ಉಡುಪಿ ಮಠ ಶೂದ್ರರದು: ಕೆಳಜಾತಿಯವರಿಗೆ ಪೂಜೆಗೆ ಅವಕಾಶ ಕಲ್ಪಿಸಲು ಆಗ್ರಹ

; ವಿಧಾನಸಭೆಯಲ್ಲಿ ವಿಪಕ್ಷದಿಂದ ಒತ್ತಾಯ | ಸೋಲುಂಡ ಸರಕಾರ:1ಮತದ ಅಂತರದಿಂದ ವಿಪಕ್ಷಕ್ಕೆ ಗೆಲುವು;ವಿಧಾನಸಭೆಯಲ್ಲಿ ತಿರಸ್ಕರಿಸಲ್ಪಟ್ಟ ವಿಧೇಯಕ
ಬೆಂಗಳೂರು,ಡಿ.16:ಉಡುಪಿ ಶ್ರೀಕೃಷ್ಣ ಮಠ ಶೂದ್ರರಿಗೆ ಸೇರಿದುದಾಗಿದ್ದು,ಅಲ್ಲಿ ದಲಿತರು ಸೇರಿದಂತೆ ಕೆಳಜಾತಿಯವರಿಗೆ ಪೂಜೆ ನಡೆಸಲು ಅವಕಾಶ ನೀಡುವಂತೆ ವಿಧಾನಸಭೆಯಲ್ಲಿಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೆ ತಿದ್ದುಪಡಿ) ವಿಧೇಯಕ-2011ವಿಧಾನಸಭೆಯಲ್ಲಿಂದು ಅಂಗೀಕಾರಕ್ಕೆ ಬಂದ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದ ವಿರುದ್ಧ ವಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ,ಉಪ ನಾಯಕ ಟಿ.ಬಿ. ಜಯಚಂದ್ರ,ಶ್ರೀನಿವಾಸ್‌ಪ್ರಸಾದ್,ಡಾ. ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಶ್ರೀಕೃಷ್ಣ ಮಠದಲ್ಲಿ ಕೆಳ ಜಾತಿಯವರಿಗೆ ಪೂಜೆ ನಡೆಸಲು ಅವಕಾಶ ಕಲ್ಪಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಉಡುಪಿ ಶ್ರೀಕೃಷ್ಣ ದೇವಸ್ಥಾನ(ಮಠ)ಸಾರ್ವಜನಿಕರಿಗೆ ಸೇರಿದ್ದು.1961ರಲ್ಲಿ ಸುಪ್ರೀಂ ಕೋರ್ಟ್ ಈ ಕುರಿತು ಆದೇಶ ಕೂಡಾ ನೀಡಿತ್ತು.ಇದರ ವಿರುದ್ಧವಾಗಿ ಅಲ್ಲಿನ ಮಠಾಧೀಶರು ಕೋರ್ಟ್ ಮೆಟ್ಟಿಲೇರಿದ್ದರು.ಸಾರ್ವಜನಿಕ ದೇವಸ್ಥಾನವನ್ನು ಮಠ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ದೇಶ-ವಿದೇಶಗಳಲ್ಲಿ ಈ ಮಠ ಖ್ಯಾತಿ ಗಳಿಸಲು ಕಾರಣ ಶೂದ್ರ ವರ್ಗಕ್ಕೆ ಸೇರಿದ ಕನಕದಾಸರು. ಅವರನ್ನು ದೇವಸ್ಥಾನದೊಳಗೆ ಹೋಗಲು ಸವರ್ಣೀಯರು ಅಡ್ಡಿಪಡಿಸಿದುದರಿಂದ ಶ್ರೀಕೃಷ್ಣ ಕನಕನ ಕಿಂಡಿಯ ಮೂಲಕ ದರ್ಶನ ನೀಡಿದ್ದನು.ಆದರೆ ಈ ಕಿಂಡಿಯನ್ನು ಮುಚ್ಚಿ ನವಗ್ರಹ ಕಿಂಡಿ ಮಾಡಲು ಅಲ್ಲಿನ ಮಠಾಧೀಶರು ಹುನ್ನಾರ ನಡೆಸಿದ್ದರು.
ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದ್ದರಿಂದ ಅದನ್ನು ಕೈಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಜರಾಯಿ ಇಲಾಖೆಯಲ್ಲಿದ್ದ ಉಡುಪಿ ಹಾಗೂ ಗೋಕರ್ಣ ದೇವಸ್ಥಾನದ ಆಡಳಿತವನ್ನು ಸರಕಾರ ಉಡುಪಿ ಮಠಕ್ಕೆ ಹಾಗೂ ರಾಮಚಂದ್ರಾಪುರ ಮಠಕ್ಕೆ ನೀಡಿದೆ.ಇದನ್ನು ಯಾರೊಟ್ಟಿಗೆ ಕೇಳಿ ಸರಕಾರ ನೀಡಿದೆ ಎಂದು ಪ್ರಶ್ನಿಸಿದ ಅವರು,ಈ ದೇವಸ್ಥಾನಗಳಿಗೆ ಭಕ್ತರ ಹುಂಡಿ ಹಾಗೂ ಇನ್ನಿತರ ಮೂಲಗಳಿಂದ ಕೋಟ್ಯಂತರ ರೂ.ಆದಾಯ ಬರುತ್ತಿದೆ.ಈ ಆದಾಯ ಎಲ್ಲಿಗೆ ಹೋಗುತ್ತಿದೆ. ಇದರ ಲೆಕ್ಕ ಸರಕಾರಕ್ಕಿದೆಯೇ ಎಂದು ಕೇಳಿದರು.
ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ತರಾತುರಿಯಲ್ಲಿ ವಿಧೇಯಕ ಅಂಗೀಕರಿಸಲು ಮುಂದಾದಾಗ ಸಿದ್ದರಾಮಯ್ಯ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಈ ರೀತಿ ಆತುರದಲ್ಲಿ ವಿಧೇಯಕ ಅಂಗೀಕರಿಸುವ ಉದ್ದೇಶವಾದರೂ ಏನು?ವಿಧೇಯಕ ಅಂಗೀಕರಿಸುವ ಮೊದಲು ಚರ್ಚೆ ನಡೆಸೋಣ.ಅದಕ್ಕೂ ಮುಂಚೆ ವಿಧೇಯಕ ಅಂಗೀಕಾರ ಮಾಡಬಾರದು ಎಂದು ಸಭಾಧ್ಯಕ್ಷರಲ್ಲಿ ಒತ್ತಾಯಿಸಿದರು.
ಈ ವೇಳೆ ಡಾ.ಆಚಾರ್ಯ ತಮ್ಮ ಪಟ್ಟನ್ನು ಸಡಿಲಿಸದೆ,ವಿಧೇಯಕ ಅಂಗೀಕಾರವಾಗುವ ಅಗತ್ಯವಿದೆ.ಮುಜರಾಯಿ ಖಾತೆಯ ಆಡಳಿತಕ್ಕೆ ಇದರ ಆವಶ್ಯಕತೆ ಇದೆ ಎಂದರು.ಇದರಿಂದ ಕೆರಳಿದ ಸಿದ್ದರಾಮಯ್ಯ,ಸಾರ್ವಜನಿಕ ದೇವಸ್ಥಾನಗಳನ್ನು ಮಠಗಳ ಆಡಳಿತಕ್ಕೆ ನೀಡಿ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದೀರಿ.ಇದು ಸರಿಯಲ್ಲ.ಮಠದ ಆಡಳಿತಕ್ಕೆ ನೀಡಿರುವ ಉಡುಪಿ ಶ್ರೀಕೃಷ್ಣ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು.1961ರಲ್ಲಿ ಸುಪ್ರೀಂ ಕೋರ್ಟ್ ಖುದ್ದು ಹೇಳಿದೆ. ಆದರೂ ಸರಕಾರ ಅದನ್ನು ಮುಜರಾಯಿ ಇಲಾಖೆಯಿಂದ ಮಠಕ್ಕೆ ನೀಡಿರುವ ಉದ್ದೇಶವಾದರೂ ಏನು ಎಂದು ಡಾ.ಆಚಾರ್ಯರನ್ನು ತರಾಟೆಗೆ ತೆಗೆದುಕೊಂಡರು.
ಉಡುಪಿ ಮಠಕ್ಕೆ ವರ್ಷಕ್ಕೆ 3ಕೋಟಿ ರೂ.ಆದಾಯ ಬರುತ್ತಿದೆ.ಈ ಹಣದ ಲೆಕ್ಕಾಚಾರ ಸರಕಾರಕ್ಕಿದೆಯೇ,ಇದನ್ನು ಕೇಳುವವರಾದರೂ ಇದ್ದಾರೆಯೇ,ಇದರ ಲೆಕ್ಕ ಕೊಡಬೇಕು ಎಂದು ಆಕ್ರೋಶಭರಿತ ಮಾತುಗಳಿಂದ ಸರಕಾರವನ್ನು ಚುಚ್ಚಿದರು.
ಈ ಕುರಿತು ಡಾ.ಆಚಾರ್ಯ ಮಾತನಾಡಿ,ಅನುವಂಶಿಕವಾಗಿ ಬಂದಿರುವ ದೇವಸ್ಥಾನದ ಆಡಳಿತವನ್ನು ಅವರಿಗೆ ನೀಡಲಾಗುತ್ತಿದೆ. ಇದು ಹಿಂದಿನಿಂದಲೂ ಬಂದ ವಿಚಾರ ಎಂದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಠದ ಸ್ವಾಮೀಜಿಗಳೇ ಪೂಜೆ ಮಾಡುತ್ತಾ ಬಂದಿದ್ದಾರೆ. ಬೇರೆಯವರಿಗೆ ಅಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಆಚಾರ್ಯ ಸ್ಪಷ್ಟನೆ ನೀಡಿದರು. ಆಚಾರ್ಯರ ಹೇಳಿಕೆಯನ್ನು ಸಿದ್ದರಾಮಯ್ಯ, ಜಯಚಂದ್ರ,ಶ್ರೀನಿವಾಸ್ ಪ್ರಸಾದ್,ಮಹದೇವಪ್ಪ ಸೇರಿದಂತೆ ಮತ್ತಿತರರು ಆಕ್ಷೇಪಿಸಿದರು.
ಉಡುಪಿ ದೇವಸ್ಥಾನ ಶೂದ್ರರಿಗೆ ಸೇರಿದ್ದು,ಸಾರ್ವಜನಿಕ ದೇವಸ್ಥಾನದಲ್ಲಿ ಕೆಳಜಾತಿಯವರಿಗೆ ಪೂಜೆಗೆ ಸರಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಡಾ.ಆಚಾರ್ಯ ತಡವರಿಸಿದರು.ಒಟ್ಟಿಗೆ ವಿಧೇಯಕ ಅಂಗೀಕರಿಸಲು ಬಂದಿದ್ದ ಆಚಾರ್ಯರಿಗೆ ಉಡುಪಿ ಮಠದ ವಿಷಯ ಹುತ್ತಕ್ಕೆ ಕೈಹಾಕಿದಂತಾಯಿತು.
ಸೋಲುಂಡ ಸರಕಾರ:1ಮತದ ಅಂತರದಿಂದ ವಿಪಕ್ಷಕ್ಕೆ ಗೆಲುವು;ವಿಧಾನಸಭೆಯಲ್ಲಿ ತಿರಸ್ಕರಿಸಲ್ಪಟ್ಟ ವಿಧೇಯಕ
ಬೆಂಗಳೂರು,ಡಿ.16:ವಿಧೇಯಕ ಅಂಗೀಕಾರದ ವೇಳೆ ವಿಧಾನಸಭೆಯಲ್ಲಿಂದು ನಡೆದ ಮತ ವಿಭಜನೆಯಲ್ಲಿ ಒಂದು ಮತದ ಅಂತರದಿಂದ ವಿಪಕ್ಷ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ತೀವ್ರ ಮುಖಭಂಗ ಅನುಭವಿಸಿದ ಘಟನೆ ನಡೆಯಿತು.
