You are here
Home > Koppal News > ಹಿಂಸೆಯ ದಳ್ಳುರಿ ಸೃಷ್ಟಿಸಿದ ‘ದೇವಮಾನವ’ ರಾಮ್‌ಪಾಲ್

ಹಿಂಸೆಯ ದಳ್ಳುರಿ ಸೃಷ್ಟಿಸಿದ ‘ದೇವಮಾನವ’ ರಾಮ್‌ಪಾಲ್

 – ರಾ.ನಾ.
ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾದ ವಿವಾದಿತ ದೇವಮಾನವ ರಾಮ್‌ಪಾಲ್, ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ಆತನ ಅನುಯಾಯಿಗಳು ಹರ್ಯಾಣದ ಹಿಸ್ಸಾರ್‌ನಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಹಿಂಸಾಚಾರ ಕ್ಕಿಳಿದಿರುವುದು ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿತ್ತು. ಪೊಲೀಸರು ಮತ್ತು ರಾಮ್‌ಪಾಲ್‌ನ ಅನುಯಾಯಿಗಳ ನಡುವೆ ನಡೆದ ಸಂಘರ್ಷದಲ್ಲಿ ಮಹಿಳೆಯರು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದರು.
ಎರಡು ದಿನಗಳ ಹಿಂಸಾಚಾರದ ಬಳಿಕ ಕೊನೆಗೂ ರಾಮ್‌ಪಾಲ್‌ನನ್ನು ಆತನ ಆಶ್ರಮದಿಂದ ಹೊರಗೆಳೆದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಆಶ್ರಮದ ಆವರಣದಲ್ಲಿ ಭಾರೀ ರಕ್ತಪಾತವಾಗುವ ಸಾಧ್ಯತೆಯೊಂದು ತಪ್ಪಿದಂತಾಗಿದೆ.
 ಮೊನ್ನೆ ಮೊನ್ನೆಯವರೆಗೂ ಪಂಜಾಬ್, ಹರ್ಯಾಣವನ್ನು ಹೊರತುಪಡಿಸಿದರೆ ದೇಶದ ಉಳಿದೆಡೆ ರಾಮ್‌ಪಾಲ್‌ನ ಹೆಸರು ಕೇಳಿದವರು ವಿರಳ. ಆದರೆ ಮಂಗಳವಾರದ ಹಿಂಸಾಚಾರದ ಬಳಿಕ ರಾಮ್‌ಪಾಲ್, ರಾತ್ರಿ ಬೆಳಗಾಗುವುದ ರೊಳಗೆ ದೇಶಾದ್ಯಂತ ಗಮನಸೆಳೆದಿದ್ದಾನೆ.
2000ನೆ ಇಸವಿಯವರೆಗೂ ರಾಮ್‌ಪಾಲ್ ಓರ್ವ ಸಾಮಾನ್ಯ ಸರಕಾರಿ ನೌಕರನಾಗಿದ್ದ. ರಾಮ್‌ಪಾಲ್ ಸಿಂಗ್ ಜತಿನ್ ಎಂಬುದು ಆತನ ಪೂರ್ತಿ ಹೆಸರು. ಆತ ಹರ್ಯಾಣ ಸರಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಎಂಜಿ ನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 1995ರಲ್ಲಿ ರಾಮ್‌ಪಾಲ್ ವಿರುದ್ಧ ಇಲಾಖೆಯು ಕರ್ತವ್ಯ ನಿರ್ಲಕ್ಷದ ಆರೋಪ ಹೊರಿಸಿದ ಬಳಿಕ ಆತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. ಆದಾಗ್ಯೂ ಸುಮಾರು ಐದು ವರ್ಷಗಳ ಬಳಿಕವೇ ರಾಮ್‌ಪಾಲ್‌ನ ರಾಜೀನಾಮೆ ಅಂಗೀಕಾರಗೊಂಡಿತು. ಆನಂತರ ರಾಮ್‌ಪಾಲ್, ಸ್ವಘೋಷಿತ ‘ದೇವಮಾನವ’ನಾಗಿ ಹೊಸ ಬದುಕನ್ನು ಆರಂಭಿಸಿದ.
 ರಾಮ್‌ಪಾಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಆತ 1951ರ ಸೆಪ್ಟಂಬರ್ 8ರಂದು, ಹರ್ಯಾಣದ ಸೋನೆಪತ್ ಜಿಲ್ಲೆಯ ಗೋಹನಾ ಪಟ್ಟಣ ಸಮೀಪದ ಧನಾನಾ ಗ್ರಾಮದ ರೈತ ಕುಟುಂಬವೊಂದರಲ್ಲಿ ಜನಿಸಿದ್ದ. ಬಾಲ್ಯದಿಂದಲೇ ಆತ ಧಾರ್ಮಿಕ ವಿಚಾರಗಳಲ್ಲಿ ಆಸಕ್ತನಾಗಿದ್ದ ಹಾಗೂ ಸುಮಾರು 25 ವರ್ಷಗಳ ಕಾಲ ಅಂಜನೇಯನ ಪರಮ ಭಕ್ತನಾಗಿದ್ದ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮ್‌ಪಾಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದ. ಆನಂತರ ಹರ್ಯಾಣ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸಮಾಡತೊಡಗಿದ. ಆದರೆ ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಆತ ಉದ್ಯೋಗದಲ್ಲಿ ಆಸಕ್ತಿ ಕಳೆದುಕೊಂಡ.
