ಕೊಪ್ಪಳ ಜಿಲ್ಲೆಯಾದ್ಯಂತ ಫೆ. ೨೧ ರಿಂದ ಕೈಗೊಳ್ಳಲಾಗಿರುವ ಎರಡನೆ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನ ೧,೭೩,೮೧೨ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಶೇ. ೮೯. ೦೮ ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ ತಿಳಿಸಿದ್ದಾರೆ.
ಫೆ. ೨೧ ರಿಂದ ೨೪ ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ೧,೯೫,೧೨೧ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೆ ಫೆ. ೨೧ ರಂದು ಮೊದಲ ದಿನವೇ ನಗರ ಪ್ರದೇಶದ ೨೫೧೬೧ ಹಾಗೂ ಗ್ರಾಮೀಣ ಪ್ರದೇಶದ ೧೪೮೬೫೧ ಸೇರಿದಂತೆ ಒಟ್ಟು ೧,೭೩,೮೧೨ ಮಕ್ಕಳಿಗೆ ಲಸಿಕಾ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ನಗರ ಪ್ರದೇಶ- ಶೇ. ೮೩. ೨೨ ಹಾಗೂ ಗ್ರಾಮೀಣ ಪ್ರದೇಶ- ಶೇ. ೯೦. ೧೫, ಒಟ್ಟಾರೆ ಶೇ. ೮೯. ೦೮ ರಷ್ಟು ಸಾಧನೆ ಮಾಡಲಾಗಿದೆ.
ಫೆ. ೨೨ ರಿಂದ ೨೪ ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಬೂತ್ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ, ಮತ್ತೊಮ್ಮೆ ಫೆ. ೨೧ ರಿಂದ ೨೪ ರವರೆಗೆ ಜರುಗುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಬೇಕು. ಪಾಲಕರು ತಮ್ಮ ೦೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಮನವಿ ಮಾಡಿಕೊಂಡಿದ್ದಾರೆ.
Please follow and like us: