ಅಟ್ಟಹಾಸ ಚಿತ್ರ ವಿಮರ್ಶೆ

ವೀರಪ್ಪನ್‌ನ ಅಟ್ಟಹಾಸವೂ, ರಮೇಶ್‌ರ ಮಂದಹಾಸವೂ…
        ವೀರಪ್ಪನ್ ಜನನದಿಂದ ಹಿಡಿದು ಕಾಲವಾಗುವವರೆಗೂ ಎಲ್ಲವನ್ನೂ ಹೇಳಲೇಬೇಕೆಂದು ನಿರ್ಧರಿಸಿದಂತೆ ತೋರುವ ಎ.ಎಂ.ಆರ್.ರಮೇಶ್ ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್‌ನ ಪ್ರತಿ ನಡೆ, ನುಡಿಯನ್ನು ದಾಖಲಿಸಲು ಸಾಕಷ್ಟು ಸಮಯ, ಶ್ರಮ ವ್ಯಯಿಸಿದ್ದಾರೆ. ಅಟ್ಟಹಾಸ ನೋಡಿದರೆ ಅವರ ಶ್ರಮ ಎದ್ದು ಕಾಣುತ್ತದೆ. ಜೊತೆಗೆ ಅಟ್ಟಹಾಸದಲ್ಲಿರುವ ಸರಕು ನೋಡಿದರೆ ಎರಡು ಸಿನಿಮಾಗಳಿಗೆ ಆಗುವಷ್ಟು ವಿಷಯಗಳಿವೆ. ಎಲ್ಲವನ್ನು ನೀಟಾಗಿ ಹೇಳುತ್ತಾ ಹೋಗುವ ರಮೇಶ್ ಮಧ್ಯಂತರದವರೆಗೆ ಬೋರ್ ಎನಿಸುವಂತೆ ನಿರೂಪಿಸಿದ್ದಾರೆ.
         ಹಾಗೆ ನೋಡಿದರೆ ಈ ಸಿನಿಮಾ ಡಾಕ್ಯುಮೆಂಟರಿಯಾಗುವ ಅಪಾಯವೇ ಹೆಚ್ಚು. ಆದರೂ ರಮೇಶ ಅಟ್ಟಹಾಸಕ್ಕೆ ಸಿನಿಮೀಯ ಟಚ್ ಕೊಟ್ಟು  ಪ್ರೇಕ್ಷಕರು ಥೇಟರ್ ಕಡೆ ಬರುವಂತೆ ಮಾಡಿದ್ದಾರೆ. ೭ ನೇ ವಯಸ್ಸಿನಲ್ಲಿಯೇ ಜಿಂಕೆ ಬೇಟೆಯಾಡುವ ವೀರಪ್ಪನ್‌ನ ಗುರಿ ಕಂಡು ಊರಿನ ಗೌಡ ಅವನನ್ನು ತನ್ನೊಂದಿಗೆ ಆನೆಯನ್ನು ಖೆಡ್ಡಾಕ್ಕೆ ಕೆಡವಲು ಬಳಸಿಕೊಳ್ಳುತ್ತಾನೆ. ಒಂದಿನ ವೀರಪ್ಪನ್‌ಗೆ ನಾನೇ ಯಾಕೆ ಆನೆದಂತ ಮಾರಿ ಹಣ ಗಳಿಸಬಾರದು ಎಂಬ ಆಲೋಚನೆ ಬಂದು ತನ್ನದೇ ಗ್ಯಾಂಗ್ ಕಟ್ಟಿ, ಎದುರಾಳಿ ಗ್ಯಾಂಗ್‌ನ್ನು ಜನರೆದುರೇ ಬರ್ಬರವಾಗಿ ಹತ್ಯೆ ಮಾಡುತ್ತಾನೆ. ಅಲ್ಲಿಂದ ಶುರುವಾಗುವ ವೀರಪ್ಪನ್ ಅಟ್ಟಹಾಸ ಸಿನಿಮಾದ ಕೊನೆಯ ೫೦ ನಿಮಿಷದವರೆಗೂ ಮುಂದುವರೆಯುತ್ತದೆ.