  ರಾಮ್‌ಪಾಲ್‌ನ ವೆಬ್‌ಸೈಟ್ ಉಲ್ಲೇಖಿಸಿರುವ ಪ್ರಕಾರ, ಕಬೀರ್ ಪಂಥದ 107 ವರ್ಷ ವಯಸ್ಸಿನ ಸ್ವಾಮೀಜಿ ರಾಮ್‌ದೇವಾನಂದರನ್ನು ಭೇಟಿಯಾದ ಬಳಿಕ ಆತನ ಜೀವನ ನಿರ್ಣಾಯಕ ತಿರುವನ್ನು ಪಡೆದುಕೊಂಡಿತು. ರಾಮ್‌ದೇವಾನಂದರ ಮೂಲಕ ಕಬೀರ್ ಪಂಥದೆಡೆಗೆ ಆಕರ್ಷಿಸಲ್ಪಟ್ಟ ರಾಮ್‌ಪಾಲ್, ಹಂತಹಂತವಾಗಿ ಹರ್ಯಾಣದಲ್ಲಿ ಧಾರ್ಮಿಕ ನಾಯಕನಾಗಿ ಬೆಳೆಯ ತೊಡಗಿದ. ಹದಿನೈದನೇ ಶತಮಾನದ ಸಂತ ಕಬೀರ್‌ದಾಸನ ಅವತಾರ ತಾನೆಂದು ಆತ ಹೇಳಿಕೊಳ್ಳತೊಡಗಿದ. 1999ರಲ್ಲಿ ರಾಮ್‌ಪಾಲ್ ರೋಹ್ಟಕ್ ಜಿಲ್ಲೆಯ ಕರೊಂತಾ ಗ್ರಾಮದಲ್ಲಿ ಸತ್‌ಲೋಕ್ ಆಶ್ರಮವನ್ನು ಸ್ಥಾಪಿಸಿದ. ತನ್ನ ಹೆಸರಿನ ಜೊತೆಗೆ ಸಂತ ಎಂಬ ಬಿರುದನ್ನೂ ತಗಲಿಸಿಕೊಂಡ.
 ಅಪ್ರತಿಮ ವಾಗ್ಮಿಯಾದ ರಾಮ್‌ಪಾಲ್, ಹರ್ಯಾಣದೆಲ್ಲೆಡೆ ತನ್ನ ಧಾರ್ಮಿಕ ಭಾಷಣಗಳಿಂದ ಜನಸಾಮಾನ್ಯರನ್ನು ಆಕರ್ಷಿಸ ತೊಡಗಿದ. ಅದರಲ್ಲೂ ವಿಶೇಷವಾಗಿ ಸಮಾಜದ ಕೆಳವರ್ಗಗಳ ಅನೇಕ ಮಂದಿ ಆತನ ಬೋಧನೆಗಳಿಂದ ಪ್ರಭಾವಿತರಾದರು. ಆತ ತನ್ನ ಅನುಯಾಯಿಗಳಿಗೆ ದೇವತೆಗಳನ್ನು ಪೂಜಿಸದಂತೆ ಕರೆ ನೀಡತೊಡಗಿದ. ವಿಗ್ರಹಾರಾಧನೆ ಸೇರಿದಂತೆ ಹಿಂದೂ ಧರ್ಮದಲ್ಲಿ ರೂಢಿಯಲ್ಲಿರುವ ನಂಬಿಕೆಗಳನ್ನು ಆತ ಪ್ರಶ್ನಿಸತೊಡಗಿದ.
ಕ್ರಮೇಣ ಸಮಾಜದ ಉನ್ನತ ವರ್ಗಗಳಲ್ಲೂ ಆತ ಜನಪ್ರಿಯನಾಗತೊಡಗಿದ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರ ಪತ್ನಿ ಆಶಾ ಹೂಡಾ, ಬಾಬಾ ರಾಮ್‌ಪಾಲ್‌ನ ಶ್ರದ್ಧಾವಂತ ಅನುಯಾ ಯಿಯಾಗಿದ್ದರು.
ಜುಲೈ 2006ರಲ್ಲಿ ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ ರಾಮ್‌ಪಾಲ್‌ನ ಬೆಂಬಲಿಗರಿಗೆ ಹಾಗೂ ಆರ್ಯ ಸಮಾಜದ ಅನುಯಾಯಿಗಳ ನಡುವೆ ಭೀಕರ ಸಂಘರ್ಷ ನಡೆದ ಬಳಿಕ ಸರಕಾರವು ಆತನ ಕರೊಂತಾದ ಆಶ್ರಮವನ್ನು ಮುಟ್ಟುಗೋಲು ಹಾಕಿತು.
