fbpx

ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯ ಮನಸ್ಥಿತಿ: ಟೀಸ್ತಾ ಸೆಟಲ್‌ವಾಡ್ ಆತಂಕ

ಬೆಂಗಳೂರು, ಡಿ.29: ಸಂವಿಧಾನದ ತಳಹದಿಯ ಮೇಲೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಾಗಿದ್ದ ದೇಶದ ಸಾಂವಿಧಾನಿಕ ಸಂಸ್ಥೆಗಳು ಹಿಂದುತ್ವವಾದಿ ಮನಸ್ಥಿತಿಯ ಬಲಪಂಥೀಯತೆಯ ರೂಪವನ್ನು ಪಡೆದು ಕೊಳ್ಳುತ್ತಿರುವುದು ಅತ್ಯಂತ ಅಪಾಯದ ಮುನ್ಸೂಚನೆ ಎಂದು ಪ್ರಸಿದ್ಧ ಮಾನವ ಹಕ್ಕು ಕಾರ್ಯಕರ್ತೆ ಟೀಸ್ತಾ ಸೆಟಲ್‌ವಾಡ್ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಫಿರೋಝ್ ಎಸ್ಟೇಟ್ ನಲ್ಲಿ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಲೇಖಕ ಸುರೇಶ್ ಭಟ್ ಬಾಕ್ರಬೈಲ್ ಅವರ ‘ಮಂಕುಬೂ(ಮೋ)ದಿ’ ಹಾಗೂ ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯನವರ ‘ಆರೆಸ್ಸೆಸ್ ಅಂತರಂಗ’ (3ನೆ ಆವೃತ್ತಿ) ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ, ಪೊಲೀಸ್, ಸಾರ್ವಜನಿಕ ಆಡಳಿತ, ಕಾನೂನು ಇತ್ಯಾದಿ ಸಾಂವಿಧಾನಿಕ ಸಂಸ್ಥೆಗಳಲ್ಲಿ ಜಾತ್ಯ ತೀತತೆ ಮಾಯವಾಗುತ್ತಿದ್ದು, ಬಲಪಂಥೀಯ ವಾದ ಧಾರ್ಮಿಕ ಮನಸ್ಥಿತಿ ಹೆಚ್ಚಾಗುತ್ತಿದೆ. ಇದು ಸಂವಿಧಾನದ ತತ್ವಗಳು ಹಾಗೂ ಸಮಾನತೆ ಯನ್ನು ನಾಶ ಮಾಡುವ ಕೋಮುವಾದಿಗಳ ಸಂಚಾಗಿದೆ ಎಂದು ಅವರು ಆರೋಪಿಸಿದರು.
 ದುರಾದೃಷ್ಟವೆಂದರೆ ಮೋದಿ ಘಟನೆಯ ನಂತರ ಇತರ ರಾಜಕೀಯ ಪಕ್ಷಗಳೂ ಸಹ ಬಲಪಂಥೀಯ ಭಾಷೆಯಲ್ಲೇ ಮಾತನಾಡುತ್ತಿವೆ. ಮುಝಫ್ಫರ್ ನಗರ ಘಟನೆಯ ನಂತರ ಮುಲಾಯಂ ಸಿಂಗ್ ಕೂಡ ಇಂತಹದ್ದೇ ಮಾತನಾಡುತ್ತಿದ್ದು, ಆತಂಕ ಮೂಡಿಸುತ್ತಿದೆ. ಅಲ್ಲೀಗ ಒಂದು ಕಾಲದಲ್ಲಿ ಹಿಂದೂಗಳು, ಮುಸ್ಲಿಮರು ಒಟ್ಟಾಗಿ ವಸಾಹತು ಶಕ್ತಿಗಳ ವಿರುದ್ಧ ಹೋರಾಡಿ ಗೆಲುವು ಪಡೆದಿದ್ದ ಇತಿಹಾಸ ಮರೆತು ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದು ಅಂಬಾನಿ ಒಡೆತನದ ಮಾಧ್ಯಮ ಸಂಸ್ಥೆಗಳು ಮೋದಿಯನ್ನು ಗುಣಗಾನ ಮಾಡುತ್ತಿದ್ದು ಮುಂದೆ ಒಂದು ದಿನ ಮೋದಿ ಅವರಿಗೆ ಪ್ರತಿಫಲ ನೀಡಲೇಬೇಕು. ಆಗ ಜನರ ಭೂಮಿ ಹಕ್ಕು ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ್ಯ ಗಾಳಿಗೆ ತೂರಲ್ಪಡುತ್ತವೆ. ಆದ್ದರಿಂದ ಪ್ರಗತಿಪರ ಸಂಘಟನೆಗಳು ಇಂದು ಜಾತೀಯತೆ, ಆರ್ಥಿಕ ನೀತಿಗಳು, ಕೋಮುವಾದಗಳನ್ನು ಒಂದರ ಜೊತೆ ಒಂದನ್ನು ಸಮೀಕರಿಸಿ ನೋಡಬೇಕಾಗಿದೆ ಹೊರತು ಬಿಡಿಬಿಡಿಯಾಗಲ್ಲ ಎಂದು ಅವರು ತಿಳಿಸಿದರು.
ಇಂದು ಸಾಮಾಜಿಕ ನ್ಯಾಯದ ವಿಚಾರವನ್ನು ಹಿನ್ನೆಲೆಗೆ ದೂಡಿ ಭ್ರಷ್ಟಾಚಾರದ ವಿಚಾರವೆ ಮುಖ್ಯವೆಂಬಂತೆ ಮಾತನಾಡುತ್ತಿರುವುದೂ ಇಂತಹ ಗೊಂದಲಗಳ ಫಲವಾಗಿದೆ. ಇದು ರಾಜಕೀಯ ವ್ಯವ್ಯಸ್ಥೆಗೆ ಪಾರ್ಶ್ವವಾಯು ಬಡಿಯುವಂತೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಮೋದಿಯ ಹುಸಿ ಅಭಿವೃದ್ಧಿಯ ವಿರುದ್ಧ ಜನರನ್ನು ಎಚ್ಚರಿಸಲು ಸುರೇಶ್‌ಭಟ್ ರಚಿಸಿರುವ ಕೃತಿ ಅಗತ್ಯವಾದ ಕೃತಿಯಾಗಿದೆ. ರಿಸರ್ವ್ ಬ್ಯಾಂಕ್, ವಿಶ್ವ ಸಂಸ್ಥೆ ಹಾಗೂ ಸ್ವತಃ ಗುಜರಾತ್ ಸರಕಾರದ ವಾಸ್ತವ ಅಂಕಿ ಅಂಶಗಳ ಮೂಲಕ ಗುಜರಾತ್ ಸರಕಾರ ಸಾರ್ವಜನಿಕ ಶಿಕ್ಷಣ, ಆರೋಗ್ಯ, ರಕ್ಷಣೆ, ಮಾನವ ಹಕ್ಕು ಮುಂತಾದ ಹಲವಾರು ವಿಚಾರಗಳಲ್ಲಿ ದೇಶದ ರಾಜ್ಯಗಳ ಪೈಕಿ 15ಕ್ಕಿಂತಲೂ ಹಿಂದಿದೆ ಎಂಬ ಸತ್ಯವಾದ ಮಾಹಿತಿ ನೀಡುತ್ತದೆ. ಇದು ಗುಜರಾತ್ ಅಭಿವೃದ್ಧಿ ಹಾಗೂ ಮೋದಿಯನ್ನು ಬೆತ್ತಲಾಗಿಸುತ್ತದೆ ಎಂದರು.