        ಒಮ್ಮೆ ಪೊಲೀಸರ ಕೈಗೆ ಸಿಕ್ಕು ಒದೆ ತಿನ್ನುವ ವೀರಪ್ಪನ್ ಅರಣ್ಯಾಽಕಾರಿಗಳ ಸುಪರ್ದಿಗೆ ಒಳಪಡುತ್ತಾನೆ. ಜನಸೇವೆಯಲ್ಲಿರುವ ಅರಣ್ಯಾಽಕಾರಿ ಮಮತೆಯಿಂದ ಅವನನ್ನು ಬದಲಾಯಿಸಲು ನೋಡುತ್ತಾನೆ. ಆದರೆ ವೀರಪ್ಪನ್ ಅಲ್ಲಿಂದ ತಪ್ಪಿಸಿಕೊಂಡು ಮತ್ತೇ ಕಾಡು ಸೇರುತ್ತಾನೆ. ಎನ್ನ ಎದುರಾಳಿ ಗ್ಯಾಂಗ್‌ನ ಸಂಬಂಽಕರು ಸ್ನೇಹಹಸ್ತ ಚಾಚಿದರೂ ಅವರನ್ನು ನಿಷ್ಕರುಣಿಯಾಗಿ ಕೊಲ್ಲುವ ಮೂಲಕ ಊರ ಜನ ವೀರಪ್ಪನ್ ಹೆಸರು ಕೇಳಿದರೆ ನಡುಗುವಂತೆ ಮಾಡುತ್ತಾನೆ. ಅಷ್ಟೇ ಅಲ್ಲ ಪೊಲೀಸ್ ಇಲಾಖೆಯ ಹಲವು ಅಽಕಾರಿಗಳನ್ನು ರಸ್ತೆಯಲ್ಲಿ ನೆಲಬಾಂಬ್ ಇಟ್ಟು ಉಡಾಯಿಸಿ ಇಲಾಖೆಗೆ ಮಾತ್ರವಲ್ಲ ಕರ್ನಾಟಕ ಹಾಗೂ ತಮಿಳುನಾಡು ಸರಕಾರಕ್ಕೂ ನಡುಕ ಹುಟ್ಟಿಸುತ್ತಾನೆ.
         ಚಿತ್ರದುದ್ದಕ್ಕೂ ಪೊಲೀಸ್ ಇಲಾಖೆಯ ಚಲನ ವಲನ ತಿಳಿಯಲು ವೀರಪ್ಪನ್ ಇಟ್ಟಿರುವ ಮಾಹಿತಿದಾರರು, ಅದೇ ಮಾಹಿತಿದಾರರಿಂದಲೇ ವೀರಪ್ಪನ್‌ನ ಅಂತ್ಯಕ್ಕೆ ಪೊಲೀಸ್ ಇಲಾಖೆಯ ಚಾಣಾಕ್ಷತನ ಎದ್ದು ಕಾಣುತ್ತದೆ. ಚಿತ್ರದ ಕೊನೆಯ ೫೦ ನಿಮಿಷ  ನೋಡುಗರು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಕುತೂಹಲ ಕಾಯ್ದುಕೊಂಡು ಹೋಗುತ್ತದೆ. 
           ಕನ್ನಡದ ವರನಟ ಡಾ.ರಾಜ್ ಅಪಹರಣ ಮಾಡುವ ವೀರಪ್ಪನ್ ಕಾಡಿನಲ್ಲಿ ಅವರನ್ನು ಗೌರವದಿಂದ ಪ್ರೀತಿಯಿಂದ ಕಂಡ ಎಂದು ಬಿಂಬಿಸಲಾಗಿದೆ. ಜೊತೆಗೆ ಪೊಲೀಸರು ವೀರಪ್ಪನ್ ಕುರಿತು ಊರ ಜನರ ಅಭಿಪ್ರಾಯ ಸಂಗ್ರಹಿಸುವಾಗ ವೀರಪ್ಪನ್ ಉತ್ತಮ ವ್ಯಕ್ತಿ ಎಂದು ಬಿಂಬಿಸಿದ್ದು  ಮುತ್ತುಲಕ್ಷ್ಮಿ ಒಲೈಕೆಗಾಗಿ ಎಂಬ ಅನುಮಾನ ಮೂಡುತ್ತದೆ. 
            ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅದೇ ಗೆಟಪ್ಪಿನಲ್ಲಿ ಮಕ್ಕಳೆದುರು ಕಿಶೋರ್ ಬಂದರೆ ಸುಸ್ಸೂ ಗ್ಯಾರಂಟಿ ಎನ್ನುವಷ್ಟರ ಮಟ್ಟಿಗೆ ಕಿಶೋರ್ ಆ ಪಾತ್ರಕ್ಕೆ ಒಪ್ಪಿದ್ದಾರೆ. ವೀರಪ್ಪನ್‌ನ ಬಲಗೈ ಬಂಟನಾಗಿ ನಿರ್ದೇಶಕ ಎ.ಎಂ.ಆರ್.ರಮೇಶ್ ಪ್ರಮುಖ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಓಬೇರಾಯ್ ಕೂಡಾ ಡಾ.ರಾಜ್ ಅವರನ್ನು ನೆನಪಿಸುವ ಅಭಿನಯ ನೀಡಿದ್ದಾರೆ. ವಿಜಯಕುಮಾರ್ ಪಾತ್ರ ನಿರ್ವಹಿಸಿರುವ ಅರ್ಜುನ್ ಸರ್ಜಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರಾದರೂ ಅವರ ಇಮೇಜ್‌ನ್ನು ಇನ್ನಷ್ಟೂ ಸರಿಯಾಗಿ ಬಳಸಬಹುದಿತ್ತು. ಲಕ್ಷ್ಮಿರೈ ಆಟಕ್ಕುಂಟು, ಲೆಕ್ಕಕ್ಕಿಲ್ಲ. ರವಿಕಾಳೆ, ಸುಚೇಂದ್ರಪ್ರಸಾದ್ ಗಮನ ಸೆಳೆಯುತ್ತಾರೆ.
           ಸಂದೀಪ ಚೌಟಾ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ. ಮೂರು ಗಂಟೆಯ ಈ ಸಿನಿಮಾದಲ್ಲಿ ಒಂದೂ ಹಾಡಿಲ್ಲ. ಚಿತ್ರದಲ್ಲಿ ಎದ್ದು ಕಾಣುವ ಪ್ರಮುಖ ಕೊರತೆ ಸಂಭಾಷಣೆ. ಹಾಗೆಯೇ ಚಿತ್ರದಲ್ಲಿ ಎಲ್ಲವೂ ತಮಿಳುನಾಡು ಸರಕಾರದ ಅಣತಿಯಂತೆ ವೀರಪ್ಪನ್ ಮಟ್ಟ ಹಾಕುವ ಆಪರೇಷನ್ ಕಕೂನ್ ನಡೆದಿದೆ ಎಂದು ತೋರಿಸಲಾಗಿದೆ. ಇದು ಆಕ್ಷೇಪಾರ್ಹ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ವೀರಪ್ಪನ್‌ನನ್ನು ಮಟ್ಟ ಹಾಕಿದ್ದು ಕರ್ನಾಟಕ ಪೊಲೀಸ್ ಎಂಬುದನ್ನು ರಮೇಶ್ ಸೂಚ್ಯವಾಗಿಯೂ ಹೇಳಿಲ್ಲ.
           ನಿರ್ದೇಶಕ ಹಾಗೂ ನಿರ್ಮಾಪಕರಲ್ಲೊಬ್ಬರಾದ ಎ.ಎಂ.ಆರ್.ರಮೇಶ್ ಅವರು ವೀರಪ್ಪನ್ ಅಟ್ಟಹಾಸ ತೋರುತ್ತಲೇ ಚಿತ್ರ ಹಣ ಗಳಿಸುತ್ತದೆ ಎಂಬ ಮಂದಹಾಸ ಬೀರಬಹುದು. ವೀರಪ್ಪನ್‌ನ ಅಟ್ಟಹಾಸ ನೋಡಬೇಕೆನಿಸಿದವರು ಥೇಟರ್ ಕಡೆಗೆ ಹೋಗಬಹುದು.
Please follow and like us:
error

Related posts

Leave a Comment