ಅ.೦೫ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

 ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಅ. ೦೫ ರಿಂದ ೧೩ ರವರೆಗೆ ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
  ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಉದ್ಘಾಟನೆ ಸಮಾರಂಭ ಸೆ.೦೫ ರಂದು ಸಾಯಂಕಾಲ ೬.೩೦ ಕ್ಕೆ ಜರುಗಲಿದೆ. ಉದ್ಘಾಟನೆಯನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ನೆರವೇರಿಸಲಿದ್ದಾರೆ. ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಂಸದ ಶಿವರಾಮಗೌಡ ಅವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ತಾ.ಪಂ. ಅಧ್ಯಕ್ಷ ದೇವಣ್ಣ ಭರಮಪ್ಪ ಮೇಕಾಳಿ, ತಾ.ಪಂ. ಸದಸ್ಯೆ ಸುಶೀಲಮ್ಮ ವೆಂಕಟೇಶ ವಡ್ಡರ್, ಹುಲಿಗಿ ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ, ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ವಿ.ಮಹೇಶ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪಾಲ್ಗೊಳ್ಳುವರು. 
ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಅಂಗವಾಗಿ ಅ.೦೫ ರಿಂದ ಅ.೧೩ ರವರೆಗೆ ಪ್ರತಿ ದಿನ ಸಂಜೆ ೬.೩೦ ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅ.೫ ರಂದು ಕೃಷ್ಣ ಕ್ಷತ್ರೀಯ ಲಕ್ಷ್ಮೇಶ್ವರ ಇವರಿಂದ ಮಂಗಲವಾದ್ಯ.  ಅ.೬ ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಅ.೭ ರಂದು ಶ್ರೀ ಗವಿಸಿದ್ದೇಶ್ವರ ಮಠ ಶ್ರೀ ಗುರುಪುಟ್ಟರಾಜ ಸಂಗೀತ ಸಾಧಕರ ಬಳಗದ ಶೃತಿ ಹ್ಯಾಟಿ ವೃಂದದಿಂದ ಸಂಗೀತ ಹಾಗೂ ಜೀವನ್‌ಸಾಬ್ ವಾಲಿಕಾರ ಬಿನ್ನಾಳ್ ಹಾಗೂ ಮಾರೇಶ್ ಅಗಳಕೇರಾ ತಂಡದವರಿಂದ ಜಾನಪದ ಗಾಯನ. ಅ.೮ ರಂದು ಎಂ.ವೆಂಕಟೇಶ್‌ಕುಮಾರ ಅಂತರಾಷ್ಟ್ರೀಯ ಕಲಾವಿದರು, ಧಾರವಾಡ ಇವರಿಂದ ಭಕ್ತಿ ಸಂಗೀತ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಶಾರ್ದೂಲವಾಹನ ಪೂಜೆ. ಅ.೯ ರಂದು ಪ್ರತಿಮಾ ಜಾಗಟೇಕರ್ ಶಿವಮೊಗ್ಗ ಇವರಿಂದ ಹರಿಕಥಾ ಕಾಲಕ್ಷೇಪ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀಯವರಿಗೆ ಸಿಂಹವಾಹನ ಪೂಜೆ. ಅ.೧೦ ರಂದು ಸವಿತಾ ಗೋಪಿಕೃಷ್ಣ ಹೆಗಡೆ ಕಲಾರ್ಪಣ ಸಂಸ್ಕೃತಿ ಅಕಾಡೆಮಿ ಧಾರವಾಡ ಇವರಿಂದ ನೃತ್ಯ ಪ್ರದರ್ಶನ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಮಯೂರವಾಹನ ಪೂಜೆ. ಅ.೧೧ ರಂದು   ಗಂಗಾವತಿ ಪ್ರಾಣೇಶ್ ಹಾಗೂ ತಂಡದವರಿಂದ ನಗೆಹಬ್ಬ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಅಶ್ವವಾಹನ ಪೂಜೆ. ಅ.೧೨ ರಂದು ಮಹಾಲಿಂಗಪುರದ ಕನ್ನಡ ಕಬೀರ, ಸೂಫಿಸಂತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಬ್ರಾಹೀಂ ಸುತಾರ ಹಾಗೂ ಸಂಗಡಿಗರಿಂದ ಭಾವೈಕ್ಯ ಭಕ್ತಿ ರಸಮಂಜರಿ ಆಧ್ಯಾತ್ಮ ಸಂವಾದ ತರಂಗಿಣಿ ಕಾರ್ಯಕ್ರಮ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಗಜವಾಹನ ಪೂಜೆ ಹಾಗೂ ಅ.೧೩ ರಂದು ಮಧ್ಯಾಹ್ನ ೩.೦೦ ಗಂಟೆಯಿಂದ ಶ್ರೀದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳುವುದು. ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ದಸರಾ ಮಹೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ.   ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾನೈವೇದ್ಯಗಳು ಜರುಗಲಿದೆ. ಹೊಸಪೇಟೆಯ ನಾಗಭೂಷಣಂ ಇವರು ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಜರುಗಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸುವಂತೆ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ   ಮನವಿ ಮಾಡಿದ್ದಾರೆ. 
Please follow and like us:
error