ಭಕ್ತರ ಅಕ್ಷಯ ಪಾತ್ರೆ ಶ್ರೀ ಗವಿಮಠ.

ಹಸಿದು ಬಂದವರಿಗೆ ಅನ್ನ ನೀಡುವ, ವಿದ್ಯೆ ಎಂದವರಿಗೆ ಅಕ್ಷರ ನೀಡುವ, ಆಶ್ರಯ ಬಯಸಿ ಬಂದವರಿಗೆ ಆಶ್ರಯ ನೀಡುವ, ಕೇಳಿದ್ದನ್ನು ಕೊಡುವ ಅಕ್ಷಯ ಪಾತ್ರೆ ಶ್ರೀ ಗವಿಮಠ. ನೂರಾರು ವರ್ಷಗಳ ಧಾರ್ಮಿಕ ಪರಂಪರೆ ಇರುವ, ತ್ರಿ ವಿಧ ದಾಸೋಹದಿಂದ ಅಸಂಖ್ಯಾತ ಭಕ್ತರ ಮನೋಮಂದಿರದಲ್ಲಿ ಗಟ್ಟಿಯಾಗಿ ನೆಲೆಸಿರುವ ಭೂ ಕೈಲಾಸವೇ ಈ ಶ್ರೀ ಮಠ. ಕೆಳಗಿನಿಂದ ನೋಡಿದರೆ ಕೈಲಾಸದಂತೆ ಕಾಣುವ, ನಗರದ ಮೂಡಣ ದಿಕ್ಕಿನಲ್ಲಿ ಭಾಸ್ಕರನೊಟ್ಟಿಗೇ ಉದಯಿಸುತ್ತಿರುವಂತೆ ಕಾಣುವ ನಯನಮನೋಹರ ದೃಶ್ಯ ಕಣ್ಣಿಗೆ ಸಾರ್ಥಕತೆಯನ್ನು ತರುತ್ತದೆ.
    ಉತ್ತರದ ಸಿದ್ಧಗಂಗೆ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವ ಮಠದ ಪ್ರಭಾವಳಿ ಕೇಳಿದರೆ ನಾಸ್ತಿಕನು ಕೂಡಾ ಭಕ್ತಿ ಪ್ರಭಾವಕ್ಕೆ ಒಳಗಾಗುತ್ತಾನೆ. ಹತ್ತಿರದ ಊರು ಮಂಗಳಾಪೂರದಲ್ಲಿ ಜನಿಸಿದ ಗವಿಸಿದ್ಧೇಶ್ವರರ ಮೂಲ ಹೆಸರು ಗುಡದಯ್ಯ. ಬಾಲ್ಯದಲ್ಲಿ ಹುಚ್ಚುಚ್ಚನಂತೆ ಆಡುತ್ತಿದ್ದ ಗುಡದಯ್ಯನನ್ನು ಹುಚ್ಚಯ್ಯ ಎಂತಲೂ ಕರೆಯುತ್ತಿದ್ದರು. ಮಂಗಳಾಪೂರಕ್ಕೆ ತಾಗಿಕೊಂಡಿರುವ ಮಳೇ ಮಲ್ಲೇಶ್ವರ ಗುಡ್ಡಕ್ಕೆ ಆಕಳು ಮೇಯಿಸಲು ಹೋಗಿ, ದೇವಸ್ತಾನದ ಪಕ್ಕದ ಬಂಡೆಯ ಕೆಳಗೆ ಋಷಿ-ಮುನಿಗಳಂತೆ ಧ್ಯಾನಸಕ್ತನಾಗಿ ಕುಳಿತು ಬಿಡುತ್ತಿದ್ದ. ಆತನ ಧ್ಯಾನಸಕ್ತಿ ಎಷ್ಟಿತ್ತೆಂದರೆ, ಒಮ್ಮೆ ಆಕಳುಗಳೆಲ್ಲಾ ಹೊಲದಲ್ಲಿ ಮೇಯ್ದಿದ್ದರಿಂದ ಸಿಟ್ಟಿಗೆದ್ದ ಹೊಲದ ಮಾಲೀಕ ಈತನಿಗೆ ನಾಲ್ಕು ಬಾರಿಸಬೇಕೆಂದು ಗುಡ್ಡದಲ್ಲಿ ಹುಡುಕಿಕೊಂಡು ಬಂದಾಗ ಧ್ಯಾನದಲ್ಲಿದ್ದ ಆತನು ಸಾಕ್ಷಾತ್ ಶಿವನಂತೆ ಕಂಡಾಗ ಧ್ಯಾನ ಭಂಗವಾಗದಂತೆ ನಿಬ್ಬೆರಗಾಗಿ ನೋಡುತ್ತಾ ನಿಂತುಬಿಟ್ಟನಂತೆ ಆ ಹೊಲದ ಮಾಲೀಕ!
    ಮಾಲೀಗೌಡ ಎನ್ನುವವರು ತಮ್ಮ ಸತ್ತ ಆಕಳನ್ನು ಮೆರವಣಿಗೆ ಮಾಡಿಕೊಂಡು ಹೊಲದಲ್ಲಿ ಹುಗಿಯಲು ಹೊರಟ್ಟಿದಾಗ ಅಡ್ಡಬಂದ ಬಾಲಕ ಗುಡದಯ್ಯ ನೀರು ಚಿಮುಕಿಸಿ ಆಕಳನ್ನು ಬದುಕಿಸುತ್ತಿದ್ದಂತೆ ಅಲ್ಲಿದ್ದವರೆಲ್ಲ ನಿಬ್ಬೆರಗಾಗಿ ಸಾಷ್ಟಾಂಗ ನಮಸ್ಕಾರ ಮಾಡಿ ಹರ-ಹರ ಮಹಾದೇವ ಎಂಬ ಜಯಘೋಷ ಮುಳಗಿಸಿದರು. ಒಮ್ಮೆ ಕುಲುಮೆಯ ಮುಂದೆ ನಿಂತಿದ್ದಾಗ ಕಾಯ್ದ ಚಕ್ಕಡಿಯ ಕೀಲವನ್ನು ಕೈಯಲ್ಲಿ ಹಿಡಿದು ಪವಾಡವನ್ನು ಮಾಡಿದರು. ಮಾಲೀಗೌಡರ ಮನೆಯಲ್ಲಿ ದನಕಾಯಲು ಇದ್ದ ಗುಡದಯ್ಯನ ಪವಾಡಗಳನ್ನು ಕಣ್ಣಾರೆ ಕಂಡ ಶ್ರೀ ಮಠದ ಅಂದಿನ ಗುರುಗಳಾದ ಶ್ರೀ ಚನ್ನಬಸವ ಶಿವಯೋಗಿಗಳು ತಮ್ಮ ಸಾನಿಧ್ಯಕ್ಕೆ ಬರುವಂತೆ ಕೇಳಿಕೊಂಡರು. ಮಾಲೀಗೌಡರಿಗೆ ಇತನನ್ನು ಕಳಿಸಿಕೊಡಲು ಮನಸ್ಸು ಬರಲಿಲ್ಲ. ಇದನ್ನ ಅರಿತ ಗುಡದಯ್ಯನವರು ಅವರನ್ನ ಮನಒಲಿಸಿ ಕುರುಹುವಿಗಾಗಿ ತನ್ನ ಜಡೆಯನ್ನು ಕಿತ್ತು ಅವರಿಗೆ ಕೊಟ್ಟು ಶ್ರೀ ಮಠಕ್ಕೆ ತಮ್ಮನ್ನು ಒಪ್ಪಿಸಿಕೊಂಡರು. ಅಂದಿನಿಂದ ಮಾಲೀಗೌಡರು ಜಡೆಗೌಡರಾದರೆಂದು ಹೇಳಲಾಗುತ್ತಿದೆ. ಗುರ ಚನ್ನಬಸವ ಶಿವಯೋಗಿಗಳಿಂದ ಅವರ ಜ್ಞಾನವನ್ನೆಲ್ಲ್ಲಾ ಪಡೆದುಕೊಂಡ ಗುಡದಯ್ಯನವರು ಜ್ಞಾನ ತುಂಬಿದ ಬಿಂದಿಯಂತಾದರು. ಗುರುವಿನ ಜ್ಞಾಧಾರೆಯಿಂದ ಅನೇಕ ಪವಾಡಗಳನ್ನು ಮಾಡಿದರು. ದಾರಿದ್ರ್ಯದಿಂದ ಮನಸ್ಸಿಗೆ ಹಿಡಿದ ಪೀಡೆ (ದ್ವೆವ್ವ) ಗಳನ್ನು ಉಪದೇಶದಿಂದ ದೂರ ಸರಿಸಿದರು. ಅಮವಾಸ್ಯೆಯಂದು ಚಂದ್ರನನ್ನು ತೋರಿಸಿದ್ದು ಮತ್ತು ಹೆಣ್ಣು ಮಗುವನ್ನು ಗಂಡು ಮಗುವಾಗಿಸಿದ್ದು ತರ್ಕಕ್ಕೆ ನಿಲುಕದ ಅದ್ಭುತ ಪವಾಡಗಳೆನಿಸಿವೆ. ಬಾಯಿ ಇಲ್ಲದವರಿಗೆ ಬಾಯಿಕೊಟ್ಟು, ಕಣ್ಣು ಇಲ್ಲದವರಿಗೆ ಕಣ್ಣು ಕೊಟ್ಟು, ಅನೇಕರ ಕುಷ್ಠರೋಗಗಳನ್ನು ಕಳೆದು ಭಕ್ತರ ಮನಗೆದ್ದವರು ಶ್ರೀ ಗುಡದಯ್ಯನವರು.
