ಕನ್ನಡ ಉಳಿಕೆಗೆ ತೆಲುಗು ಸಾಹಿತ್ಯ ಪ್ರಚಾರ ತಂತ್ರ ಅಳವಡಿಕೆ.

ಕೊಪ್ಪಳ, – ಆ. ೨೬. ಕರ್ನಾಟಕದಲ್ಲಿ ಕನ್ನಡ ಉಳಿಸಲು ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡು ತೆಲುಗು ಸಾಹಿತ್ಯವನ್ನು ಬೆಳೆಸಲು ಅಳವಡಿಸಿಕೊಂಡಿರುವ ಪ್ರಚಾರ ತಂತ್ರವನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ವಕೀಲ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ಕವಿ ವಿಜಯ ಅಮೃತ್‌ರಾಜ್ ಹೇಳಿದರು. ಅವರು ನಗರದ ತಾಲೂಕ ಪಂಚಾಯತ ಸಂಕೀರ್ಣದಲ್ಲಿರುವ ವಿಶ್ವ ಆಫ್‌ಸೆಟ್ ಪ್ರಿಂಟರ್‍ಸನಲ್ಲಿ ದಲಿತ ಸಾಹಿತ್ಯ ಪರಿಷತ್ತು ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹುರಿಗಾಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ಪ್ರತಿಯೊಬ್ಬರೂ ಕನ್ನಡ ಉಳಿವಿಗೆ ಸ್ಪಂದಿಸಬೇಕು, ಸರ್ಕಾರಗಳೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದರು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಪ್ರಕಾರದ

ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಗುರುತಿಸಲು ಸಣ್ಣ ಸಣ್ಣ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದು ಅದರ ಅಂಗವಾಗಿ ಮೊದಲ ೨೦ ಕೃತಿಗಳ ಪ್ರಕಟಣೆ ಕಾರ್ಯ ಆರಂಭವಾಗಿದೆ, ಸಾಹಿತ್ಯ ಮಾಲಿಕೆ ಹೆಸರಲ್ಲಿ ಕೃತಿಗಳು ಬರಲಿವೆ, ಪ್ರತಿಯೊಂದು ವಿಷಯದ ಕುರಿತು ಅಲ್ಲಿ ಚಿಂತನೆ ಮಾಡಲಾಗುವದು, ಓದುಗರಿಗೆ ಕೇವಲ ೫ ರುಪಾಯಿಯಲ್ಲಿ ಪುಸ್ತಕ ಸಿಗುವಂತೆ ಮಾಡುವದೇ ಮೊದಲ ಉದ್ದೇಶ, ಜನರು ಚಹಾ ಕುಡಿಯುವ ಜೊತೆಗೆ ಒಂದು ಕೃತಿ ಖರೀದಿಸಬೇಕು, ವಾರಕ್ಕೊಂದು ಕೃತಿ ಬಿಡುಗಡೆ ಮತ್ತು ಚಿಂತನ ಕಾರ್ಯಕ್ರಮವನ್ನು ನಿರಂತರ ಸಂಚಾರ ಎಂಬ ಕಾರ್ಯಕ್ರಮದ ಮೂಲಕ ಮಾಡಲಾಗುವದು ಎಂದು ತಿಳಿಸಿದರು. ವಿಜಯ ಅಮೃತ್‌ರಾಜ್ ರಚಿಸಿರುವ ಹುರಿಗಾಳು ೨೪ ಪುಟಗಳ ಕಿರು ಪುಸ್ತಕದಲ್ಲಿ ೪೯ ಚುಟುಕು ಕವಿತೆಗಳಿದ್ದು, ಕೇವಲ ಐದು ರುಪಾಯಿಗೆ ಸಿಗುತ್ತಿದ್ದು ಪ್ರತಿಯೊಬ್ಬರು ಖರೀದಿಸಬೇಕು ಎಂದರು. ಮಂಜುನಾಥ ಜಿ. ಗೊಂಡಬಾಳ ಮತ್ತು ಪುಸ್ತಕ ಮಾರಾಟಗಾರ ಹನುಮಂತಪ್ಪ ತುಬಾಕಿ ಜಂಟಿಯಾಗಿ ಕೃತಿ ಲೋಕಾರ್ಪಣೆ ಮಾಡಿದರು. ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯ ಗವಿಸಿದ್ದಪ್ಪ ಕರ್ಕಿಹಳ್ಳಿ, ನಾಗರಾಜ ಯಲಮಗೇರಿ, ಸಿದ್ದಪ್ಪ ಕಾಮನೂರ, ಭೀಮನಗೌಡ ಮಂಡಲಮರಿ ಸ್ವಾಗತಿಸಿದರು, ಬಸವರಾಜ ದೇಸಾಯಿ ವಂದಿಸಿದರು.

Leave a Reply