಲಾಖಾ ವ್ಯಾಪ್ತಿಯಲ್ಲಿಯೂ ಸಹ ಕೆರೆಗಳು ಇವೆ.  ಆದರೆ ಕೆರೆಗಳ ನಿರ್ವಹಣೆಯಲ್ಲಿ ಹಲವಾರು ತೊಂದರೆಗಳು ಉಂಟಾಗಿದ್ದು, ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ರಾಜ್ಯದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ.  ಇದರಿಂದಾಗಿ ಕೆರೆಗಳ ಸಮರ್ಪಕ ನಿರ್ವಹಣೆ, ಕೆರೆಗಳ ಪುನರುಜ್ಜೀವನದಂತಹ ಅಭಿವೃದ್ಧಿಪರ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಲು ಸಹಕಾರಿಯಾಗಲಿದೆ.  ಈ ಕುರಿತಂತೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು.  ಜಿಲ್ಲೆಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಅಭಿವೃದ್ಧಿ ಮುಂತಾದ ಕಾಮಗಾರಿಗಳಿಗೆ ಪ್ರಸಕ್ತ ಸಾಲಿಗೆ ಸುಮಾರು ೭೪ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.


ಒತ್ತುವರಿ ತೆರವುಗೊಳಿಸಿ :
ಜಿಲ್ಲೆಯಲ್ಲಿ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒತ್ತುವರಿ ಮಾಡಲಾಗಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ, ಅಂತಹ ಭೂಮಿಯನ್ನು ಕೂಡಲೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.  ಒತ್ತುವಾರಿ ಮಾಡಿಕೊಂಡವರು ಎಂತಹ ಪ್ರಭಾವಶಾಲಿಗಳೇ ಆಗಿದ್ದರೂ, ಯಾವುದೇ ಮುಲಾಜಿಲ್ಲದೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು.  ತೆರವುಗೊಳಿಸಿದ ಭೂಮಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನ, ಶೌಚಾಲಯ ನಿರ್ಮಾಣ ಮುಂತಾದ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜೀವ್‌ಗಾಂಧಿ ಸಬ್‌ಮಿಷನ್ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮದ ಒಟ್ಟು ೧೪ ಯೋಜನೆಗಳು ಹಲವಾರು ವರ್ಷಗಳಿಂದಲೂ ಕುಂಟುತ್ತಾ ಸಾಗಿದ್ದು, ಇದರಿಂದಾಗಿ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗುತ್ತಿದೆ.  ಆನೆಗೊಂದಿ, ಬಸಾಪಟ್ಟಣ ಗ್ರಾಮಗಳ ಯೋಜನೆಗಳನ್ನು ಆಗಸ್ಟ್ ೧೪ ರ ಒಳಗಾಗಿ ಪೂರ್ಣಗೊಂಡು ನೀರು ಪೂರೈಕೆ ಪ್ರಾರಂಭವಾಗಬೇಕು.  ಉಳಿದ ಯೋಜನೆಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು.  ಸಬ್‌ಮಿಷನ್ ಯೋಜನೆಗಳ ಕುರಿತು ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಜು. ೧೦ ರಂದು ಸಭೆ ನಡೆಸಿ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.  ಈ ಸಭೆಗೆ ಎಲ್ಲ ಅಧಿಕಾರಿಗಳು, ಸಂಬಂಧಿಸಿದ ಗುತ್ತಿಗೆದಾರರನ್ನು ತಪ್ಪದೆ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಸೂಚನೆ ನೀಡಿದರು.
