ಅಭಿವೃದ್ಧಿ ಯೋಜನೆಗಳು : ಸಿಎಂ ಸ್ವಾಗತಕ್ಕೆ ಕೊಪ್ಪಳ ಮತ್ತು ಕುಷ್ಟಗಿ ಸಜ್ಜು

ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಅಲ್ಲದೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. ೨೪ ರಂದು ಕೊಪ್ಪಳ ಮತ್ತು ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಹಲವು ಸಚಿವರು ಸಹ ಕೊಪ್ಪಳ ಜಿಲ್ಲೆಗೆ  ಆಗಮಿಸಲಿದ್ದಾರೆ.  ಇವರೆಲ್ಲರ ಸ್ವಾಗತಕ್ಕೆ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

  ಭತ್ತದ ನಾಡು ಎನಿಸಿರುವ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಪೂರಕವೆನಿಸಿರುವ ಹಲವಾರು ಮಹತ್ವಪೂರ್ಣ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವುದರ ಜೊತೆಗೆ, ಜಿಲ್ಲೆಯ ಪ್ರಗತಿಯ ಬಗ್ಗೆ ಖುದ್ದಾಗಿ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಕೊಪ್ಪಳ ನಗರ ಮತ್ತು ಕುಷ್ಟಗಿ ಪಟ್ಟಣ ಸಜ್ಜಾಗಿದ್ದು, ಕೊಪ್ಪಳ ಮತ್ತು ಕುಷ್ಟಗಿಯ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.  ಅಲ್ಲದೆ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರುವ ಹಲವಾರು ಕಟೌಟ್‌ಗಳು  ಎಲ್ಲೆಡೆ ರಾರಾಜಿಸುತ್ತಿವೆ.  ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಾಣ ಕಾರ್ಯಕ್ಕೆ ವೇಗ ದೊರೆತಿದ್ದು, ನಗರದಲ್ಲಿ ವಿಶೇಷ ಸ್ವಾಗತ ಕಮಾನುಗಳನ್ನು ಜೋಡಿಸಲಾಗಿದೆ.  ಕೊಪ್ಪಳ-ಕುಷ್ಟಗಿ   ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ.
  ಮುಖ್ಯಮಂತ್ರಿಗಳು ಕೊಪ್ಪಳ ನಗರಕ್ಕೆ ಆಗಮಿಸುವುದಕ್ಕೂ ಮುನ್ನ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಲಿದ್ದು, ಅಧಿಕಾರಿಗಳು ಇದಕ್ಕಾಗಿ ಕಟ್ಟಡ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಿದ್ಧತೆ ಕೈಗೊಂಡಿದ್ದಾರೆ.  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಸಭಾಂಗಣದ ವ್ಯವಸ್ಥೆ ಹಾಗೂ ಭದ್ರತೆ ವ್ಯವಸ್ಥೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.  ಅಲ್ಲದೆ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಹಲವು ಪ್ರಮುಖರು ಸಿಎಂ ಅವರ ಕಾರ್ಯಕ್ರಮ ಕುರಿತಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.
  ಕಾರ್ಯಕ್ರಮದ ಸಿದ್ಧತೆ ಕುರಿತಂತೆ ವಿವರಗಳನ್ನು ನೀಡಿದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು, ಕುಷ್ಟಗಿಯ ಕೊಪ್ಪಳ ರಸ್ತೆ ಪಕ್ಕದಲ್ಲಿ ಸಮಾರಂಭಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.  ಪೆಂಡಾಲ್ ನಲ್ಲಿ ಕಾರ್ಯಕ್ರಮದ ವೇದಿಕೆ ಅಲಂಕಾರಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ವೇದಿಕೆಯ ಎರಡೂ ಬದಿಗಳಲ್ಲಿ ಬೃಹತ್ ಎಲ್‌ಸಿಡಿ ಪರದೆಯನ್ನು ಅಳವಡಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಕುಷ್ಟಗಿಯಲ್ಲಿ ಕನಕ ಭವನ ಹಾಗೂ ವಾಲ್ಮೀಕಿ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.  ತಾವರಗೇರಾ ಗ್ರಾಮದ ಬಾಲಕರ ಸ.ಪ.ಪೂ. ಕಾಲೇಜು ಕಟ್ಟಡದ ಉದ್ಘಾಟನೆ, ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ಸರ್ಕಾರಿ ನೌಕರರ ವಸತಿ ಗೃಹಗಳ ಉದ್ಘಾಟನೆ, ಕುಷ್ಟಗಿ-ಪಟ್ಟದಕಲ್ ರಸ್ತೆ ಮರು ಡಾಂಬೀಕರಣ ಕಾಮಗಾರಿಗೆ ಶಿಲಾನ್ಯಾಸ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಸತಿನಿಲಯ ಕಟ್ಟಡದ ಶಂಕುಸ್ಥಾಪನೆ, ಕೊರಕೇರಾ ಗ್ರಾಮದಲ್ಲಿ ವಾಲ್ಮೀಕಿ ಭವನ ಶಂಕುಸ್ಥಾಪನೆ, ಕುಷ್ಟಗಿಯಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ, ತಾವರಗೇರಾ ಗ್ರಾಮದ ಬಸ್‌ನಿಲ್ದಾಣ ಕಟ್ಟಡ ಉದ್ಘಾಟನೆ, ಕುಷ್ಟಗಿ ತಾಲೂಕಿನ ಮೂಲಭೂತ ಸೌಕರ್ಯ ಅಭಿವೃದ್ಧಿ ವಲಯದ ೧೨. ೪೦ ಕೋಟಿ ರೂ. ವೆಚ್ಚದಲ್ಲಿ ೩೨ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಬಾದಿಮನಾಳ ಸಮಗ್ರ ಕೆರೆ ಅಭಿವೃದ್ಧಿ, ನಿಡಶೇಸಿ ಕೆರೆ ಹಿನ್ನೀರಿನಲ್ಲಿ ಜಾಲಿಹಳ್ಳದಿಂದ ಶಾಖಾಪುರ ರಸ್ತೆಗೆ ೯೫ ಲಕ್ಷ ರೂ. ವೆಚ್ಚದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು ಸಿದ್ಧತೆ ಕುರಿತು ತೃಪ್ತಿ ವ್ಯಕ್ತಪಡಿಸಿದರು.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ೧- ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ೯-ಡಿವೈಎಸ್‌ಪಿ, ೩೮- ಸಿಪಿಐ, ೯೩-ಪಿಎಸ್‌ಐ, ೧೨೨-ಎಎಸ್‌ಐ, ೩೧೬- ಹೆಡ್‌ಕಾನ್ಸ್‌ಟೆಬಲ್ಸ್, ೭೮೪- ಪೊಲೀಸ್ ಪೇದೆಗಳು, ೩೮- ಮಹಿಳಾ ಪೊಲೀಸ್ ಪೇದೆಗಳು, ೧೨- ಜಿಲ್ಲಾ ಮೀಸಲು ಪಡೆ, ೦೩- ರಾಜ್ಯ ಮೀಸಲು ಪಡೆ ಹಾಗೂ ೦೫- ಕ್ಷಿಪ್ರ ಪ್ರಹಾರ ದಳ ತಂಡವನ್ನು ರಚಿಸಲಾಗಿದೆ.  ಈಗಾಗಲೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನೆರೆಹೊರೆಯ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿಲ್ಲೆಗೆ ಆಗಮಿಸಿದ್ದಾರೆ ಎಂದು ತಿಳಿಸಿದರು.

Leave a Reply