ಈ ಘರ್ಷಣೆಯಲ್ಲಿ ಆರ್ಯ ಸಮಾಜದ ಸದಸ್ಯನೊಬ್ಬ ಗುಂಡೇಟಿಗೆ ಬಲಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರಾಮ್‌ಪಾಲ್ ವಿರುದ್ಧ ಕೊಲೆ ಆರೋಪ ದಾಖಲಿಸಿದ್ದರು. ಆದಾಗ್ಯೂ, ರಾಮ್‌ಪಾಲ್ ನಿರಪರಾಧಿ ಯಾಗಿದ್ದು, ಅವರ ಮೇಲೆ ಸುಳ್ಳು ದೋಷಾರೋಪ ಹೊರಿಸಲಾಗಿದೆಯೆಂದು ಬೆಂಬಲಿಗರು ವಾದಿಸುತ್ತಾರೆ.
2013ರ, ಎಪ್ರಿಲ್ 7ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿ, ಕರೊಂತಾದ ಆಶ್ರಮವನ್ನು ರಾಮ್‌ಪಾಲ್‌ಗೆ ಹಸ್ತಾಂತರಿಸಿತು. ಇದಾದ ಒಂದು ತಿಂಗಳ ಬಳಿಕ ಆರ್ಯಸಮಾಜದ ಬೆಂಬಲಿಗರು ಹಾಗೂ ರಾಮ್‌ಪಾಲ್‌ನ ಅನುಯಾಯಿಗಳ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿತು.
   ಈ ವರ್ಷದ ಜುಲೈನಲ್ಲಿ ರಾಮ್‌ಪಾಲ್, ಹಿಸ್ಸಾರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ತೆರಳಿದ್ದ ಸಂದರ್ಭದಲ್ಲಿ ಆತನ ಬೆಂಬಲಿಗರು ವ್ಯಾಪಕ ದಾಂಧಲೆ ನಡೆಸಿದ್ದರು. ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆತನಿಗೆ ಸಮನ್ಸ್ ಜಾರಿಗೊಳಿಸಿತು. ಆದಾಗ್ಯೂ ಈ ವಿವಾದಿತ ದೇವಮಾನವ, ಹೈಕೋರ್ಟ್ ಸಮನ್ಸ್‌ಗಳನ್ನು 42 ಬಾರಿ ಉಲ್ಲಂಘಿಸಿದ್ದ. ಅಂತಿಮವಾಗಿ ಹೈಕೋರ್ಟ್ ನವೆಂಬರ್ 5ರಂದು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತು. ಆ ಪ್ರಕಾರ ರಾಮ್‌ಪಾಲ್ ನವೆಂಬರ್ 10ರಂದು, ಆನಂತರ ನವೆಂಬರ್ 17ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ವೈದ್ಯಕೀಯ ಕಾರಣಗಳನ್ನು ಮುಂದಿಟ್ಟು, ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡ.
 ಅಂತಿಮವಾಗಿ ನ್ಯಾಯಾಲಯದ ಆದೇಶದಂತೆ ಪೊಲೀಸರು ಆತನನ್ನು ಬಂಧಿಸಲು ಬಾರ್ವಾಲಾದ ಆಶ್ರಮಕ್ಕೆ ಆಗಮಿಸಿದಾಗ, ಅಲ್ಲಿ ಜಮಾಯಿಸಿದ್ದ ಐದು ಸಾವಿರಕ್ಕೂ ಅಧಿಕ ಬೆಂಬಲಿಗರು ಪೆಟ್ರೋಲ್ ಬಾಂಬ್, ಆ್ಯಸಿಡ್‌ಗಳೊಂದಿಗೆ ಭದ್ರತಾಪಡೆ ಗಳೊಂದಿಗೆ ಘರ್ಷಣೆಗಿಳಿದರು. ಈ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಪೊಲೀಸರು ಹಾಗೂ 250 ಬೆಂಬಲಿಗರು ಗಂಭೀರ ಗಾಯಗೊಂಡಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಮೃತಪಟ್ಟರು.
ಬಾರ್ವಾಲಾದ ಆಶ್ರಮದಲ್ಲಿ ಆತನ ಬೆಂಬಲಿಗರು ಪ್ರಾಣವನ್ನೂ ಲೆಕ್ಕಿಸದೆ ಪೊಲೀಸರು ಒಳನುಗ್ಗುವುದನ್ನು ತಡೆದಿದ್ದರು. ಆದರೆ ರಾಮ್‌ಪಾಲ್‌ನ ಬೆಂಬಲಗರು ಮಾತ್ರ ಆತ ಆಶ್ರಮದಲ್ಲಿಲ್ಲದಿದ್ದು, ಅಜ್ಞಾತ ಸ್ಥಳವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಹೇಳಿಕೊಂಡಿದ್ದರು. 
Courtesy-varthabharati

Leave a Reply

Top