ವಸತಿನಿಲಯ ಸ್ಥಳಾಂತರಕ್ಕೆ ಸೂಚನೆ :
 ಕೊಪ್ಪಳ ನಗರದ ಕಿತ್ತೂರು ಚೆನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ ಕಳೆದ ಜು. ೦೫ ರಂದು ರಾತ್ರಿ ವಿದ್ಯಾರ್ಥಿನಿಯರು ಭಯಗ್ರಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಕಲ ಸೌಲಭ್ಯವಿರುವ ಸೂಕ್ತ ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡು, ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಅಲ್ಲಿಗೆ ಸ್ಥಳಾಂತರಿಸಬೇಕು.  ಸದ್ಯವಿರುವ ಕಟ್ಟಡವನ್ನು ಬಾಲಕರ ವಸತಿ ನಿಲಯಕ್ಕೆ ಬಳಸಿಕೊಳ್ಳಬಹುದಾಗಿದೆ.  ಅಲ್ಲಿಯವರೆಗೂ ಈ ವಸತಿನಿಲಯಕ್ಕೆ ಕನಿಷ್ಟ ಇಬ್ಬರು ಕಾವಲುಗಾರರನ್ನು ನೇಮಿಸಿ ಸೂಕ್ತ ಭದ್ರತೆಯನ್ನು ಕೈಗೊಂಡು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.  ಅಲ್ಲದೆ ವಸತಿ ನಿಲಯಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.  ಜಿಲ್ಲೆಯಲ್ಲಿರುವ ಎಲ್ಲ ವಸತಿನಿಲಯಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳ ಸಲಹೆಯನ್ನು ಪಡೆದು ಅವರು ಸೂಚಿಸುವ ಸ್ಥಳಗಳಲ್ಲಿ ಸಿಸಿ ಟಿ.ವಿ. ಕ್ಯಾಮರಾವನ್ನು ಕಡ್ಡಾಯವಾಗಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಜು. ೧೦ ರಂದು ಕೊಪ್ಪಳದಲ್ಲಿ ಅನ್ನಭಾಗ್ಯ : 
ಬಡ ಕುಟುಂಬಗಳಿಗೆ ಪ್ರತಿ ೦೧ ರೂ. ಕೆ.ಜಿ.ಗೆ ಅಕ್ಕಿ ವಿತರಿಸುವ ಯೋಜನೆಯನ್ನು ಜು. ೧೦ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಗೊಳಿಸಲು ಸಕಲ ವ್ಯವಸ್ಥೆ ಕೈಗೊಳ್ಳಬೇಕು.  ಜು. ೧೧ ರಂದು ತಾಲೂಕು ಮಟ್ಟದಲ್ಲಿ ಆಯಾ ಕ್ಷೇತ್ರದ ಶಾಸಕರನ್ನು ಆಹ್ವಾನಿಸಿ, ಯೋಜನೆಯನ್ನು ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿನಿಲಯಗಳಿಗೆ ಅಕ್ಕಿ ತಕ್ಷಣ ಪೂರೈಸಿ : ಜಿಲ್ಲೆಯಲ್ಲಿನ ವಸತಿನಿಲಯಗಳಿಗೆ ಅಕ್ಕಿ ಪೂರೈಕೆ ಇಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ವಸತಿ ನಿಲಯಗಳಿಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಪೂರೈಕೆಗೆ ಇದುವರೆಗೂ ಹಂಚಿಕೆಯಾಗದಿದ್ದರೂ, ಸದ್ಯ ಜಿಲ್ಲೆಯಲ್ಲಿ ಲಭ್ಯವಿರುವ ಅಕ್ಕಿಯನ್ನು ವಸತಿ ನಿಲಯಗಳಿಗೆ ತಕ್ಷಣ ಪೂರೈಸಿ, ಕೇಂದ್ರ ಸರ್ಕಾರದಿಂದ ಅಕ್ಕಿ ಹಂಚಿಕೆಯಾದ ನಂತರ, ಅದರ ಪ್ರಮಾಣವನ್ನು ಸರಿಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಯಾವುದೇ ಕಾರಣಕ್ಕೂ ವಸತಿನಿಲಯಗಳಿಗೆ ಅಕ್ಕಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು   ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಸಂಸದ ಶಿವರಾಮಗೌಡ, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್ (ವಿಧಾನಪರಿಷತ್), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸೇರಿದಂತೆ ಜಿ.ಪಂ. ಸದಸ್ಯರುಗಳು, ತಾ.ಪಂ. ಅಧ್ಯಕ್ಷರುಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error