ಶ್ರೀರಾಮನನ್ನು ಆದರ್ಶವಾಗಿಸಿಕೊಂಡಿರುವ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಗದ್ದುಗೆಯ ಮೇಲೆ ಕೂರದೆ ಜನಪರವಾದ ಆಡಳಿತ ಮಾಡಿದ ಭರತ ನೆನಪಾಗುವುದಿಲ್ಲ. ಶ್ರೀರಾಮನಿಗೆ ತಾನು ತಿಂದ ಎಂಜಲು ಹಣ್ಣನ್ನು ನೀಡಿದ ಶಬರಿ ಸಂಸ್ಕೃತಿಯೂ ನೆನಪಾಗುವುದಿಲ್ಲ. ಭಾರತ ಗೆಲ್ಲಿಸಿ ಎನ್ನುವ ಸಾಂವಿಧಾನಿಕ ವಿರೋಧಿಯಾದ ಯುದ್ಧದ ಪರಿಭಾಷೆ ಮಾತ್ರ ಅವರಿಗೆ ಗೊತ್ತು. ಬಿಜೆಪಿಯದ್ದು ಹೊಡೆದು ತಿನ್ನುವ ತೋಳದ ಸಂಸ್ಕೃತಿಯಾಗಿದೆ ಎಂದ ಅವರು, ಇಂದು ಮೋದಿಗಿಂತ ಅವನು ಹೇಳುತ್ತಿರುವ ವಿಚಾರಗಳ ಸತ್ಯಾಸತ್ಯತೆಯ ಬಗೆಗೆ ಜನರ ಗಮನ ಸೆಳೆಯಬೇಕಾಗಿದೆ ಎಂದರು.
‘ಆರೆಸ್ಸೆಸ್ ಅಂತರಂಗ’ ಮೂರನೆಯ ಆವೃತ್ತಿಯ ಕುರಿತು ಮಾತನಾಡಿದ ಪತ್ರಕರ್ತ ಇಂದೂಧರ ಹೊನ್ನಾಪುರ, ಕೃತಿಯು ಆರೆಸ್ಸೆಸ್‌ನ ಆಷಾಢಭೂತಿ ನಡವಳಿಕೆಗಳನ್ನು ಬಯಲು ಮಾಡುವ ಸಮರ್ಥ ಕೃತಿಯಾಗಿದೆ. ಬುದ್ಧನ ಜನ್ಮದಿನದಂದು ಪೋಖ್ರಾನ್‌ನಲ್ಲಿ ಬಾಂಬ್ ಹಾಕಿ ಅದನ್ನು ಬುದ್ಧನ ನಗೆ ಎಂದ ನಯವಂಚಕ ಶಕ್ತಿಗಳು ಜನರನ್ನು ಗೊಂದಲಗೊಳಿಸುತ್ತ ಅಧಿಕಾರದ ಕನಸು ಕಾಣುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ಸಿಗರು ಈ ವಿಚಾರಗಳನ್ನು ಮಾತನಾಡಬೇಕಿತ್ತು ಆದರೆ ಅವರು ವಿಚಾರವಾದಿಗಳ ಫಲವನ್ನು ಅನುಭವಿಸುತ್ತಾ ತಮ್ಮ ಅಯೋಗ್ಯ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ ಎಂದು ಅವರು ವಾಗ್ಧಾಳಿ ಮಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಎ.ಕೆ.ಸುಬ್ಬಯ್ಯ, ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಚಿಂತಕ ಕೆ.ಫಣಿರಾಜ್, ಲೇಖಕ ಸುರೇಶ್ ಭಟ್ ಬಾಕ್ರಬೈಲ್, ಗಾಯಕ ಶಿವಮೊಗ್ಗ ಸುಬ್ಬಣ್ಣ, ಪ್ರೊ.ನಗರಿ ಬಾಬಯ್ಯ, ಪತ್ರಕರ್ತ ಪಾರ್ವತೀಶ್, ಮುಸ್ಲಿಮ್ ಮುತ್ತೆಹಿದಾ ಸಂಘಟನೆಯ ಎಸ್. ಎಂ.ಇಕ್ಬಾಲ್ ಸೇರಿ ಇನ್ನಿತರರು ಹಾಜರಿದ್ದರು.
Please follow and like us:
error

Leave a Reply

error: Content is protected !!