    ಒಂದು ದಿನ ಚನ್ನಬಸವ ಶಿವಯೋಗಿಗಳು ತಾವು ಲಿಂಗೈಕ್ಯರಾಗುವ ಮುನ್ಸೂಚೆನೆ ಸಿಗುತ್ತಿದ್ದಂತೆ ತಮ್ಮ ಸಮಾಧಿಯನ್ನು ತಾವೇ ಮುಂದೆ ನಿಂತು ತಮಗಿಷ್ಟದಂತೆ ಸಿದ್ದಪಡಿಕೊಂಡಿದ್ದರು. ಇದರಿಂದ ಗುಡದಯ್ಯನವರ ಮನಸ್ಸಿಗೆ ತುಂಬಾ ನೋವಾಯಿತು. ಗುರುಗಳಿಲ್ಲದೆ, ಗುರುಗಳ ಪಾದ ಪೂಜೆ ಇಲ್ಲದೆ ಜೀವನ ನಿರರ್ಥಕ ಎಂದು ಭಾವಿಸಿದರೋ ಏನೋ ತಾವೇ ಹೋಗಿ ಸಮಾಧಿಯಲ್ಲಿ ನೀರಾಹಾರ ತ್ಯಜಿಸಿ ಧ್ಯಾನಾಸನದಲ್ಲಿ ಕುಳಿತು ತಮ್ಮನ್ನು ತಾವು ಶಿವನ ಸಾನಿಧ್ಯಕ್ಕೆ ಒಪ್ಪಿಸಿಕೊಂಡುರು. ಅಂದಿನಿಂದ ಗುಡದಯ್ಯನವರ ನಾಮಾಂಕಿತವು ಗವಿಸಿದ್ದೇಶ್ವರ ಎಂದು ಬದಲಾಯಿತು. ಗುರುಗಳೇ ಮುಂದೆನಿಂತು ಶಿಷ್ಯನ ಜಾತ್ರೆಯನ್ನು ನೆರವೇರಿಸಿದರು. ಅಂದಿನಿಂದ ಇಂದಿನ ವರೆಗೆ ಶ್ರೀ ಗವಿಸಿದ್ಧೇಶ್ವರ ಜಾತ್ರೆಯು ನಿರಾತಂಕವಾಗಿ ನೆರವೇರಿಕೊಂಡು ಬರುತ್ತಿದೆ.
    ಈಗಿರುವ ಅಭಿನವ ಗವಿಸಿದ್ಧೇಶ್ವರರ ನೇತೃತ್ವದ ಜಾತ್ರೆಯು ಸೊಬಗಿನ ಸಿಖರವನ್ನೇರಿ ನಿಂತಿದೆ. ರಾಜ್ಯದ ಮೂಲೆ ಮೂಲೆಯಿಂದ ಭಕ್ತ ಕೋಟಿಯಿಂದ ಧವಸ, ಧಾನ್ಯ, ಧನ, ಕನಕ, ಕಾಣಿಕೆಗಳು ಸಮರ್ಪಿತವಾಗುತ್ತಿದ್ದು, ಇದನ್ನೇ ಅಭಿನವ ಶ್ರೀಗಳು ‘ಜನರೇ ನಡೆಸುವ ಜಾತ್ರೆ’ ಎಂದು ಮುಕ್ತ ಕಂಠದಿಂದ ಹೊಗಳುತ್ತಾರೆ. ಜಾತ್ರೆ ಎಂದರೆ ತೇರು ಎಳೆದು ಉತ್ತತ್ತಿ ಎಸೆಯಲಿಕ್ಕಷ್ಟೇ ಸಿಮಿತವಾಗದೇ ಅದರ ಜೊತೆಗೆ ನೇತ್ರಧಾನ, ರಕ್ತಧಾನ, ಕೃಷಿಮೇಳ, ಉದ್ಯೋಗ ಮೇಳ, ಮ್ಯಾರಥಾನ್, ಸಸಿ ನೆಡುವುದು, ಕ್ರೀಡೆ, ಸಂಗೀತ ಕಾರ್ಯಕ್ರಮ, ಪ್ರವಚನ ಕಾರ್ಯಕ್ರಮ, ಮದ್ದು ಸುಡುವ ಕಾರ್ಯಕ್ರಮ, ಈ ಎಲ್ಲವೂ ಒಂದೇ ಗೊಂಚಲಿನಲ್ಲಿ ಸಿಗುವಂತೆ ಮಾಡಿದ್ದಾರೆ.
ದೇಶ-ವಿದೇಶಗಳಲ್ಲಿದ್ದರೂ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಅಂತರ್ಜಾಲಸೇವೆ, ವ್ಯಾಟ್ಸ್‌ಪ್ ಸೇವೆ, ಟ್ವಿಟರ್ ಸೇವೆ ಈ ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಎಲ್ಲಾ ವಯೋಮಾನದವರನ್ನು ತನ್ನತ್ತಸೆಳೆದುಕೊಂಡು ಭಕ್ತಿ ಭಾವದ ಬೀಜವನ್ನು ಬಿತ್ತುತ್ತಿರುವ ಶ್ರೀ ಗವಿಮಠವು ಜೀವ ಸಂಕುಲಕ್ಕೆ ‘ಅಕ್ಷಯ ಪಾತ್ರೆ’ ಎಂಬುದು ಆ ಸೂರ್ಯ-ಚಂದ್ರರಷ್ಟೇ ಸತ್ಯ!
– ಕಂಡಕ್ಟರ್ ನಾಗೇಶ ಬಿನ್ನಾಳ.
Please follow and like us:
error