You are here
Home > Koppal News > ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ೦೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ೦೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕಳೆದ ಒಂದು ವರ್ಷದ ಹಿಂದೆ ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಬಳಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಶರಣಪ್ಪ ಎಂಬಾತನೆ ಶಿಕ್ಷೆಗೆ ಒಳಗಾದ ಆರೋಪಿ.  ಕಳೆದ ೨೦೧೪ ರ ಜನವರಿ ೦೩ ರಂದು ಲಿಂಗನಬಂಡಿ ಗ್ರಾಮದಿಂದ ಹಿರೇಅರಳಿಹಳ್ಳಿ ಗ್ರಾಮದ ಪ್ರೌಢಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಆರೋಪಿ ಶರಣಪ್ಪ, ತಾನು ಮದುವೆಯಾಗುವುದಾಗಿ ನಂಬಿಸಿ, ತನ್ನ ಟಂಟಂ ವಾಹನದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಊರುಗಳಿಗೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದ.  ಈ ಕುರಿತಂತೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ತನಿಖೆ ನಡೆಸಿದ ಯಲಬುರ್ಗಾ ಪಿಎಸ್‌ಐ ನಾಗರಾಜ ಕಮ್ಮಾರ ಅವರು  ನ್ಯಾಯಾಲಯಕ್ಕೆ ಆರೋಪಿ ವಿರುದ್ಧದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಎಸ್ ಸಪ್ಪನ್ನವರ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಕಲಂ ೩೬೩ ರ ಅಡಿ ಮಾಡಿದ ಅಪರಾಧಕ್ಕೆ ೩ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ೨ ಸಾವಿರ ರೂ. ದಂಡ.  ಕಲಂ ೩೬೬ ರಡಿ ಅಪರಾಧಕ್ಕಾಗಿ ೩ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ೨ ಸಾವಿರ ರೂ. ದಂಡ.  ಕಲಂ ೩೭೬ ರ ಅಡಿ ಮಾಡಿದ ಅಪರಾಧಕ್ಕೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೨ ಸಾವಿರ ರೂ. ದಂಡ. ಹಾಗೂ ಪೋಕ್ಸೊ ಕಾಯ್ದೆಯಡಿ ಮಾಡಿದ ಅಪರಾಧಕ್ಕೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.  ಕೊಪ್ಪಳದ ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕ ಸಿ.ಎಸ್. ಮುಟಗಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

Leave a Reply

Top