೨೫ ರಿಂದ ತುಂಗಭದ್ರಾ ಕಾಲುವೆಗಳಿಗೆ ನೀರು.

ಕೊಪ್ಪಳ – ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಜು. ೨೫ ರಿಂದಲೇ ನೀರು ಹರಿಸಲು ಗುರುವಾರದಂದು ಬೆಂಗಳೂರಿನ ವಿಕಾಸಸೌಧಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರ ಕೈಗೊಂಡಿದೆ.
     ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಶಸೌಧದಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 
     ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯಗಳು ಇಂತಿವೆ.  ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ಜು. ೨೫ ರಿಂದ ಆಗಸ್ಟ್ ೧೦ ರವರೆಗೆ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಸಲುವಾಗಿ ೩೨೦೦ ಕ್ಯೂಸೆಕ್‌ನಂತೆ ನೀರಿ ಹರಿಸಲಾಗುವುದರಿಂದ, ಈ ವ್ಯಾಪ್ತಿಯ ಎಲ್ಲ ರೈತರು ಸಹಕರಿಸಬೇಕು.  ಎಡದಂಡೆ ಮುಖ್ಯ ಕಾಲುವೆಗೆ ಜು. ೨೫ ರಿಂದ ನವೆಂಬರ್ ೩೦ ರವರೆಗೆ ಸರಾಸರಿ ೩೨೦೦ ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ನೀರು ಪೂರೈಕೆ ಮಾಡಲಾಗುವುದು.  ತುಂಗಭದ್ರಾ ಬಲದಂಡೆ ಕೆಲಮಟ್ಟದ ಕಾಲುವೆಗೆ ಸರಾಸರಿ ೬೦೦ ಕ್ಯೂಸೆಕ್‌ನಂತೆ ಹಾಗೂ ತುಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ  ೧೦೦೦ ಕ್ಯೂಸೆಕ್‌ನಂತೆ ಜು. ೨೫ ರಿಂದ ನವೆಂಬರ್ ೩೦ ರವರೆಗೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಬಿಡಲಾಗುವುದು.  ರಾಯ ಬಸವಣ್ಣ ಕಾಲುವೆಗೆ ಜೂನ್ ೦೧ ರಿಂದ ಡಿಸೆಂಬರ್ ೧೦ ರವರೆಗೆ ಸರಾಸರಿ ೧೮೦ ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆಗೆ ಅನುಗುಣವಾಗಿ.  ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ ೨೫ ರಿಂದ ನವೆಂಬರ್ ೩೦ ರವರೆಗೆ ಸರಾಸರಿ ೧೬ ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ನೀರಿ ಹರಿಸಲಾಗುವುದು.  ಈಗಾಗಲೆ ಬಳ್ಳಾರಿ ನಗರಕ್ಕೆ ಎಲ್.ಎಲ್.ಸಿ. ಮೂಲಕ ೦. ೦೧ ಟಿಎಂಸಿ ನೀರನ್ನು ಹಾಗೂ ಸಿಂಧನೂರು ಮತ್ತು ಗಂಗಾವತಿ ಪಟ್ಟಣಗಳಿಗೆ ನದಿ ಮೂಲಕ ೦. ೫೦೦ ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಜುಲೈ ಮಧ್ಯಂತರ ಅವಧಿಯಲ್ಲಿ ಹರಿಸಲಾಗಿದ್ದು, ಈ ರೀತಿ ಕೈಗೊಂಡ ಕ್ರಮವನ್ನು ಸಭೆ ಸ್ವೀಕರಿಸಿತು.
     ಸಭೆಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷ ವಸಂತಕುಮಾರ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಶಾಸಕರುಗಳಾದ ಹಂಪಯ್ಯ ನಾಯಕ್, ಶಿವರಾಜ ಪಾಟೀಲ್, ತಿಪ್ಪರಾಜು, ಪ್ರತಾಪಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ, ನಾಗರಾಜು, ವಿಧಾನಪರಿಷತ್ ಸದಸ್ಯರುಗಳಾದ ಭೋಸರಾಜ್, ಹಾಲಪ್ಪ ಆಚಾರ್, ಮೃತ್ಯುಂಜಯ್ಯ ಜಿನಗ, ತುಂಗಭದ್ರಾ ಯೋಜನಾ ವೃತ್ತದ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ ಗುಂಗಿ, ಅಧೀಕ್ಷಕ ಅಭಿಯಂತರ ಭೋಜಾನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Please follow and like us:

Leave a Reply