You are here
Home > Koppal News > ಸಮಾಜವಾದಿ ಅನಂತಮೂರ್ತಿಗೆ ವೈದಿಕೋಕ್ತ ಸಂಸ್ಕಾರ : ವಿಷಾದ : ಭಾರದ್ವಾಜ್

ಸಮಾಜವಾದಿ ಅನಂತಮೂರ್ತಿಗೆ ವೈದಿಕೋಕ್ತ ಸಂಸ್ಕಾರ : ವಿಷಾದ : ಭಾರದ್ವಾಜ್

 ಸಮಾಜದಲ್ಲಿರುವ ಅಂಧಶ್ರದ್ಧೆಗಳನ್ನು ಅಸಮಾನತೆಯನ್ನು ವಿರೋಧಿಸಿ ಅನೇಕ ಲೇಖನಗಳನ್ನು ಬರೆದು ಪ್ರಶಸ್ತಿಗಳನ್ನು ಪಡೆದ ಚಿಂತಕ ಅನಂತಮೂರ್ತಿಯವರಿಗೆ ಅವರ ಪಾರ್ಥೀವಶರೀರವನ್ನು ಮನುವಾದದ ವೈದಿಕೋಕ್ತವಾಗಿ ಸಂಸ್ಕಾರ ಮಾಡಿರುವುದು ಮೂರ್ತಿಯವರು ಮತ್ತೆ ಸತ್ತಂತ್ತಾಗಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. 
ಅಂತರಾಷ್ಟ್ರೀಯ, ಕೇಂದ್ರ ಹಾಗೂ ರಾಜ್ಯ ಹಾಗೂ ಸಾಹಿತ್ಯ ಪುರಷ್ಕಾರಗಳನ್ನು ಪಡೆದ ದಿವ್ಯಜ್ಞಾನಿ , ಸಮಾಜವಾದಿ ಚಿಂತಕರಾದ ಯು.ಆರ್.ಅನಂತಮೂರ್ತಿ ನಮ್ಮನ್ನಗಲಿರುವುದು ದುಃಖದ ಸಂಗತಿಯಾಗಿದೆ. ಸಮಾನತೆಯ ಕ್ರಾಂತಿ ಸಾಗರಕ್ಕೆ ಒಂದು ಬಿಂದುವಾಗಿ ಸೇರಿದ ಮೂರ್ತಿಯವರ ಪಾರ್ಥಿವ ಶರೀರಕ್ಕೆ ಮಾಧ್ವ ಭ್ರಾಹ್ಮಣ ಸಂಪ್ರದಾಯದಲ್ಲಿ ಪುರೋಹಿತರು ವಿಧಿ-ವಿಧಾನದಿಂದ ಅಂತ್ಯಸಂಸ್ಕಾರ ಮಾಡಿರುವುದು ಪ್ರಗತಿಪರರಿಗೆ ಮತ್ತು ಸಮಾಜವಾದಿಗಳಿಗೆ ದುಃಖಕರ ವಿಷಯವಾಗಿದೆ. 
ಮನುವಾದ ಪ್ರಗತಿಪರರನ್ನು ಸತ್ತಮೇಲೂ ಸಹಿತ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಮತ್ತು ಅವರು ಬದುಕಿನ ಬದುಕನ್ನು ಹಗುರಗೊಳಿಸುವುದು ನಡೆದುಬಂದ ಇತಿಹಾಸವಾಗಿದೆ. ಮೂರ್ತಿ ಆರಾಧನೆಯನ್ನು ಒಪ್ಪದಿದ್ದ ಬುದ್ಧನ್ನನ್ನೇ, ಮೂರ್ತಿಯಾಗಿಸಿ ಪೂಜೆ ಮಾಡುವುದು ಮನುವಾದದ ತಂತ್ರವಾಗಿದೆ. ಮನುವಾದದ ವಿರುದ್ಧ ವಿಶ್ವಕ್ರಾಂತಿಯನ್ನೇ ಮಾಡಿದ ಬಸವಣ್ಣನ ಅನುಯಾಯಿಗಳು ಈ ಮನುವಾದದ ಕಡೆಗೆ ವಾಲುತ್ತಿರುವುದು ಪ್ರಗತಿಪರ ಹೋರಾಟಗಳಿಗೆ ಹಿನ್ನೆಡೆಯಾಗಿದೆ. ಪ್ರಗತಿಪರರು ಮತ್ತು ಕಮ್ಯುನಿಷ್ಟರು ನಾಸ್ತಿಕರಾಗದೆ, ಆಸ್ತಿಕರಾಗುತ್ತಿರುವುದು ಕ್ರಾಂತಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಭಾರದ್ವಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply

Top