ವಿಧಾನ ಪರಿಷತ್ತಿನಲ್ಲಿ ಅಂಗೀಕಾರಕೊಂಡಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೆ ತಿದ್ದುಪಡಿ)ವಿಧೇಯಕ-2011ನ್ನು ವಿಧಾನಸಭೆಯಲ್ಲಿಂದು ತರಾತುರಿಯಲ್ಲಿ ಅಂಗೀಕರಿಸಲು ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಮುಂದಾದಾಗ ಸರಕಾರ ತೀವ್ರ ಮುಖಭಂಗಕ್ಕೀಡಾಯಿತು.
ವಿಪಕ್ಷ ನಾಯಕ ಸಿದ್ದರಾಮಯ್ಯ ಪರಿಪರಿಯಾಗಿ ವಿರೋಧ ವ್ಯಕ್ತಪಡಿಸಿದರೂ ಡಾ.ಆಚಾರ್ಯ ಮಾತ್ರ ವಿಧೇಯಕಕ್ಕೆ ಅಂಗೀಕಾರ ಬೇಕೇಬೇಕು ಎಂದು ಯಾರದೋ ಒತ್ತಡಕ್ಕೆ ಬಿದ್ದವರಂತೆ ಹಠ ಹಿಡಿದರು. ವಿಧೇಯಕ ಅಂಗೀಕರಿಸುವ ಮೊದಲು ಅದರ ಕುರಿತು ಚರ್ಚೆ ನಡೆಯಬೇಕು. ಅದಕ್ಕೆ ಅವಕಾಶವಿಲ್ಲದೆ ಅಂಗೀಕಾರ ಮಾಡಬಾರದು.ಜೊತೆಗೆ ಮುಜರಾಯಿ ಇಲಾಖೆಯಡಿಯಿದ್ದ ಉಡುಪಿ ಮಠ ಹಾಗೂ ಗೋಕರ್ಣ ದೇವಸ್ಥಾನಗಳನ್ನು ಮಠಗಳ ಆಡಳಿತಕ್ಕೆ ನೀಡಿರುವುದನ್ನು ಉಲ್ಲೇಖಿಸಿ ಅಂಗೀಕಾರ ಬೇಡ, ಮುಂದೂಡಿ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ಈ ಮಧ್ಯೆ ಡಾ.ಆಚಾರ್ಯ ತಮ್ಮ ಪಟ್ಟಿನಿಂದ ಹಿಂದೆಸರಿಯದಿದ್ದುದನ್ನು ಕಂಡ ಸಿದ್ದರಾಮಯ್ಯ ಮತಕ್ಕೆ ಹಾಕುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿಧೇಯಕವನ್ನು ಮತಕ್ಕೆ ಹಾಕಿದರು.ಈ ಸಂದರ್ಭದಲ್ಲಿ ತಲೆ ಎಣಿಕೆ ಕಾರ್ಯ ನಡೆಯಿತು.
ವಿಧೇಯಕ ಅಂಗೀಕಾರದ ಪರವಾಗಿ ಆಡಳಿತದ ಸದಸ್ಯರು 33ರಷ್ಟಿದ್ದರೆ,ವಿರುದ್ಧವಾಗಿ 34 ಮಂದಿ ಸದಸ್ಯರಿದ್ದರು.ಇದರಿಂದ ವಿಪಕ್ಷಕ್ಕೆ ಗೆಲುವು ಉಂಟಾದರೆ,ಬಹುಮತ ಹೊಂದಿರುವ ಆಡಳಿತಾರೂಢ ಸರಕಾರಕ್ಕೆ ತೀವ್ರ ಮುಖಭಂಗ ಉಂಟಾಯಿತು.
Please follow and like us:
error