You are here
Home > Koppal News > ಸೆ. ೧೪ ಮತ್ತು ೧೫ ರಂದು ಮೈಸೂರಿನಲ್ಲಿ ೫ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಸೆ. ೧೪ ಮತ್ತು ೧೫ ರಂದು ಮೈಸೂರಿನಲ್ಲಿ ೫ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

 ಐದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಐತಿಹಾಸಿಕ ನಗರಿ ಮೈಸೂರಿನಲ್ಲಿ ಇದೇ ೧೪ ಮತ್ತು ೧೫ ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿ ಮಂಜುನಾಥ್ ಮತ್ತು ಜಿಲ್ಲಾಧ್ಯಕ್ಷ ಡಾ. ಹೆಚ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ದಲಿತ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಸಮ್ಮೇಳನವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸುವರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಪ್ರಖ್ಯಾತ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರು ಆಯ್ಕೆಯಾಗಿದ್ದಾರೆ. ಹೆಸರಾಂತ ಸಾಹಿತಿ ಡಾ. ಅರವಿಂದ ಮಾಲಗತ್ತಿ ಅವರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಮಾರೊಪ ಭಾಷಣ ಮಾಡಲಿದ್ದಾರೆ. 
ಎರಡು ದಿನದ ಈ ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಚಳುವಳಿ ಹಾಗೂ ಮೀಸಲಾತಿ, ದಲಿತ ಮಹಿಳಾ ಸಾಹಿತ್ಯ ಮತ್ತು ಬದುಕು ಹಾಗೂ ಬುಡಕಟ್ಟು ಜನಾಂಗದ ಬದುಕಿನ ಸವಾಲುಗಳು ಕುರಿತ ವಿಶೇಷ ಉಪನ್ಯಾಸ, ಸಂವಾದ ಗೋಷ್ಟಿಗಳು ಮತ್ತು ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕಾವ್ಯ-ಕುಂಚ-ಗೀತ ಗಾಯನ, ಸಾಧಕರಿಗೆ ಸನ್ಮಾನ, ಎರಡೂ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ. ೧೪ ರಂದು ಬೆಳಿಗ್ಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಸಮ್ಮೇಳನದಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳಿಂದ ದಲಿತ ಸಾಹಿತ್ಯ, ಸಂಸ್ಕೃತಿ ಚಿಂತನೆ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡ ಸಾವಿರಾರು ಪ್ರತಿನಿಧಿಗಳು  ಹಾಗೂ ಬುದ್ಧ-ಬಸವ-ಅಂಬೇಡ್ಕರ, ಲೋಹಿಯಾ ಅನುಯಾಯಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು.
ದಲಿತ ಸಾಹಿತ್ಯ ಸಂಸ್ಕೃತಿಯ ಅಧ್ಯಯನ, ಅವಲೋಕನ, ಪ್ರಕಟನೆಯ ಗುರಿ ಉದ್ದೇಶ ಇರಿಸಿಕೊಂಡು ೧೯೯೭ ಫೆಬ್ರುವರಿ ೨ ರಂದು ಗದಗದಲ್ಲಿ ಆರಂಭವಾದ ದಲಿತ ಸಾಹಿತ್ಯ ಪರಿಷತ್ತು, ೧೮ನೇ ವರ್ಷದಲ್ಲಿ ಮುನ್ನಡೆಯುತ್ತಿದೆ ಎಂದು ದಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿ. ಮಂಜುನಾಥ್  ಮತ್ತು ಜಿಲ್ಲಾಧ್ಯಕ್ಷ ಡಾ. ಹೆಚ್ ಕುಮಾರಸ್ವಾಮಿ  ತಿಳಿಸಿದ್ದಾರೆ.

Leave a Reply

Top