fbpx

ಸೂಪರ್ ರಂಗ ಸಿನಿಮಾ ವಿಮರ್ಶೆ

 ರಂಗ ಸುಮಾರು, ಕಿಕ್ಕು ಸೂಪರ್ರು

          ರಿಯಲ್ ಸ್ಟಾರ್ ಉಪೇಂದ್ರ ಕನ್ನಡಿಗರಿಗೆ ಕಿಕ್ಕೇರಿಸುವಲ್ಲಿ ಎತ್ತಿದ ಕೈ. ನಾನು ಸೂಪರ್ರೋ ರಂಗ ಎಂದು ಮೋಡಿ ಮಾಡಿದ್ದ ಉಪ್ಪಿ ಸೂಪರ್ ರಂಗ ಸಿನಿಮಾದಲ್ಲಿ ಕಿಕ್ಕನ್ನೇನೋ ನೀಡಿದ್ದಾರೆ. ತೆಲುಗು, ಹಿಂದಿಯಲ್ಲಿ ಕಿಕ್ ಹೆಸರಿನಲ್ಲಿಯೇ ತೆರೆಕಂಡ ಸಿನಿಮಾಗಳು ಕ್ಲಿಕ್ ಆಗಿದ್ದವು. ಕನ್ನಡಕ್ಕೆ ಸೂಪರ್ ರಂಗ ಆಗಿ ರಿಮೇಕ್ ಆಗಿರುವ ಕಿಕ್ ಯಾಕೋ ಸುಮಾರು ಎನಿಸಿಕೊಂಡಿದೆ. 
          ಮಕ್ಕಿ ಕಾ ಮಕ್ಕಿ ಕಾಪಿ ಮಾಡುವುದರಲ್ಲಿ ಕನ್ನಡದ ಕೆಲ ನಿರ್ದೇಶಕರು ಬೇಜಾನ್ ಸೌಂಡು ಮಾಡಿದ್ದಾರೆ. ಆದರೆ ಕೋಕಿಲಾ ಸಾಧು ರಿಮೇಕ್ ಮಾಡಿದರೂ ಯಥಾವತ್ತಾಗಿ ಇಳಿಸುವುದಿಲ್ಲ. ಆಲ್ಲಿ, ಇಲ್ಲಿ ಒಂಚೂರು ಸ್ವಂತಿಕೆ ಅಳವಡಿಸುತ್ತಾರೆ ಎನ್ನುವುದಕ್ಕೆ ಸೂಪರ್ ರಂಗ ಸಿನಿಮಾದ ಕೆಲ ದೃಶ್ಯಗಳು ಸಾಕ್ಷಿ ಎನ್ನಬಹುದು.
           ಏನೇ ಕೆಲಸ ಮಾಡಿದರೂ ಕಿಕ್ ಇರಬೇಕು ಎಂದು ಬಯಸುವ ರಂಗ ಸಿಕ್ಕ ಕೆಲಸಗಳನ್ನ ಪದೇ ಪದೇ ಚೇಂಜ್ ಮಾಡುತ್ತಾನೆ. ಪ್ರೀತಿಸುವ ಹುಡುಗಿಯನ್ನ ಬಿಟ್ಟು. ರಂಗನಿಗೆ ಪ್ರೀತೀಲೂ ಕಿಕ್ ಬೇಕು, ಕೆಲಸದಲ್ಲೂ ಕಿಕ್ ಇರಬೇಕು, ಆ ಕಿಕ್ಕು ಇನ್ನೊಬ್ಬರಿಗೆ ಸಹಾಯಹಸ್ತವಾಗಬೇಕು ಎನ್ನುವ ವಿಭಿನ್ನ ಮನೋಸ್ಥಿತಿ. 
            ಮೊದಲಾರ್ಧ ಮರ ಸುತ್ತೋದಕ್ಕೆ, ಹುಡುಗಿಯನ್ನ ಪಟಾಯಿಸುವುದಕ್ಕೆ ಮೀಸಲು, ಎರಡನೇ ಭಾಗ ಸಖತ್ ಥ್ರಿಲ್ಲು. ಕಳ್ಳನ ಗೆಟಪ್‌ನಲ್ಲಿ ಪೋಲೀಸ ಗೆಳೆಯನಿಗೆ ಸತಾಯಿಸುವ, ಕಾಮಿಡಿ ಗೆಳೆಯನಿಗೆ ಗೋಳು ಹೊಯ್ದುಕೊಳ್ಳುವ, ರಾಜಕಾರಣಿಗೆ ಬುದ್ಧಿ ಕಲಿಸುವ, ಕಾಯಿಲೆಗೆ ಬಿದ್ದ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಾಹಸ ಪಡುವ ದೃಶ್ಯಗಳು ಚೆನ್ನಾಗಿವೆಯೇನೋ ನಿಜ. ಆದರೆ ಕಿಕ್ ಕೊಡುವಲ್ಲಿ ಆಕ್ಷರಶಃ ಸೋತಿವೆ.
           ಕೋಕಿಲಸಾಧು ಹಾಸ್ಯನಟನಾಗಿ ಹೆಸರು ಗಳಿಸಿರುವ ಕಾರಣಕ್ಕೋ ಏನೋ ಇಡೀ ಸಿನಿಮಾದಲ್ಲಿ ಕಾಮಿಡಿ ತುರುಕಲು ಪ್ರಯತ್ನಿಸಿದ್ದಾರೆ. ಕೆಲವು ಕಡೆ ಮೂಲವನ್ನೇ ಉಳಿಸಿಕೊಂಡು ನಗಿಸಿದರೆ ಮತ್ತೊಂದಿಷ್ಟು ಕಡೆ ತಮ್ಮದೇ ಏನನ್ನೋ ಸೇರಿಸಲು ಹೋಗಿ ನಗೆಪಾಟಿಲಿಗೀಡಾಗಿದ್ದಾರೆ. ಆದರೆ ಕೊನೆಯ ನಲವತ್ತು ನಿಮಿಷ ಮಾತ್ರ ನೋಡುಗರನ್ನು ರಂಗ ಹಿಡಿದಿಡುತ್ತಾನೆ ಎನ್ನುವುದರಲ್ಲಿ ಅನುಮಾನವಿಲ್ಲ. 
        ೧ ರೂ.ಗೆ ಕೆಜಿ ಅಕ್ಕಿ ಕೊಟ್ಟು ಜನರನ್ನ ಸೋಂಬೆರಿ ಮಾಡ್ತಿದೀರಾ, ಮಕ್ಕಳಿಗೆ ಚಿಕಿತ್ಸೆ ಕೊಡ್ಸೋಕೆ ಸರಕಾರದ ಹತ್ರ ಹಣ ಇಲ್ವಾ? ಯಾಕೆ ಮಕ್ಕಳಿಗೆ ಜೀವ ಇಲ್ವಾ? ಓಹ್ ಅವರು ವೋಟ್ ಹಾಕಲ್ಲ ಅಂತಾನಾ? ಎನ್ನುವ ಡೈಲಾಗ್‌ಗಳಿಗೆ ಸಿಳ್ಳೆ ಬೀಳುತ್ತವೆ. ಜೊತೆಗೆ ಸಿದ್ದು ಸರಕಾರಕ್ಕೆ ಉಪ್ಪಿ ಗುದ್ದು ಕೊಟ್ಟಂತೆಯೂ ಭಾಸವಾಗುತ್ತದೆ. 
         ರಂಗನಾಗಿ ಉಪ್ಪಿ ಸೂಪರ್ರು. ನಾಯಕಿಯ ನಂಬರ್ ೧ ಪಟ್ಟಕ್ಕೆ ಕೃತಿ ಪೈಪೋಟಿ ನಡೆಸಿರುವುದು ಈ ಚಿತ್ರದಿಂದ ಸಾಬೀತು. ಅಂದ್ರೆ ಕೃತಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಂಗಾಯಣ ರಘು, ಅವಿನಾಶ್, ಸಾಧುಕೋಕಿಲಾ, ದೊಡ್ಡಣ್ಣ, ಬುಲ್ಲೆಟ್ ಪ್ರಕಾಶ್, ಕುರಿ ಪ್ರತಾಪ ಇತರರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳನ್ನ ಕೇಳಬಹುದು. ಕಶ್ಯಪ್ ಕ್ಯಾಮರಾ ಕಣ್ಣು ಮಲೇಶಿಯಾವನ್ನು ಚೆನ್ನಾಗಿ ಸೆರೆ ಹಿಡಿದಿದೆ. ಸ್ಟಂಟ್‌ಗಳಲ್ಲಿ ಇನ್ನೊಂದಿಷ್ಟು ಕಿಕ್ ಬೇಕಿತ್ತು. 
ರಿವ್ಯೂ ಕ್ಲೈಮ್ಯಾಕ್ಸ್…
        ಥೇಟರ್‌ನಿಂದ ಹೊರಬಂದ ಜನ, ” ನಮ್ ರಂಗ ಸುಮಾರಾಗವ್ನೆ. ಆದರೆ ಹಿಂದಿ, ತೆಲುಗಿನ ಕಿಕ್ ಸೂಪರ್ರಾಗಿತ್ತು” ಎಂದು ಹೇಳಿದ್ದು ನಿಮಗೇನಾದ್ರೂ ಕೇಳಿಸ್ತಾ?
                  
-ಚಿತ್ರಪ್ರಿಯ ಸಂಭ್ರಮ್.
ರೇಟಿಂಗ್ : ***
———————
*ನೋಡಬೇಡಿ
**ನೋಡ್ತಿರಾ?
***ನೋಡಬಹುದು. 
****ಚೆನ್ನಾಗಿದೆ.
*****ನೋಡಲೇಬೇಕು.  
Please follow and like us:
error

Leave a Reply

error: Content is protected !!