ಬಿಜೆಪಿಯ ನಾಟಕದ ಮುಂದುವರಿದ ಭಾಗ….

ಅಳಿದುಳಿದ ಒಂದು ವರ್ಷವನ್ನಾದರೂ ರಾಜ್ಯ ಬಿಜೆಪಿ ಸರಕಾರ ಜನರಿಗಾಗಿ ಮೀಸಲಿಡುತ್ತದೆಯೋ ಎಂದು ಯೋಚಿಸಿದರೆ, ಅಂತಹ ಯಾವ ಆಸೆಯನ್ನೂ ಇರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಈವರೆಗೆ ಮುಖ್ಯಮಂತ್ರಿಯಾಗುವ ಆಸೆ ಯಡಿಯೂರಪ್ಪನವರದು ಮಾತ್ರವಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರ ಸಂಖ್ಯೆ ಒಮ್ಮಿಂದೊಮ್ಮೆಗೆ ಹೆಚ್ಚಿದೆ.ಒಂದೆಡೆ ಜನರು ಮಳೆಯಿಲ್ಲ ಎಂದು ಕೂಗೆಬ್ಬಿಸುತ್ತಿದ್ದರೆ, ಸರಕಾರದೊಳಗೆ, ಯಾರು ಮುಖ್ಯ ಮಂತ್ರಿಯಾಗಬೇಕು ಎನ್ನುವ ಕುರಿತಂತೆ ಭಾರೀ ಚರ್ಚೆಯೆದ್ದಿದೆ. ಇಷ್ಟಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯೇ ಆಗಿಲ್ಲ. ತಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ ಎನ್ನುವ ಹೇಳಿಕೆಯನ್ನೇ ಸದಾನಂದ ಗೌಡರು ಕೊಟ್ಟಿಲ್ಲ.ಆದರೂ ಇರುವ ಮುಖ್ಯ ಮಂತ್ರಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಮುಂದಿನ ಮುಖ್ಯಮಂತ್ರಿಯ ಕುರಿತಂತೆ ಚರ್ಚೆ ನಡೆಯುತ್ತಿದೆ. ಅಂದರೆ ರಾಜ್ಯದಲ್ಲಿ ಈಗ ಮುಖ್ಯಮಂತ್ರಿಯೇ ಇಲ್ಲ ಎನ್ನುವುದು ಇದರ ಅರ್ಥವಲ್ಲವೇ?
ಹೆಚ್ಚೆಂದರೆ ಒಂದು ವರ್ಷ ಈ ಸರಕಾರ ಮುಂದುವರಿಯಬಹುದು. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ, ಸಂಪುಟ ವಿಸ್ತರಣೆ, ಪ್ರಮಾಣವಚನ ಸ್ವೀಕಾರ ಇತ್ಯಾದಿ ಇತ್ಯಾದಿಗಳಿಗಾಗಿ ಆರು ತಿಂಗಳು ವ್ಯಯವಾಗುತ್ತದೆ. ಅಂದರೆ ಬರೀ ಆರು ತಿಂಗಳಲ್ಲಿ ಹೊಸ ಮುಖ್ಯಮಂತ್ರಿ ರಾಜ್ಯಕ್ಕಾಗಿ ಏನು ಮಾಡಬಹುದು? ಈ ನಾಲ್ಕೈದು ವರ್ಷಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗದವರು ಇನ್ನುಳಿದ ಒಂದು ವರ್ಷದಲ್ಲಿ ಏನನ್ನು ಸಾಧಿಸಿಯಾರು? ಆದರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆಯೆಂದರೆ ಅದರ ಉದ್ದೇಶ, ಜನರ ಸೇವೆಯಲ್ಲ. ಇರುವಷ್ಟು ದಿನ ನಾಡನ್ನು ದೋಚುವುದಷ್ಟೇ ಅವರ ಗುರಿ. ನಾಲ್ಕು ತಿಂಗಳಾದರೆ ನಾಲ್ಕು ತಿಂಗಳು. ನಾಲ್ಕು ದಿನವಾದರೆ ನಾಲ್ಕು ದಿನ. ಒಟ್ಟಲ್ಲಿ ಮುಖ್ಯಮಂತ್ರಿ ಸ್ಥಾನ ಬೇಕು!
