ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ : ಏ. ೧೨ ರಂದು ವಿಶೇಷ ಆಂದೋಲನ ದಿನ

ಕೊಪ್ಪಳ ಏ.   ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಕೊಪ್ಪಳ ಜಿಲ್ಲೆಯಲ್ಲಿ ಏ. ೧೨ ರಂದು ವಿಶೇಷ ಆಂದೋಲನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಎಲ್ಲ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಮತಗಟ್ಟೆಗಳಿಗೆ ತೆರಳಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿದ್ದಾರೆ.
  ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಶುದ್ಧೀಕರಣ, ದೃಢೀಕರಣ ಹಾಗೂ ಗುರುತಿನ ಚೀಟಿಯ ದತ್ತಾಂಶವನ್ನು ಆಧಾರ್ ಮಾಹಿತಿಯೊಂದಿಗೆ ಜೋಡಣೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಏ. ೧೨ ರಂದು ವಿಶೇಷ ಆಂದೋಲನ ದಿನವನ್ನಾಗಿ ಆಚರಿಸಲು ಸೂಚನೆ ನೀಡಿದೆ.  ಏ. ೧೨ ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫-೩೦ ಗಂಟೆಯವರೆಗೆ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದು, ಮತದಾರರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.  ಜಿಲ್ಲೆಯ ಎಲ್ಲ ಮತದಾರರು ಅಂದು ಸಂಬಂಧಪಟ್ಟ ಮತಗಟ್ಟೆಗಳಿಗೆ ತೆರಳಿ, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಲು ಅನುಬಂಧ-ಎ ರಲ್ಲಿ ಮಾಹಿತಿ ಸಲ್ಲಿಸಬೇಕು.  ಒಬ್ಬ ವ್ಯಕ್ತಿಯು ಎರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವುದು ಅಪರಾಧವಾಗಿದ್ದು, ಅಂತಹವರು ಒಂದು ಕಡೆ ತಮ್ಮ ಹೆಸರನ್ನು ತೆಗೆದುಹಾಕಲು ನಮೂನೆ-೭ ಭರ್ತಿ ಮಾಡಿ ಸಲ್ಲಿಸಬೇಕು.  ಮತದಾರರ ಪಟ್ಟಿಯಲ್ಲಿ ಹೆಸರು ಸೇರಿದಂತೆ ಇತರೆ ವಿವರ ತಪ್ಪಾಗಿ ನಮೂದಾಗಿದ್ದಲ್ಲಿ, ತಿದ್ದುಪಡಿಗಾಗಿ ನಮೂನೆ-೮ ಭರ್ತಿ ಮಾಡಿ ಸಲ್ಲಿಸಬೇಕು.  ಎಲ್ಲ ಮತದಾರರು ಏ. ೧೨ ರಂದು ತಪ್ಪದೆ ಮತಗಟ್ಟೆಗಳಿಗೆ ತೆರಳಿ, ವಿಶೇಷ ಆಂದೋಲನ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು   ಮನವಿ ಮಾಡಿದ್ದಾರೆ.

Leave a Reply