ಶೌಚಾಲಯ ಅಭಿಯಾನ : ಜಿ.ಪಂ. ಅಧ್ಯಕ್ಷರಿಂದ ಮನೆ-ಮನೆ ಭೇಟಿ

  ಕೊಪ್ಪಳ ಜಿಲ್ಲೆಯಲ್ಲಿ ೦೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಶನಿವಾರ ಹಮ್ಮಿಕೊಳ್ಳಲಾಗಿರುವ ಶೌಚಾಲಯ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಮನೆ, ಮನೆಗೆ ಭೇಟಿ ನೀಡಿ ಕುಟುಂಬಗಳಿಂದ ಅರ್ಜಿ ಪಡೆದುಕೊಂಡರು.
 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕುಟುಂಬ ಕಡ್ಡಾಯವಾಗಿ ಶೌಚಾಲಯ ಹೊಂದಬೇಕು. ಶೌಚಾಲಯ ಒಂದು ಕುಟುಂಬಕ್ಕೆ ಸ್ವಾಭಿಮಾನದ ಪ್ರತೀಕ ಎನ್ನುವ ಮನೋಭಾವವನ್ನು ಸಾರ್ವಜನಿಕರು ಹೊಂದಬೇಕಿದೆ. ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಿಸಬೇಕೆನ್ನುವ ಗುರಿಯನ್ನು ಹಾಕಿಕೊಳ್ಳಲಾಗಿದೆ.  ಈ ಗುರಿಯನ್ನು ಶತಾಯ-ಗತಾಯ  ೨೦೧೪ ರ ಮಾರ್ಚ್ ೩೧ ರ ಒಳಗಾಗಿ ಈ ಗುರಿಯನ್ನು ಸಾಧಿಸಲೇ ಬೇಕು ಎನ್ನುವ ದೃಢ ವಿಶ್ವಾಸವನ್ನು ಇಟ್ಟುಕೊಂಡಿದ್ದೇವೆ.  ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಡಿ. ೨೮ ಹಾಗೂ ೩೦ ರಂದು ಹಮ್ಮಿಕೊಂಡಿದ್ದು, ಗ್ರಾಮೀಣ ಮಟ್ಟದಲ್ಲಿನ ಎಲ್ಲ ಇಲಾಖೆಗಳ ಸ್ಥಳೀಯ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು, ಜನಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರ ಸಹಕಾರದೊಂದಿಗೆ ಮನೆ, ಮನೆಗೆ ಭೇಟಿ ನೀಡಿ, ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ, ಸ್ಥಳದಲ್ಲಿಯೇ ಅಂತಹವರಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅಂತಹ ಕುಟುಂಬಗಳಿಗೆ ಶೌಚಾಲಯ ಕಟ್ಟಿಸಲು ಸಹಾಯಧನ ಬಿಡುಗಡೆ ಮಾಡಲಾಗುವುದು.  ಇದಕ್ಕಾಗಿಯೇ ಸುಧಾರಿತ ಶೌಚಾಲಯ ಮಾದರಿಯನ್ನು ಸಿದ್ಧಪಡಿಸಲಾಗಿದೆ.  ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಶೌಚಾಲಯದ ಜೊತೆಗೆ ಸ್ನಾನಗೃಹವನ್ನು ಸಹ ನಿರ್ಮಿಸಿಕೊಡಲಾಗುವುದು.  ಈಗಾಗಲೆ ಸುಮಾರು ೧. ೫ ಲಕ್ಷ ಅರ್ಜಿ ನಮೂನೆಗಳನ್ನು ಮುದ್ರಿಸಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೆ ವಿತರಿಸಲಾಗಿದೆ.  ಡಿ. ೨೮ ಶನಿವಾರದಂದು ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮನೆಗಳಿಗೆ ಡಿ. ೩೦ ರಂದು ಭೇಟಿ ನೀಡಿ, ಅರ್ಜಿ ಪಡೆಯಲಾಗುವುದು.  ಒಟ್ಟಾರೆ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಇಡೀ ರಾಜ್ಯದಲ್ಲಿಯೇ ಕೊಪ್ಪಳವನ್ನು ಒಂದು ಮಾದರಿ ಜಿಲ್ಲೆಯನ್ನಾಗಿಸಿ, ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ವಿಶ್ವಾಸದ ನುಡಿಗಳನ್ನಾಡಿದರು.

  ಜಿಲ್ಲಾ ಪಂಚಾಯತಿ ಸದಸ್ಯ ರಮೇಶ್ ಹಿಟ್ನಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಬಯಲು ಮಲವಿಸರ್ಜನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಅನೇಕ ರೋಗ, ರುಜಿನಗಳಿಗೆ ಕಾರಣವಾಗಿದೆ.  ಪ್ರತಿ ಮನೆಯೂ ಸಹ ಶೌಚಾಲಯ ಹೊಂದಿರಬೇಕು.  ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಶ್ರಮಿಸಲಾಗುವುದು ಎಂದರು.
  ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಾ ಜೈನ್, ಉಪಾಧ್ಯಕ್ಷ ಮಂಜುನಾಥ ಅಡಿಗಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಮುದಗಲ್, ಬಿ.ಆರ್.ಸಿ. ಅಧಿಕಾರಿ ಎಂ.ಹೆಚ್. ಕುರಿ., ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಈಳಿಗೇರ, ನಿರ್ಮಲ ಭಾರತ ಅಭಿಯಾನದ  ಹೋಬಳಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭ, ಸಿ.ಆರ್.ಪಿ. ಉಮೇಶ್ ಸುರ್ವೆ ಸೇರಿದಂತೆ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸದಸ್ಯರುಗಳು ಮನೆ, ಮನೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಅರ್ಜಿ ಪಡೆದುಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply