You are here
Home > Koppal News > ರಾಜ್ಯದಲ್ಲಿ ೧೦೦ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ- ಪಿ.ಟಿ. ಪರಮೇಶ್ವರ ನಾಯ್ಕ

ರಾಜ್ಯದಲ್ಲಿ ೧೦೦ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ- ಪಿ.ಟಿ. ಪರಮೇಶ್ವರ ನಾಯ್ಕ

ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಯುವಕರು ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗುವಂತೆ ರಾಜ್ಯದಲ್ಲಿ ೨೫೦ ಕೋಟಿ ರೂ. ವೆಚ್ಚದಲ್ಲಿ ೧೦೦ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.

  ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಇವರ ಸಹಯೋಗದಲ್ಲಿ ಕೊಪ್ಪಳ ತಾಲೂಕು ಟಣಕನಲ್ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕಾಮಗಾರಿ ಅಡಿಗಲ್ಲು ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಗ್ರಾಮೀಣ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.  ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳಿದ್ದು, ಉದ್ಯೋಗಾವಕಾಶಗಳೂ ಸಹ ಹೆಚ್ಚಿವೆ.  ಇದರಿಂದಾಗಿ ಐಟಿಐ ಕೋರ್ಸ್ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕಾಗಿಯೇ ಜಿಲ್ಲೆಯಲ್ಲಿ ಹೊಸದಾಗಿ ಐಟಿಐ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ವರ್ಷ ರಾಜ್ಯದಲ್ಲಿ ೧೦೦ ಐಟಿಐ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ.  ಐಟಿಐ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸೂಕ್ತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ, ವೃತ್ತಿಪರತೆ ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿ ೨೫೦ ಕೋಟಿ ರೂ. ವೆಚ್ಚದಲ್ಲಿ ೧೦೦ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.  ಎಲ್ಲಾ ಸರ್ಕಾರಿ ಐಟಿಐ ಕಾಲೇಜುಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದ್ದು, ೨೦೧೩-೧೪ ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ ಇದಕಾಗಿ ೧೦೩ ಕೋಟಿ ರೂ.ಗಳನ್ನು ಒದಗಿಸಲಾಗಿತ್ತು.  ೨೦೧೪-೧೫ ನೇ ಸಾಲಿನಲ್ಲಿ ಇದಕ್ಕಾಗಿ ಹೆಚ್ಚುವರಿಯಾಗಿ ೬೫ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ಕೊಪ್ಪಳದ ಟಣಕನಲ್ ಬಳಿ ಸರ್ಕಾರಿ ಐಟಿಐ ಕಾಲೇಜಿನ ನೂತನ ಕಟ್ಟಡವನ್ನು ೨. ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕರ್ನಾಟಕ ಗೃಹ ಮಂಡಳಿಗೆ ಕಾಮಗಾರಿಯ ಹೊಣೆ ನೀಡಲಾಗಿದೆ.  ಕಟ್ಟಡವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಮುನಿರಾಬಾದ್‌ನಲ್ಲಿ ಹೊಸದಾಗಿ ಸರ್ಕಾರಿ ಐಟಿಐ ಕಾಲೇಜು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು.  ವೃತ್ತಿ ಪರ ಐಟಿಐ ಕೋರ್ಸ್‌ನಲ್ಲಿ ಏಕಕಾಲಕ್ಕೆ ಬಹುವಿಷಯ ತರಬೇತಿ ಕೋರ್ಸ್ ಪಡೆಯುವಂತೆ ಮಲ್ಟಿ ಟ್ರೇಡ್ ತರಬೇತಿ ಪಡೆಯುವ ವ್ಯವಸ್ಥೆಯನ್ನು ಈ ವರ್ಷ ಜಾರಿಗೊಳಿಸಲಾಗಿದ್ದು, ಕುಕಿಂಗ್ ಕೋರ್ಸ್ ಜೊತೆಗೆ ಹಾಸ್ಪಿಟಾಲಿಟಿ ಕೋರ್ಸ್ ಅದೇ ರೀತಿ ಪ್ಲಂಬಿಂಗ್ ಕೋರ್ಸ್ ಜೊತೆಗೆ ಎಲೆಕ್ಟ್ರಿಷಿಯನ್ ತರಬೇತಿ ಕೋರ್ಸ್ ತರಬೇತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ.  ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಿಗೂ ಈ ಪದ್ಧತಿಯನ್ನು ವಿಸ್ತರಣೆ ಮಾಡಲಾಗುವುದು  ಎಂದು ಕಾರ್ಮಿಕ ಸಚಿವರು ಹೇಳಿದರು.