ಈವರೆಗೆ ಮುಖ್ಯಮಂತ್ರಿಯ ಸ್ಥಾನದ ಮೇಲೆ ಯಡಿಯೂರಪ್ಪ ಮಾತ್ರ ತನ್ನ ಕಣ್ಣಿಟ್ಟಿದ್ದರು. ಆ ಸ್ಥಾನ ಅವರ ಅಸ್ತಿತ್ವದ ಪ್ರಶ್ನೆಯಾಗಿತ್ತು. ಈ ಬಾರಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗದೆ ಹೋದಲ್ಲಿ, ಶಾಶ್ವತವಾಗಿ ಬಿಜೆಪಿಯಿಂದ ಬದಿಗೆ ಸರಿದು ಹೋಗುವ ಭಯ ಅವರಲ್ಲಿದೆ.ಅದಕ್ಕಾಗಿಯೇ ಅವರು ಒಂದೇ ಮುಖ್ಯಮಂತ್ರಿಯಾಗಬೇಕು, ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷನಾಗಬೇಕು ಎನ್ನುವ ಹಟದಲ್ಲಿದ್ದಾರೆ.ಇದೀಗ ಜುಲೈಯಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಿಯೇ ಆಗುತ್ತದೆ ಎನ್ನುವುದು ಉಳಿದವರಿಗೆ ಮನವರಿಕೆಯಾದಾಕ್ಷಣ ಎಲ್ಲರೂ ಸ್ಪರ್ಧೆಗೆ ಇಳಿದಿದ್ದಾರೆ.
ಈ ಮೊದಲು ಜಗದೀಶ್ ಶೆಟ್ಟರ್‌ರ ಹೆಸರು ಕೇಳಿಸಿತ್ತು. ಶೆಟ್ಟರ್‌ರ ಹೆಸರು ಯಡಿಯೂರಪ್ಪನವರು ಬೀಳಿಸಿದ ದಾಳ. ತನ್ನನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲವೆಂದಾದರೆ ಶೆಟ್ಟರ್‌ರನ್ನು ಮಾಡಿ ಎಂದು ಅವರು ವರಿಷ್ಠರನ್ನು ಒತ್ತಾಯಪಡಿಸಿದ್ದರು. ಯಾವಾಗ ಶೆಟ್ಟರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ನಿಚ್ಚಳವಾಗತೊಡಗಿತೋ, ಅಲ್ಲಿಂದ ಈಶ್ವರಪ್ಪ ಕೂಡ ಸ್ಪರ್ಧೆಗಿಳಿದಿದ್ದಾರೆ. ‘‘ಶೆಟ್ಟರ್ ಮುಖ್ಯಮಂತ್ರಿಯಾಗುವುದಾದರೆ ನಾನು ಯಾಕಾಗಬಾರದು?’’ ಎಂಬ ಪ್ರಶ್ನೆಯನ್ನು ಅವರು ವರಿಷ್ಠರ ಮುಂದಿಟ್ಟಿದ್ದಾರೆ.
ತನ್ನನ್ನು ಮುಖ್ಯಮಂತ್ರಿ ಮಾಡುವುದಾದರೆ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಮಾಡುವುದಕ್ಕೆ ತನ್ನ ಅಡ್ಡಿಯಿಲ್ಲ ಎಂಬಂತಹ ಸೂಚನೆಯನ್ನೂ ನೀಡಿದ್ದಾರೆ.ಲಿಂಗಾಯತ ನಾಯಕರು ಮುಖ್ಯಮಂತ್ರಿಯಾದರು. ಒಕ್ಕಲಿಗರನ್ನೂ ಮುಖ್ಯಮಂತ್ರಿಯಾಗಿ ಮಾಡಿಯಾಯಿತು.ಈಗ ಹಿಂದುಳಿದ ವರ್ಗಕ್ಕೆ ಸೇರಿದ ಕುರುಬರನ್ನು ಮುಖ್ಯಮಂತ್ರಿ ಮಾಡಿದರೆ ಜನರಿಗೆ ಪಕ್ಷದ ಮೇಲೆ ನಂಬಿಕೆ ಬರುತ್ತದೆ ಎನ್ನುವುದು ಈಶ್ವರಪ್ಪನವರ ತರ್ಕವಿರಬಹುದು.ಇತ್ತ ರಾಮಚಂದ್ರ ಗೌಡರೂ ತನ್ನನ್ನು ತಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಕೊನೆಯ ದಿನಗಳಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದರೆ ಒಕ್ಕಲಿಗರಿಗೆ ಸಿಟ್ಟು ಬರಬಹುದು. ಒಂದು ವೇಳೆ ಅವರನ್ನು ಬದಲಿಸುವುದಾದರೆ ಇನ್ನೊಬ್ಬ ಗೌಡನಿಗೇ ಅಧಿಕಾರವನ್ನು ಕೊಡಿ ಅನ್ನುವುದು ಅವರ ತರ್ಕ. ಇದೇ ಸಂದರ್ಭದಲ್ಲಿ ಇನ್ನೊಂದು ದೊಡ್ಡ ಗುಂಪು ಹೊಸ ಸಮಸ್ಯೆಯನ್ನು ತಂದೊಡ್ಡಿದೆ.
ಜಾರಕಿಹೊಳಿ ನಾಯಕತ್ವದ ಈ ಗುಂಪು ‘ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯನ್ನು ಬದಲಿಸಬಾರದು’ ಎಂಬ ಒತ್ತಡವನ್ನು ವರಿಷ್ಠರಿಗೆ ಹಾಕುತ್ತಿದೆ. ಒಂದು ವೇಳೆ ಬದಲಾವಣೆ ಮಾಡಿದರೆ 25 ಶಾಸಕರೊಂದಿಗೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆಯನ್ನೂ ಒಡ್ಡಿದೆ. ಈ ಎಲ್ಲ ಕಾರಣಗಳಿಂದ ಬೇಸತ್ತ ವರಿಷ್ಠರು ಕರ್ನಾಟಕದ ಕಡೆಗೆ ತಲೆ ಹಾಕುವುದಕ್ಕೂ ಹೆದರುತ್ತಿದ್ದಾರೆ. ಇಂದು ರಾಜ್ಯಕ್ಕೆ ಆಗಮಿಸ ಬೇಕಾಗಿದ್ದ ಪ್ರಧಾನ್ ಕೊನೆ ಗಳಿಗೆಯಲ್ಲಿ ತನ್ನ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರಕಾರದ ಭಿನ್ನಮತವನ್ನು ತಣಿಸುವ ಒಂದೇ ಒಂದು ಉಪಾಯವೆಂದರೆ ಸರಕಾರವನ್ನು ತಕ್ಷಣವೇ ವಿಸರ್ಜಿಸುವುದು.
ತೇಪೆ ಹಚ್ಚುವುದರಿಂದ ಬಿಜೆಪಿ ಸರಕಾರದ ಯಾವ ಸಮಸ್ಯೆಯೂ ಇತ್ಯರ್ಥವಾಗುವುದಿಲ್ಲ. ಸರಕಾರ ಮುಂದುವರಿದಷ್ಟು ಬಿಕ್ಕಟ್ಟು ಜಾಸ್ತಿಯಾಗುತ್ತಾ ಹೋಗುತ್ತದೆ. ಅದರ ಬದಲು ಯಾರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವುದು ಎನ್ನುವುದರ ಕಡೆಗೆ ಬಿಜೆಪಿ ವರಿಷ್ಠರು ತಲೆ ಕೊಟ್ಟರೆ ಪಕ್ಷಕ್ಕೂ ನಾಡಿಗೂ ಅದರಿಂದ ಒಳಿತಿದೆ. ಮುಖ್ಯಮಂತ್ರಿ ಸ್ಥಾನ ಬದಲಿಸಿದರೂ, ಬದಲಿಸದಿದ್ದರೂ ಅದರ ಪರಿಣಾಮ ಒಂದೇ ಎಂದ ಮೇಲೆ ಸರಕಾರ ವಿಸರ್ಜಿಸಿ ಮಧ್ಯಾಂತರ ಚುನಾವಣೆಗೆ ಅಣಿಯಾಗುವುದೇ ಜಾಣತನ.
Please follow and like us:
error