ಜಿಲ್ಲೆಗೊಂದು ಕಾರ್ಮಿಕ ಕಲ್ಯಾಣ ಭವನ : ಜಿಲ್ಲೆಯಲ್ಲಿ ಕಾರ್ಮಿಕರ ಸಮಾಜಮುಖಿ ಚಟುವಟಿಕೆಗಳಿಗಾಗಿ ಪ್ರತಿ ಜಿಲ್ಲೆಗೊಂದು ಕಾರ್ಮಿಕ ಕಲ್ಯಾಣ ಭವನವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.  ಪ್ರತಿ ಕಾರ್ಮಿಕ ಕಲ್ಯಾಣ ಭವನಕ್ಕೆ ೫ ರಿಂದ ೬ ಕೋಟಿ ರೂ. ಅನುದಾನ ಒದಗಿಸಲಾಗುವುದು.  ಈಗಾಗಲೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ ಗುರುತಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಹಿಳಾ ಕಾರ್ಮಿಕರ ಹಿತ : ರಾಜ್ಯದಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ಸುಮಾರು ೩ ಲಕ್ಷ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಈ ಪೈಕಿ ೧ ಲಕ್ಷ ಮಹಿಳಾ ಕಾರ್ಮಿಕರ ವೈದ್ಯಕೀಯ ತಪಾಸಣೆ ಮಾಡಿಸಲಾಗಿದ್ದು, ಇದರಲ್ಲಿ ಶೇ. ೬೨ ರಷ್ಟು ಮಹಿಳಾ ಕಾರ್ಮಿಕರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.  ಮಹಿಳಾ ಕಾರ್ಮಿಕರ ಹಿತ ಕಾಯುವ ಸಲುವಾಗಿ ಇವರಿಗೆ ಕಬ್ಬಿಣಾಂಶದ ಮಾತ್ರೆ ವಿತರಿಸಿ, ಆರೋಗ್ಯವಂತರನ್ನಾಗಿಸಲು ಉದ್ದೇಶಿಸಲಾಗಿದ್ದು, ಈ ವರ್ಷ ೧೫ ಲಕ್ಷ ಕಬ್ಬಿಣಾಂಶ ಮಾತ್ರೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಮಹಾ ನಗರ ಪಾಲಿಕೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ವಾಹನ ಸೌಲಭ್ಯ ಒದಗಿಸಲು ಸಹ ಯೋಜಿಸಲಾಗಿದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದಲ್ಲಿ ಹೆಚ್ಚು ಕಾರ್ಖಾನೆಗಳು ಇರುವುದರಿಂದ ಐಟಿಐ ಕೋರ್ಸ್‌ಗೆ ಬೇಡಿಕೆ ಇದೆ.  ರೈತರ ಭೂಮಿ ಪಡೆದು ಸ್ಥಳಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿ ಕಾರ್ಯಾರಂಭ ಮಾಡುವ ಕಾರ್ಖಾನೆಗಳು, ನಂತರದ ದಿನಗಳಲ್ಲಿ ಸ್ಥಳಿಕರಿಗೆ ಉದ್ಯೋಗ ನೀಡುವಲ್ಲಿ ತಾತ್ಸಾರ ಮನೋಭಾವ ತೋರುತ್ತಿವೆ.  ಈ ಕುರಿತಂತೆ ಕಾರ್ಮಿಕ ಇಲಾಖೆಯವರು, ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.  ಕೊಪ್ಪಳದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಸದಸ್ಯೆ ವನಿತಾ ಗಡಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಮುದಿಯಪ್ಪ ವಾಲ್ಮೀಕಿ, ತಾ.ಪಂ. ಸದಸ್ಯ ರಮೇಶ್ ಚೌಡ್ಕಿ, ಉದ್ಯೋಗ ಮತ್ತು ತರಬೇತಿ ಇಲಾಖೆ ಅಪರ ನಿರ್ದೇಶಕ ಈಶ್ವರನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ನರೇಗಲ್ ಗ್ರಾಮದ ಆಸರೆ ಫಲಾನುಭವಿಗಳಿಗೆ, ಮನೆಗಳ ಹಕ್ಕುಪತ್ರಗಳನ್ನು ಇದೇ ಸಂದರ್ಭದಲ್ಲಿ ಸಚಿವರು ವಿತರಿಸಿದರು ಅಲ್ಲದೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

Leave a Reply

Top